ಮಂಗಳವಾರ, ಸೆಪ್ಟೆಂಬರ್ 22, 2020
21 °C
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಜಾಲತಾಣ ಮನರಂಜನಾ ನೀತಿ ರೂಪಿಸಲು ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯೂಟ್ಯೂಬ್, ನೆಟ್‌ಫ್ಲೆಕ್ಸ್‌, ಹಾಟ್‌ಸ್ಟಾರ್ ಮತ್ತಿತರ ಕಂಪನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಚಲನಚಿತ್ರ, ಕಿರುಚಿತ್ರ, ಧಾರಾವಾಹಿ ಇನ್ನಿತರ ಮಲ್ಟಿ ಮೀಡಿಯಾ ವಿಡಿಯೋಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಪದ್ಮನಾಭ ಶಂಕರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.

ನೆಟ್‌ಫ್ಲೆಕ್ಸ್‌ ಎಂಟರ್‌ಟೇನ್‌ಮೆಂಟ್ ಸರ್ವೀಸಸ್, ಯೂಟ್ಯೂಬ್ ಗೂಗಲ್ ಇಂಡಿಯಾ, ಹಾಟ್ ಸ್ಟಾರ್ ಇಂಡಿಯಾ, ಅಮೆಜಾನ್ ಪ್ರೈಮ್, ಅಮೆಜಾನ್ ಡೆವಲಪ್‌ಮೆಂಟ್ ಸೆಂಟರ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಆಲ್ಟ್ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಕಂಪನಿಗಳು ಪ್ರದರ್ಶಿಸುವ ಚಿತ್ರಗಳನ್ನು ನಿಯಂತ್ರಣಕ್ಕೆ ಮನವಿ ಮಾಡಿ ಅರ್ಜಿ ಸಲ್ಲಿಸಲಾಗಿತ್ತು.

ಈ ಕಂಪನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಅದನ್ನು ಸಿನಿಮಾಟ್ರೋಗ್ರಫಿ ಕಾಯ್ದೆ-1952ರ ಸೆಕ್ಷನ್ 2(ಸಿ) ಅಡಿಗೆ ತರಬೇಕು ಅಥವಾ ಅವುಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಶಾಸನ ರೂಪಿಸುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಇವುಗಳಿಗೆ ಸಿನಿಮಾಟೋಗ್ರಫಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿತ್ತು.

ಅಲ್ಲದೆ, ನಿರ್ದಿಷ್ಟ ರೂಪದ ಶಾಸನ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. ಈ ಮಧ್ಯೆ ಯಾವುದೇ ಸೆನ್ಸಾರ್‌ಗೆ ಒಳಗಾಗದೆ ವಿಡಿಯೋ ಪ್ರಸಾರ ಮಾಡುವುದು ಗಂಭೀರ ವಿಚಾರವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವನ್ನು ನ್ಯಾಯಾಲಯ  ವ್ಯಕ್ತಪಡಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು