ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು, ಕುಡಿತದಿಂದ ದೂರವಿರಿ: ಸುಭಾಷ್‌ ಭರಣಿ

Published 27 ಮಾರ್ಚ್ 2024, 16:09 IST
Last Updated 27 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತ ಸಮುದಾಯವು ದೇವರು ಮತ್ತು ಕುಡಿತದಿಂದ ದೂರ ಇರದೇ ಹೋದರೆ ಉದ್ದಾರವಾಗಲ್ಲ‘ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸುಭಾಷ್‌ ಭರಣಿ ತಿಳಿಸಿದರು.

ಬುಧವಾರ ನಗರದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯನ್ನು (ಕೆಆರ್‌ಎಸ್‌) ಉದ್ಘಾಟಿಸಿ ಅವರು ಮಾತನಾಡಿದರು.

‘ದೇವರು ಎಂಬುದು ಮನುಷ್ಯರ ಸೃಷ್ಟಿ. ಅದುವೇ ವೈದಿಕರ ಬಂಡವಾಳ. ದಲಿತರು ವಿದ್ಯೆ ಪಡೆದು ನೌಕರಿ ಹಿಡಿದಾಗ ನವ ವೈದಿಕರಾಗುತ್ತಿರುವುದು ನೋವಿನ ಸಂಗತಿ. ಕೆಲವು ದಶಕಗಳ ಹಿಂದಿನವರೆಗೆ ಮಗುವಿಗೆ ಜಾತಕ ಬರೆಸುವ ಪದ್ಧತಿ ನಮ್ಮಲ್ಲಿರಲಿಲ್ಲ. ಮದುವೆಗೆ ಜಾತಕ ನೋಡುವುದೂ ಇರಲಿಲ್ಲ. ಹುಡುಗ, ಹುಡುಗಿಯ ಮನೆಯಲ್ಲಿ ಒಪ್ಪಿಗೆಯಾದರೆ ಸಾಕಿತ್ತು. ಈಗ ಹುಟ್ಟಿನಿಂದ ಸಾವಿನವರೆಗೆ ಎಲ್ಲದಕ್ಕೂ ಜ್ಯೋತಿಷ್ಯವನ್ನು ಅವಲಂಬಿಸುವ ಸ್ಥಿತಿಗೆ ಬಂದಿರುವುದು ದುರಂತ’ ಎಂದು ವಿಶ್ಲೇಷಿಸಿದರು.

ತಿರುಪತಿ, ಧರ್ಮಸ್ಥಳ, ತಮಿಳುನಾಡಿನ ಓಂಶಕ್ತಿಗೆಲ್ಲ ಹೋಗುವುದು ಜಾಸ್ತಿಯಾಗಿದೆ. ಇತ್ತೀಚಿನವರೆಗೆ ದೇವಸ್ಥಾನಗಳ ಪಕ್ಕಕ್ಕೂ ನಮ್ಮನ್ನು ಬಿಡುತ್ತಿರಲಿಲ್ಲ ಎಂಬುದು ಮರೆತು ಹೋಗಿದೆ. ನಮಗೆ ಸಹಾಯ ಮಾಡುವವರು ಇನ್ನೊಬ್ಬ ಮನುಷ್ಯನೇ ಹೊರತು ದೇವರಲ್ಲ ಎಂಬ ಸತ್ಯ ತಿಳಿದಿರಬೇಕು. ಅನ್ನ ಕೊಡುವವರು, ಚಪ್ಪಲಿ ನೀಡುವವರು, ಔಷಧ ಕೊಡುವವರು, ಉಡಲು ಬಟ್ಟೆ ನೀಡುವವರು ಎಲ್ಲರೂ ಮನುಷ್ಯರೇ ಆಗಿದ್ದಾರೆ. ಎಲ್ಲದಕ್ಕೂ ಬೇಕಾಗಿರುವುದು ಮನುಷ್ಯರೇ ಹೊರತು ದೇವರಲ್ಲ‘ ಎಂದು ತಿಳಿಸಿದರು.

‘ಯಾರಿಗೋ ಮದುವೆಯಾಗದೇ ಇದ್ದರೆ ದೇವರ ಶಾಪ ಎಂದು ತಿಳಿಯುವುದು, ಅಪಘಾತವಾದರೆ ದೇವರು ಕಾರಣ ಎನ್ನುವುದನ್ನು ಬಿಟ್ಟುಬಿಡಬೇಕು. ದೇವರ ಭಕ್ತಿಗೆ ಇಂಥ ಭಯವೂ ಕಾರಣ. ಭಯದಿಂದ ಹೊರಬರಬೇಕು. ಮಾಟ, ಮಂತ್ರ, ಅದೃಷ್ಟಗಳನ್ನು ನಂಬಬಾರದು‘ ಎಂದರು.

‘ನಮ್ಮ ಸಮುದಾಯವನ್ನು ಕಾಡುವ ಎರಡನೇ ಸಮಸ್ಯೆ ಕುಡಿತ. ರಾಜ್ಯ ಸರ್ಕಾರವು ಈ ಬಾರಿ ಅಬಕಾರಿ ಇಲಾಖೆಗೆ ₹ 40,000 ಕೋಟಿ ಸಂಗ್ರಹದ ಗುರಿ ನೀಡಿದೆ. ಇದರಲ್ಲಿ ₹15,000 ಕೋಟಿಯಷ್ಟು ದಲಿತರೇ ಸುರಿಯುತ್ತಾರೆ. ಈ ದೌರ್ಬಲ್ಯದಿಂದ ಹೊರಬರಬೇಕು’ ಎಂದು ಸಲಹೆ ನೀಡಿದರು.

ಕೆಆರ್‌ಎಸ್‌ ಅಧ್ಯಕ್ಷ ಬೆಳತೂರು ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ನಟ ಚೇತನ್‌ ಕುಮಾರ್‌, ಡಿಎಸ್ಎಸ್‌ ಭೀಮಶಕ್ತಿ ಅಧ್ಯಕ್ಷ ಹೆಬ್ಬಾಳ ವೆಂಕಟೇಶ್, ಕೆಜೆಎಸ್‌ ಅಧ್ಯಕ್ಷ ಕೆ. ಮರಿಯಪ್ಪ, ಪಿವಿಸಿ ಅಧ್ಯಕ್ಷ ಮುನಿ ಅಂಜಿನಪ್ಪ, ಬಿಜೆಎಸ್‌ ಅಧ್ಯಕ್ಷ ಸಿ. ಮುನಿಯಪ್ಪ, ಸಂಘಟನೆಯ ಪದಾಧಿಕಾರಿಗಳಾದ ಚಿಕ್ಕನಾರಾಯಣ, ಶಕುಂತಲಮ್ಮ, ಅಶ್ವಿನಿ, ರಾಮಚಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT