ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ಬೈಕ್ ಆಂಧ್ರದಲ್ಲಿ ಮಾರಾಟ; 16 ದ್ವಿಚಕ್ರ ವಾಹನ ಜಪ್ತಿ

ಶ್ರೀರಾಮಪುರ ಪೊಲೀಸರಿಂದ ನಾಲ್ವರ ಬಂಧನ;
Last Updated 28 ಜೂನ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೈಕ್‌ಗಳನ್ನು ಕದ್ದು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರದ ಯಾಸಿನ್ ಅಲಿಯಾಸ್ ಯಾಸರ್ ರೆಹಮಾನ್ (20), ಆರ್‌.ಟಿ.ನಗರದ ನಿಖಿಲ್ (19), ನಾಸೀರ್ (19) ಹಾಗೂ ಆಂಧ್ರಪ್ರದೇಶದ ಆರೀಫ್‌ ಉಲ್ಲಾಖಾನ್ (20) ಬಂಧಿತರು. ಆರೋಪಿಗಳಿಂದ ₹ 8 ಲಕ್ಷ ಮೊತ್ತದ 16 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

‘ದೂರುದಾರ ಜಿ. ರಾಜೇಶ್ ಎಂಬುವರುಶ್ರೀರಾಮಪುರ ಮೆಟ್ರೊ ನಿಲ್ದಾಣದ ಸಮೀಪದಲ್ಲಿ ಜನವರಿ 18ರಂದು ಬೆಳಿಗ್ಗೆ ತಮ್ಮ ಬೈಕ್‌ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಅವರು ಸಂಜೆ ವಾಪಸ್ ಬರುವಷ್ಟರಲ್ಲಿ ಬೈಕ್ ಕಳವಾಗಿತ್ತು. ಆ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಯಾಸಿನ್, ಈ ಹಿಂದೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕದ್ದು ಸಿಕ್ಕಿಬಿದ್ದಿದ್ದ. ಶ್ರೀರಾಮಪುರ ಮೆಟ್ರೊ ನಿಲ್ದಾಣದ ಬಳಿ ಬೈಕ್ ಕಳುವಾಗಿದ್ದ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಆತನ ಸುಳಿವು ಸಿಕ್ಕಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ಉಳಿದ ಆರೋಪಿಗಳ ಹೆಸರನ್ನು ಬಾಯ್ಬಿಟ್ಟ’ ಎಂದು ತಿಳಿಸಿದರು.

ಸಂಬಂಧಿಕರ ಮನೆಗೆ ಬಂದು ಸ್ನೇಹಿತನಾದ: ‘ಆಂಧ್ರಪ್ರದೇಶ ಹಿಂದೂಪುರದ ಆರೀಫ್‌, ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ. ಆತನಿಗೂ ಇತರ ಆರೋಪಿಗಳಿಗೂ ಪರಿಚಯವಾಗಿ ಸ್ನೇಹವಾಗಿತ್ತು. ಕದ್ದ ಬೈಕ್‌ಗಳನ್ನು ಆರೀಫ್‌ನೇ ₹5 ಸಾವಿರದಿಂದ ₹10 ಸಾವಿರಕ್ಕೆ ಹಿಂದೂಪುರದಲ್ಲಿ ಮಾರಾಟ ಮಾಡಿದ್ದ. ಕೆಲ ಬೈಕ್‌ಗಳನ್ನು ಆರೋಪಿಗಳು ಬೆಂಗಳೂರಿನಲ್ಲೂ ಮಾರಾಟ ಮಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡಿದ್ದ ಯಾಸಿನ್, ಅವರ ಸಹಾಯ ಪಡೆದು ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಮುರಿದು ಕಳವು ಮಾಡುತ್ತಿದ್ದ. ಕದ್ದ ಬೈಕ್‌ಗಳ ಮಾರಾಟದಿಂದ ಬಂದ ಹಣವನ್ನು ಹಂಚಿಕೊಂಡು ಆರೋಪಿಗಳು ಮೋಜು–ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ರಾಜಾಜಿನಗರ, ಕಲಾಸಿಪಾಳ್ಯ, ಚಿಕ್ಕಬಳ್ಳಾಪುರ, ವಿಜಯನಗರ, ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್‌ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT