ಶುಕ್ರವಾರ, ಜನವರಿ 17, 2020
22 °C
ವಿಶ್ವದ ಶ್ರೇಷ್ಠ ಹೃದಯ ಕೇಂದ್ರ: ಯುರೋಪಿನ ಹಾರ್ಟ್ ಜರ್ನಲ್

‘ಜಯದೇವ’ಕ್ಕೆ ವಿಶೇಷ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ‘ವಿಶ್ವದ ಶ್ರೇಷ್ಠ ಹೃದಯ ಕೇಂದ್ರ’ ಎಂಬ ಗೌರವಕ್ಕೆ ಭಾಜನವಾಗಿದೆ. 

ಸಂಸ್ಥೆಯಲ್ಲಿ ನಿತ್ಯ ಸರಾಸರಿ 1,500 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹೊರರಾಜ್ಯಗಳ ರೋಗಿಗಳೂ ಇಲ್ಲಿ ಚಿಕಿತ್ಸೆ ‍ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ‌. ಸಂಸ್ಥೆಯ ಸಾಧನೆಯನ್ನು ಗುರುತಿಸಿರುವ ಯುರೋಪಿನ ಹಾರ್ಟ್ ಜರ್ನಲ್, ತನ್ನ ಸೆಪ್ಟೆಂಬರ್ ಸಂಚಿಕೆಯಲ್ಲಿ ಸಂಸ್ಥೆಯ ಬಗ್ಗೆ ವರದಿ ಪ್ರಕಟಿಸಿ ‘ಕಾರ್ಡಿಯಾಕ್ ಸೆಂಟರ್ ಆಫ್ ಎಕ್ಸಲೆನ್ಸ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. 

‘ಸಂಸ್ಥೆಯಲ್ಲಿ ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಅತ್ಯಾಧುನಿಕ ಹೃದಯ ಆರೈಕೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

10 ವರ್ಷದ ಹಿಂದೆ ಅಮೆರಿಕದ ಪ್ರಜೆಯೊಬ್ಬರು ಸಂಸ್ಥೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದಿದ್ದರು. ಚಿಕಿತ್ಸಾ ಶುಲ್ಕವಾಗಿ ₹92 ಪಾವತಿಸಿದ್ದರು. ಬಳಿಕ ಅವರು ಇಲ್ಲಿನ ಅಗ್ಗದ ದರದ ಚಿಕಿತ್ಸಾ ವಿಧಾನದ ಬಗ್ಗೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರಿಗೆ ಪತ್ರದ ಮೂಲಕ ವಿವರಿಸಿದ್ದರು.

ಬಳಿಕ ಒಬಾಮಾ ಅವರು ಸಂಸ್ಥೆಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ದೇಶಕ್ಕೇ ಗೌರವ: ‘ಯುರೋಪಿಯನ್ ಹಾರ್ಟ್‌ ಜರ್ನಲ್ ನಮ್ಮ ಸಂಸ್ಥೆಯನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿರುವುದು ದೇಶಕ್ಕೇ ಗೌರವ. ಅಂತರರಾಷ್ಟ್ರೀಯ ಜರ್ನಲ್‌ವೊಂದರಲ್ಲಿ ಇದೇ ಮೊದಲ ಬಾರಿ ದೇಶದ ಆರೋಗ್ಯ ಸಂಸ್ಥೆಯ ಸಾಧನೆಯನ್ನು ಅನಾವರಣ ಮಾಡಲಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. 

ಹಾಸಿಗೆ ಸಾಮರ್ಥ್ಯ ಹೆಚ್ಚಳ: ‘ಮುಂದಿನ ದಿನಗಳಲ್ಲಿ ಬೆಂಗ ಳೂರು ಮತ್ತು ಕಲಬುರ್ಗಿ ಕೇಂದ್ರದ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳ ಮಾಡಲಾಗುವುದು. ಇನ್ಫೊಸಿಸ್ ಪ್ರತಿಷ್ಠಾನವು 300 ಹಾಸಿಗೆ ಸಾಮರ್ಥ್ಯದ ಕಟ್ಟಡವನ್ನು ನಿರ್ಮಿಸಿಕೊಡುತ್ತಿದೆ’ ಎಂದರು. 

*
2018ರಲ್ಲಿ 10 ಸಾವಿರ ಆಂಜಿಯೋ ಪ್ಲ್ಯಾಸ್ಟಿ ಮಾಡುವ ಮೂಲಕ ಹೊಸ ದಾಖಲೆ ಮಾಡಲಾಗಿದೆ. ನಿತ್ಯ ಸರಾಸರಿ 15 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗುತ್ತಿದೆ.
-ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು