ಬೆಂಗಳೂರು: ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಎಸ್.ಹೊಸಮನಿ ಹೇಳಿದರು.
ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೇಖಕರು, ಪ್ರಕಾಶಕರು ಅಕ್ಷರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಶ್ರೀಸಾಮಾನ್ಯರ ವಿಶ್ವವಿದ್ಯಾಲಯ ಎಂದೇ ಗುರುತಿಸಲಾಗಿರುವ ಗ್ರಂಥಾಲಯಗಳನ್ನು ಉಳಿಸಿದ್ದು ಕೂಡ ಸಾಹಿತ್ಯವೇ ಆಗಿದೆ. ಸಾಹಿತ್ಯ ಪರಂಪರೆ ಉಳಿಸಿದವರು ಪ್ರಕಾಶಕರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ‘ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಪ್ರಕಾಶಕರೊಂದಿಗೆ ಸೇರಿ ‘ಪುಸ್ತಕ ಉತ್ಸವ’ ಮಾಡಬೇಕೆಂಬ ಯೋಜನೆ ಇದೆ’ ಎಂದು ಹೇಳಿದರು.
ಲೇಖಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ‘ಹಿಂದೆ ಲೇಖಕರು ಪ್ರಕಾಶಕರನ್ನು ಹುಡುಕುತ್ತಿದ್ದರು. ಈಗ ಪ್ರಕಾಶಕರೇ ಲೇಖಕರನ್ನು ಹುಡುಕುವ ಕಾಲ ಬಂದಿದೆ. ಇಬ್ಬರೂ ಸೇರಿ ಓದುಗರನ್ನು ಹುಡುಕಬೇಕಿದೆ’ ಎಂದರು.
ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಪ್ರಕಾಶ ಕಂಬತ್ತಳ್ಳಿ ಮಾತನಾಡಿ, ‘ಹಿಂದೆ ಪುಸ್ತಕಕ್ಕೆ ಪುಸ್ತಕಗಳೇ ಪೈಪೋಟಿ ಕೊಡುತ್ತಿದ್ದವು. ಈಗ ಕಾಲ ಬದಲಾಗಿದೆ. ಪುಸ್ತಕಗಳಿಗೆ ಸಾಮಾಜಿಕ ಜಾಲ ತಾಣಗಳು, ಒಟಿಟಿ, ಆನ್‌ಲೈನ್, ಇ-ಬುಕ್‌ಗಳು ಸ್ಪರ್ಧೆ ನೀಡುತ್ತಿವೆ. ಮತ್ತೆ ಪುಸ್ತಕ ಓದುವ ವೈಭವ ಮರುಕಳಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಸಾಗರದ ‘ರವೀಂದ್ರ ಪುಸ್ತಕಾಲಯ’ಕ್ಕೆ 2022ನೇ ಸಾಲಿನ ಹಾಗೂ ಬೆಂಗಳೂರಿನ ʻಛಂದ ಪುಸ್ತಕʼ ಸಂಸ್ಥೆಗೆ 2023ನೇ ಸಾಲಿನ ಅಂಕಿತ ಪುಸ್ತಕ ಪುರಸ್ಕಾರ ಪ್ರದಾನ ಮಾಡಲಾಯಿತು. ರವೀಂದ್ರ ಪುಸ್ತಕಾಲಯದ ಯಲ್ಲಪ್ಪ ಅಪ್ಪಾಜಿರಾವ್ ದಂತಿ, ಛಂದ ಪುಸ್ತಕ ಸಂಸ್ಥೆಯ ವಸುಧೇಂದ್ರ ಅಬಿಪ್ರಾಯ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.