ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ‘ಡಿಜಿಟಲ್‌ ಮೀಟರ್‌’ ಅಳವಡಿಕೆಗೆ ವೇಗ

Published 3 ಜೂನ್ 2023, 21:35 IST
Last Updated 3 ಜೂನ್ 2023, 21:35 IST
ಅಕ್ಷರ ಗಾತ್ರ

–ಆದಿತ್ಯ ಕೆ.ಎ

ಬೆಂಗಳೂರು: ವಿದ್ಯುತ್‌ ಸೋರಿಕೆ ತಡೆ ಹಾಗೂ ಗ್ರಾಹಕರು ಬಳಸಿದ ವಿದ್ಯುತ್ ಮಾಹಿತಿಯನ್ನು ನಿಖರವಾಗಿ ಅಳೆಯಲು ‘ಡಿಜಿಟಲ್‌ ಮೀಟರ್‌‘ ಅಳವಡಿಕೆ ಮಾಡುತ್ತಿರುವ ಬೆಸ್ಕಾಂ, ಬೆಂಗಳೂರಿನಲ್ಲಿ ಇದುವರೆಗೆ 13.97 ಲಕ್ಷ ಮೀಟರ್ ಅಳವಡಿಸಿದೆ.

ಬೆಂಗಳೂರಿನಲ್ಲಿ ‘ಡಿಜಿಟಲ್‌ ಮೀಟರ್’ ಅಳವಡಿಕೆ ಮುಕ್ತಾಯವಾದ ಕೂಡಲೇ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ವಲಯದಲ್ಲೂ ಈ ಮೀಟರ್‌ ಅಳವಡಿಕೆ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ವರ್ಷದ ಜುಲೈನಿಂದ ಡಿಜಿಟಲ್‌ ಮೀಟರ್‌  ಉಚಿತವಾಗಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ನಗರದ ನಾಲ್ಕೂ ವಿಭಾಗಗಳಲ್ಲೂ ಬಾಕಿಯಿರುವ ಮೀಟರ್‌ ಅಳವಡಿಕೆ ಕಾರ್ಯವನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸುವ ಲೆಕ್ಕಾಚಾರದಲ್ಲಿ ಬೆಸ್ಕಾಂ ಇದೆ. ಕೆಲಸವನ್ನೂ ಚುರುಕುಗೊಳಿಸಿದೆ.

ನಗರದಲ್ಲಿ ಒಟ್ಟು 58,77,000 ಎಲ್‌.ಟಿ ವಿದ್ಯುತ್‌ ಮಾಪಕಗಳಿವೆ. ಕಳೆದ ವರ್ಷ ನಡೆಸಿದ್ದ ಸಮೀಕ್ಷೆಯಂತೆ 17,90,882 ‘ಎಲೆಕ್ಟ್ರೊ ಮೆಕಾನಿಕಲ್‌’ ಮೀಟರ್‌ಗಳಿದ್ದವು. ನಿಖರವಾಗಿ ಮೀಟರ್‌ ರೀಡಿಂಗ್‌ ತಿಳಿಯಲು ಅವುಗಳನ್ನು ಡಿಜಿಟಲ್‌ ಮಾಪಕಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

ಮೇ 24ರ ವೇಳೆಗೆ 13,97,204 ‘ಡಿಜಿಟಲ್‌ ಮೀಟರ್’ ಅಳವಡಿಕೆ ಕೆಲಸ ಪೂರ್ಣವಾಗಿದೆ. ಕೆಲವೇ ತಿಂಗಳಲ್ಲಿ ಬಾಕಿಯಿರುವ 3,93,678 ಡಿಜಿಟಲ್‌ ಮೀಟರ್‌ ಅಳವಡಿಕೆ ಪೂರ್ಣಗೊಳಿಸುತ್ತೇವೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಡಿಜಿಟಲ್‌ ಮೀಟರ್‌ ಅಳವಡಿಕೆಯಿಂದ ವಿದ್ಯುತ್‌ ಶುಲ್ಕದಲ್ಲಿ ಹಿಂದೆ ಉಂಟಾಗುತ್ತಿದ್ದ ಪ್ರಮಾದಗಳು ತಪ್ಪಲಿವೆ. ಗ್ರಾಹಕರು ಬಳಸುವ ಸಣ್ಣ ಪ್ರಮಾಣದ ವಿದ್ಯುತ್‌ ಕೂಡ ಲೆಕ್ಕಕ್ಕೆ ಸಿಗಲಿದೆ. ವಿದ್ಯುತ್‌ ಬಿಲ್‌ನಲ್ಲಿ ಹಿಂದಿಗಿಂತ ಸ್ವಲ್ಪ ಹೆಚ್ಚಳ ಕಂಡು ಬಂದಿದೆ. ಹಿಂದಿನ ಮೀಟರ್‌ಗಳಿಂದ ಹಣ ಸೋರಿಕೆ ಆಗುತ್ತಿತ್ತು. ಕೆಲವೊಮ್ಮೆ ಮೀಟರ್‌ ಬಗ್ಗೆಯೂ ದೂರು ಬರುತ್ತಿದ್ದವು. ಆ ದೂರು ನಿವಾರಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

‘ಡಿಜಿಟಲ್‌ ಮೀಟರ್‌ನಿಂದ ಎರಡು ವರ್ಷಗಳ ತನಕ ಬಳಸಿರುವ ವಿದ್ಯುತ್‌ ಬಳಕೆ ಹಾಗೂ ಪಾವತಿಸಿರುವ ಶುಲ್ಕದ ಮೊತ್ತವೂ ಸಿಗಲಿದೆ. ಅಲ್ಲದೇ ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ವಿದ್ಯುತ್‌ ಉಚಿತ ಯೋಜನೆಗೆ ಹಿಂದಿನ ಮೀಟರ್‌ ಅಳೆಯುವ ಲೆಕ್ಕಾಚಾರಕ್ಕೂ ನೆರವಾಗಲಿವೆ’ ಎಂದು ಸಿಬ್ಬಂದಿ ಹೇಳುತ್ತಾರೆ.

10 ವರ್ಷಗಳ ಹಿಂದೆ ಅಳವಡಿಸಿದ್ದ ‘ಎಲೆಕ್ಟ್ರೋ ಮೆಕಾನಿಕಲ್ ಮೀಟರ್’ ಅನ್ನು ಡಿಜಿಟಲ್ ಮೀಟರ್‌ಗೆ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ₹ 139 ಕೋಟಿ ವೆಚ್ಚ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ ₹ 934 ಹಾಗೂ ತ್ರಿ–ಫೇಸ್ ಮೀಟರ್‌ಗೆ ₹ 2,312 ವೆಚ್ಚವನ್ನು ಬೆಸ್ಕಾಂ ಭರಿಸುತ್ತಿದೆ.

‘ಸದ್ಯದಲ್ಲೇ ಟೆಂಡರ್‌

ಬೆಸ್ಕಾಂ ವ್ಯಾಪ್ತಿಗೆ 8 ಜಿಲ್ಲೆಗಳು ಸೇರುತ್ತವೆ. ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ–ದಾವಣಗೆರೆ ಪ್ರದೇಶ ವಲಯದಲ್ಲಿ ಡಿಜಿಟಲ್ ಮೀಟರ್‌ ಅಳವಡಿಕೆಗೆ ಬೋರ್ಡ್‌ ಸಭೆಯಲ್ಲಿ ಅನುಮತಿ ಪಡೆದು ಸದ್ಯದಲ್ಲೇ ಟೆಂಡರ್‌ ಆಹ್ವಾನಿಸಲಾಗುವುದು. ಇದಕ್ಕೆ ಸಿದ್ಧತೆ ನಡೆದಿದೆ.– ಮಹಾಂತೇಶ್‌ ಬೀಳಗಿ ವ್ಯವಸ್ಥಾಪಕ ನಿರ್ದೇಶಕ ಬೆಸ್ಕಾಂ

ಮಹಾಂತೇಶ್ ಬೀಳಗಿ
ಮಹಾಂತೇಶ್ ಬೀಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT