ಸೋಮವಾರ, ಏಪ್ರಿಲ್ 6, 2020
19 °C

ನಾಳೆಯಿಂದ ಇನ್ನಷ್ಟು ಕಠಿಣ ಕ್ರಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮಂಗಳವಾರದ ಬಳಿಕ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ವೈರಸ್‌ ಹರಡುವ ಸರಣಿ ಕಡಿದು ಹಾಕಬೇಕಿದ್ದರೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದಕ್ಕೆ ಕರ್ಫ್ಯೂದಂತಹ ವಾತಾವರಣವೇ ಬೇಕು. ಇಲ್ಲವಾದಲ್ಲಿ ಇಟಲಿ ಮತ್ತು ಯುರೋಪ್‌ ದೇಶಗಳಲ್ಲಿ ಆದಂತೆ ದೊಡ್ಡ ಪ್ರಮಾಣದ ಅನಾಹುತವೇ ಆಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಿದೇಶಗಳಲ್ಲಿರುವ ಸಾಕಷ್ಟು ಕನ್ನಡಿಗರನ್ನು ರಕ್ಷಿಸಿ ಕರೆತರಲಾಗಿದೆ. ಸೋಮವಾರದಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನಗಳು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದಕ್ಕೆ ನಿಷೇಧ ವಿಧಿಸಲಾಗಿದೆ. ರಾಜ್ಯದ ಗಡಿ ಭಾಗಗಳನ್ನೂ ಮುಚ್ಚಲು ನಿರ್ದೇಶನ ನೀಡಲಾಗಿದೆ. ಇದರಿಂದ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಯಾವುದೇ ಪ್ರಯಾಣಿಕ ವಾಹನಗಳ ಪ್ರವೇಶಕ್ಕೆ ನಿಷೇಧ ಹಾಕಲಾಗಿದೆ.

ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ಎರಡರಿಂದ ಮೂರು ವಾರಗಳು ಅತ್ಯಂತ ನಿರ್ಣಾಯಕವಾಗಿವೆ. ಈ ಹಂತದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಬೇಕಾಗಿದೆ. ಹೀಗಾಗಿ ಮಂಗಳವಾರದಿಂದ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಇದೇ 25 ರಂದು ಯುಗಾದಿ ಇದ್ದು, ಹಬ್ಬದ ಆಚರಣೆಯಿಂದ ಜನತೆ ದೂರ ಉಳಿಯುವ ಸಾಧ್ಯತೆ ಇದೆ. ಮನೆಯಲ್ಲೇ ಸರಳವಾಗಿ ಯುಗಾದಿ ಆಚರಿಸಲು ರಾಜ್ಯ ಸರ್ಕಾರವೂ ಜನತೆಗೆ ಮನವಿ ಮಾಡಲಿದೆ. ಹಬ್ಬ, ಜಾತ್ರೆ, ರಥೋತ್ಸವ, ಮಸೀದಿಗಳಲ್ಲಿ ನಮಾಜ್‌ ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿದರೆ, ವೈರಸ್‌ ಹರಡಲು ಹಾಸಿಗೆ ಹಾಸಿಕೊಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು