ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಬೆಂಗಳೂರಿನಲ್ಲಿ ಪ್ರತ್ಯೇಕ ಆಸ್ಪತ್ರೆ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ
Last Updated 12 ಮಾರ್ಚ್ 2020, 23:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕು ಶಂಕಿತರಿಗೆ ಹಾಗೂಕೋವಿಡ್‌–19 ಪೀಡಿತರಿಗೆ ಚಿಕಿತ್ಸೆ ನೀಡಲು ನಗರದಲ್ಲಿ 300ರಿಂದ 400 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆಯನ್ನು ಮೀಸಲಿಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಗರದಲ್ಲಿ 5 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.ಇಬ್ಬರು ಟೆಕ್ಕಿಗಳು, ಮಹಿಳೆ ಮತ್ತು ಬಾಲಕನಿಗೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ‌ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಒಬ್ಬ ಟೆಕ್ಕಿಗೆ ಮಧುಮೇಹ ಸಮಸ್ಯೆ ಇದೆ. ವಿವಿಧ ಆಸ್ಪತ್ರೆಗಳಲ್ಲಿ ಸೋಂಕು ಶಂಕಿತರಿಗೆ ಚಿಕಿತ್ಸೆ ಒದಗಿಸಲು ಪ್ರತ್ಯೇಕ ವಾರ್ಡ್‌ಗಳಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈಗ ಪ್ರತ್ಯೇಕ ಆಸ್ಪತ್ರೆಯನ್ನೇ ಆರಂಭಿಸುವ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚಿಸಿದ್ದೇನೆ. ತಜ್ಞ ವೈದ್ಯರನ್ನು ಅಲ್ಲಿ ನೇಮಿಸಲಾಗುತ್ತದೆ.ಈ ಬಗ್ಗೆ ಶುಕ್ರವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಹನಿಮೂನ್‌ಗೆ ಹೋಗಿದ್ದ ವ್ಯಕ್ತಿ:‘23 ವರ್ಷದ ವ್ಯಕ್ತಿ ವಿವಾಹದ ಬಳಿಕ ಗ್ರೀಸ್‌ಗೆ ಹನಿಮೂನ್‌ಗೆ ಹೋಗಿದ್ದರು. ಮುಂಬೈಗೆ ವಾಪಸ್‌ ಆದ ಬಳಿಕ ಅವರುಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಅವರ ಪತ್ನಿಆಗ್ರಾಕ್ಕೆ ಹೋಗಿದ್ದರು. ಕುಟುಂಬದ ಸದಸ್ಯರು ಮುಂಬೈನಲ್ಲಿಯೇ ನೆಲೆಸಿದ್ದಾರೆ. ನಗರದಲ್ಲಿ ಆಟೊ ರಿಕ್ಷಾದಲ್ಲಿ ಅವರು ಸಂಚರಿಸಿದ್ದರು. ಹಾಗಾಗಿ ಆಟೊ ರಿಕ್ಷಾ ಚಾಲಕನನ್ನು ಪತ್ತೆ ಮಾಡಿ, ತಪಾಸಣೆಗೆ ಒಳಪಡಿಸಲಾಗಿದೆ. ಅವರು ಕೆಲಸ ಮಾಡುತ್ತಿದ್ದಕಚೇರಿಯಲ್ಲಿ 154 ಮಂದಿಯಿದ್ದು, 4 ಮಂದಿ ಸಂಪರ್ಕ ಹೊಂದಿದ್ದರು.ಗ್ರೀಸ್‌ನಿಂದ ಬಂದ ಬಳಿಕ ಅವರು ಯಾರನ್ನೆಲ್ಲ ಭೇಟಿ ಮಾಡಿದ್ದಾರೆ ಎನ್ನುವುದನ್ನು ಗುರುತಿಸಲಾಗುತ್ತಿದೆ’ ಎಂದರು.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಮಾತನಾಡಿ, ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆಸ್ಪತ್ರೆಯ ಖರ್ಚುಗಳನ್ನು ಭರಿಸಲು ಕ್ರಮ ಕೈಗೊಳ್ಳಲಾಗಿದೆ.ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಲಾಗುತ್ತದೆ. ಪ್ರಾರಂಭದಲ್ಲಿಯೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ 14 ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಕೆಲ ಪ್ರಕರಣಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗುತ್ತಿಲ್ಲ’ ಎಂದು ತಿಳಿಸಿದರು.

‘ವಿಮಾನಗಳ ಮೂಲಕ ಮಾದರಿ ರವಾನೆ’
‘ಸೋಂಕು ಶಂಕಿತರ ರಕ್ತ ಹಾಗೂ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ವಿಮಾನದ ಮೂಲಕ ರವಾನೆ ಮಾಡಲು ಕ್ರಮಕೈಗೊಳ್ಳಲಾಗುವುದು. ಕೆಲ ಕೊರಿಯರ್ ಏಜೆನ್ಸಿಗಳನ್ನು ಗುರುತಿಸುತ್ತಿದ್ದೇವೆ’ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

18 ಶಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
‘ಕೊರೊನಾ ಸೋಂಕು ಶಂಕಿತ 18 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲೇ 10 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ನಗರದ ಬೌರಿಂಗ್‍ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ತಲಾ ಒಬ್ಬರು, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 3 ಹಾಗೂ ಬಳ್ಳಾರಿಯಲ್ಲಿ ಒಬ್ಬರು ದಾಖಲಾಗಿದ್ದಾರೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಗುರುವಾರ ಒಂದೇ ದಿನ 78 ಮಂದಿ ನಿಗಾ ವ್ಯವಸ್ಥೆಯಡಿ ನೋಂದಣಿಯಾಗಿದ್ದಾರೆ. ಇವರಲ್ಲಿ 60 ಮಂದಿಯನ್ನು ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 18 ಮಂದಿ ಆಸ್ಪತ್ರೆಯಲ್ಲಿದ್ದಾರೆ. ನಿಗಾದಲ್ಲಿರುವ ಎಲ್ಲರಿಗೂ ಆರೋಗ್ಯ ಇಲಾಖೆ ವೈದ್ಯಕೀಯ ಸಿಬ್ಬಂದಿ ನಿತ್ಯ ಕರೆ ಮಾಡಿ ಆಪ್ತಸಮಾಲೋಚನೆ ನಡೆಸುತ್ತಿದ್ದಾರೆ.

ಐಟಿ-ಬಿಟಿ ಕಂಪನಿಗಳಿಗೆ ಸೂಚನೆ
ಐಟಿ-ಬಿಟಿ ಸೇರಿದಂತೆ ವಿವಿಧಕಂಪನಿಗಳು ಫೆ. 21ರ ಬಳಿಕ ವಿದೇಶಿ ಪ್ರವಾಸಕ್ಕೆ ತೆರಳಿರುವ ತಮ್ಮ ಉದ್ಯೋಗಿಗಳು ಹಾಗೂ ಅವರ ಪ್ರವಾಸದ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ನಗರದ 100 ಕಂಪನಿಗಳ 300ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಗುರುವಾರ ಮೊದಲ ಹಂತದ ಸಭೆ ನಡೆಸಿದ ಇಲಾಖೆಯ ಅಧಿಕಾರಿಗಳು, ‘ಸೋಂಕು ಪ್ರಕರಣ ವರದಿಯಾದ ದೇಶಗಳಿಗೆ ತೆರಳಿರುವ ಹಾಗೂ ಇತ್ತೀಚೆಗೆ ಹೋಗಿ ಬಂದಿರುವ ಉದ್ಯೋಗಿಗಳ ವಿವರಗಳನ್ನು ನೀಡಬೇಕು. ಮುಂದಿನ ಸೂಚನೆ ನೀಡುವವರೆಗೂ ಕೆಲಸದ ನಿಮಿತ್ತ ವಿದೇಶಗಳಿಗೆ ಯಾರನ್ನು ಕಳುಹಿಸಬಾರದು. ಯಾವುದೇ ಸಭೆ, ಸಮಾವೇಶಗಳನ್ನೂ ನಡೆಸಬಾರದು. ಕಚೇರಿಯಲ್ಲಿ ಯಾವುದೇ ಸೋಂಕಿತರು ಹಾಗೂ ಶಂಕಿತರಿದ್ದಲ್ಲಿ ಅವರಿಗೆ ರಜೆ ನೀಡಿ, ಇಲಾಖೆ ಮಾಹಿತಿ ಒದಗಿಸಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT