ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪುರ ಮಾರುಕಟ್ಟೆ ಉಳಿಸಲು ಆಗ್ರಹ

Published 25 ಜೂನ್ 2024, 16:01 IST
Last Updated 25 ಜೂನ್ 2024, 16:01 IST
ಅಕ್ಷರ ಗಾತ್ರ

ಕೆ.ಆರ್.ಪುರ: ಕೆ.ಆರ್.ಪುರ ಮಾರುಕಟ್ಟೆ ಮೈದಾನ ಉಳಿಸುವಂತೆ ಆಗ್ರಹಿಸಿ ನಾಗರಿಕರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ದೇವರಾಜ್, ‘ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಆರ್.ಪುರ ಮಾರುಕಟ್ಟೆ  ಅವ್ಯವಸ್ಥೆಗಳ ಆಗರವಾಗಿದ್ದು, ಸಮರ್ಪಕ ಮೂಲಸೌಕರ್ಯಗಳಿಲ್ಲದೆ ಸೊರಗಿದೆ. ಹಾಗೆಯೇ, ಮಾರುಕಟ್ಟೆ ಕೆಲವು ವ್ಯಕ್ತಿಗಳ ಹಿಡಿತದಲ್ಲಿದ್ದು ಸಂತೆ ಮೈದಾನದ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ’ ಎಂದು ದೂರಿದರು.

‘ಕೆಲವರು ತಮ್ಮ ಪ್ರಭಾವ ಬಳಸಿ ಬೇಕಾದವರಿಗೆ ಶೆಡ್‌ಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಉಳಿದಂತೆ ನೂರಾರು ವ್ಯಾಪಾರಿಗಳು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಾಗಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ರಾಷ್ಟ್ರೀಯ ಹೆದ್ದಾರಿ ಪಾದಚಾರಿ ಮಾರ್ಗ ಬಸ್‌ಸ್ಟ್ಯಾಂಡ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾರುಕಟ್ಟೆಯಲ್ಲಿ ನಡೆಯುವ ಅಕ್ರಮ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ’ ಎಂದು ಆಕ್ಷೇಪಿಸಿದರು.

‘ಕೆಲವು ದಲ್ಲಾಳಿಗಳು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಸುಂಕ ವಸೂಲಿ ಮಾಡುತ್ತಾ, ಅವರಿಗೆ ತೊಂದರೆ ನೀಡುತ್ತಿದ್ದಾರೆ’ ಎಂದು ಕನ್ನಡ ಕಹಳೆ ಉಪಾಧ್ಯಕ್ಷ ರುದ್ರೇಶ್ ದೂರಿದರು.

’ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಬೇಕು. ಸಂತೆ ನಡೆಸುವ ಸ್ಥಳದಲ್ಲಿ ಕನಿಷ್ಠ ಮೂಲ ಸೌಕರ್ಯ ಒದಗಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT