ಮಹಾಲಕ್ಷ್ಮಿ ಲೇಔಟ್, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು: ಐಐಎಸ್‌ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ನಗರದಲ್ಲಿ ರಾಜಕಾಲುವೆಗಳನ್ನು ಪುನರ್‌ನಿರ್ಮಾಣ ಮಾಡಲಾಗುತ್ತದೆ. ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ‘ವಿಶೇಷ ಮಾಸ್ಟರ್ ಪ್ಲಾನ್’ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಹಾಲಕ್ಷ್ಮಿ ಲೇಔಟ್, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಸ ರಸ್ತೆಗಳು, ಮೂರು ರೀತಿಯ ಚರಂಡಿ ವ್ಯವಸ್ಥೆಗಳಿಗೆ ಅನುದಾನ ನೀಡಲಾಗಿದೆ. ಒಳಚರಂಡಿ ನೀರು ಬೆಂಗಳೂರಿನಿಂದ ಆಚೆಗೆ ಹೋಗಲು ಇದ್ದ ಕೆಲವು ಅಡೆತಡೆಗಳ ನಿವಾರಣೆಗೆ ತಾಂತ್ರಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆಯಿಂದ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ₹2 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ರಾಜಕಾಲುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರದಲ್ಲಿ ವಾಹನ ದಟ್ಟಣೆ ಎರಡು ತಿಂಗಳಿಂದ ಕಡಿಮೆಯಾಗಿದೆ. ಸಂಚಾರ ಪೊಲೀಸ್ ವಿಭಾಗಕ್ಕೆ ವಿಶೇಷ ಕಮಿಷನರ್ ನೇಮಿಸಿ, ವಿಶೇಷ ಕ್ರಮಗಳನ್ನು ಕೈಗೊಂಡಿರುವುದು ಇದಕ್ಕೆ ಕಾರಣ ಎಂದು ಹೇಳಿದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ, ಬಿಬಿಎಂಪಿ ರೆಫರಲ್ ಆಸ್ಪತ್ರೆ ಕಟ್ಟಡ, ಬಿಬಿಎಂಪಿ ಪ್ರೌಢಶಾಲೆ ಹಾಗೂ ಕಾಲೇಜು ಕಟ್ಟಡ, ಕರ್ನಾಟಕ ಪಬ್ಲಿಕ್ ಶಾಲೆ, ನವ ನಂದಿನಿ ಉದ್ಯಾನ ಹಾಗೂ ರಾಣಿ ಅಬ್ಬಕ್ಕ ಆಟದ ಮೈದಾನವನ್ನು ಬೊಮ್ಮಾಯಿ ಉದ್ಘಾಟಿಸಿದರು. ಅಬಕಾರಿ ಇಲಾಖೆ ಸಚಿವ ಗೋಪಾಲಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ.ಸುಧಾಕರ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.
ಪದ್ಮನಾಭನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಅಶೋಕಸ್ತಂಭ ಉದ್ಯಾನ, ಗುರುಶಂಕರ ಉದ್ಯಾನ, ಹನುಮಾನ್ ಚಾಲಿಸ ಕ್ರೀಡಾಂಗಣ, ದೋಭಿಘಾಟ್‌ನಲ್ಲಿ ವಸತಿ ಸಮುಚ್ಚಯದ 28 ಮನೆಗಳು ಹಾಗೂ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಕಂದಾಯ ಇಲಾಖೆ ಸಚಿವ ಆರ್. ಅಶೋಕ, ಶಾಸಕರಾದ ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಕೃಷ್ಣಪ್ಪ, ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿಸೂರ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.