ಶನಿವಾರ, ಡಿಸೆಂಬರ್ 14, 2019
24 °C
ಬಸ್‌ ಪಾಸ್ ಇದ್ದ ಕಾರಣ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಣೆ

ವಿದ್ಯಾರ್ಥಿನಿಯನ್ನು ಹೊರದಬ್ಬಿದ ಕಂಡಕ್ಟರ್‌: ಆರೋಪಿ ಅಮಾನತು

ಉಮೇಶ್‌ ಯಾದವ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಸ್‌ ಪಾಸ್ ಇದ್ದುದ್ದರಿಂದ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್‌ ಚಲಿಸುವ ಬಸ್ಸಿನಿಂದ ಹೊರಕ್ಕೆ ತಳ್ಳಿದ ಅಮಾನವೀಯ ಘಟನೆ ಇತ್ತೀಚೆಗೆ ನಗರದಲ್ಲಿ ನಡೆದಿದೆ.

ಕಂಡಕ್ಟರ್‌ ವರ್ತನೆಯಿಂದ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಮೊದಲ ಪಿಯುಸಿ ಓದುತ್ತಿರುವ ಕನಕಪುರ ಪಟ್ಟಣದ ಭೂಮಿಕಾ (16) ಈ ತಿಂಗಳ 11ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಊರಿಗೆ ಹೋಗಲು ಬಸ್‌ ಹತ್ತಿದಾಗ ಈ ಘಟನೆ ನಡೆದಿದೆ.

‘ನಾನು ಮನೆಗೆ ಹಿಂತಿರುಗಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎ42 ಎಫ್‌– 2217 ಬಸ್‌ ಹತ್ತಿದೆ. ಕಂಡಕ್ಟರ್‌
ಟಿಕೆಟ್‌ ತೆಗೆದುಕೊಳ್ಳಲು ಹೇಳಿದಾಗ ಬಸ್‌ ಪಾಸ್‌ ಇದೆ ಎಂದೆ. ಈ ಬಸ್‌ನಲ್ಲಿ ಬಸ್‌ ಪಾಸ್‌ ನಡೆಯುವುದಿಲ್ಲ ಎಂದರು. ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವರಿಗೆ ಹೇಳಿದೆ. ಇಲ್ಲೇ ಇಳಿಯುವಂತೆ ಕಂಡಕ್ಟರ್‌ ಒತ್ತಾಯಿಸಿದರು. ಅಷ್ಟು ಹೊತ್ತಿಗೆ ಬಸ್‌ ಚಲಿಸಲಾರಂಭಿಸಿತು. ಆದರೂ, ಕಂಡಕ್ಟರ್‌ ನನ್ನನ್ನು ಬಲವಂತವಾಗಿ ಹೊರದಬ್ಬಿದರು’ ಎಂದು ಭೂಮಿಕಾ ‘ಪ್ರಜಾವಾಣಿ’ಗೆ
ತಿಳಿಸಿದರು.

‘ಬಸ್ಸಿನಿಂದ ಹೊರಗೆ ಬಿದ್ದುದ್ದರಿಂದ ಹಣೆ, ಎಡ ಮಂಡಿಗೆ ಗಾಯಗಳಾಗಿವೆ. ಹಲ್ಲುಗಳು ಮುರಿದಿವೆ. ದಾರಿ ಹೋಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು’ ಎಂದು ವಿದ್ಯಾರ್ಥಿನಿ ವಿವರಿಸಿದರು.

ಆರೋಪಿ ಅಮಾನತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್‌ ಶಿವಶಂಕರ್‌ ಅವರನ್ನು ಸಸ್ಪೆಂಡ್‌ ಮಾಡಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

‘ದೂರದ ಊರುಗಳಿಗೆ ಹೋಗುವ ಬಸ್‌ಗಳಲ್ಲಿ ವಿದ್ಯಾರ್ಥಿ ಬಸ್‌ ಪಾಸ್‌ ನಡೆಯುವುದಿಲ್ಲ. ಆದರೂ, ಈ ರೀತಿಯ ನಡವಳಿಕೆಯನ್ನು ಸರಿಯಲ್ಲ.  ನಮ್ಮ ಸಿಬ್ಬಂದಿಗೆ ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಹೇಳಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು