ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಗಸ್ಟ್ 20ರಿಂದ ಅಕ್ಟೋಬರ್ 18ರವರೆಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ 2025ರ ಜನವರಿ 6ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಬೇಕಿರುವುದರಿಂದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಪರಿಷ್ಕರಣೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಅರ್ಹರು ಈ ಸಮಯದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವುದು, ಮರು ಹೊಂದಾಣಿಕೆ, ಮತದಾರರ ಪಟ್ಟಿ ಅಥವಾ ಗುರುತಿನ ಚೀಟಿಗಳಲ್ಲಿರುವ ದೋಷ ಸರಿಪಡಿಸಿವುದು, ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸುವುದು, ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು, ನ್ಯೂನತೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದು, ನಿಯಂತ್ರಣ ಕೋಷ್ಟಕದ (ಕಂಟ್ರೋಲ್ ಟೇಬಲ್) ನವೀಕರಣ ಈ ಸಂದರ್ಭದಲ್ಲಿ ನಡೆಯಲಿದೆ.
ಅಕ್ಟೋಬರ್ 19ರಿಂದ 28ರವರೆಗೆ ನಮೂನೆ 1ರಿಂದ 8ರ ತಯಾರಿ, ಸಮಗ್ರ ಕರಡು ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅಕ್ಟೋಬರ್ 29ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ನವೆಂಬರ್ 28ರ ಒಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 24ರ ಒಳಗೆ ಆಕ್ಷೇಪಣೆ ವಿಲೇವಾರಿ ಮಾಡಲಾಗುತ್ತದೆ.
2025ರ ಜನವರಿ 1ರ ಒಳಗೆ ಮತದಾರರ ಪಟ್ಟಿಯ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ. ಅಂತಿಮ ಪ್ರಕಟಣೆಗಾಗಿ ಆಯೋಗದ ಅನುಮತಿಯನ್ನು ಪಡೆಯುವುದು ಮತ್ತು ದತ್ತಾಂಶವನ್ನು ನವೀಕರಿಸುವುದು ಮತ್ತು ಪೂರಕಗಳ ಮುದ್ರಣ ಮಾಡುವುದು ಈ ಸಮಯದಲ್ಲಿ ನಡೆಯಲಿದೆ. ಜ.6ರಂದು ಅಂತಿಮ ಪಟ್ಟಿ ಪ್ರಕಟಣೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.