ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ನಿರ್ಲಕ್ಷ್ಯದಿಂದ ಸಾವು ಆರೋಪ: ಠಾಣೆ ಎದುರು ಮೃತದೇಹ ಇರಿಸಿ ಆಕ್ರೋಶ

Published 22 ಏಪ್ರಿಲ್ 2024, 16:23 IST
Last Updated 22 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಹಲ್ಲು ನೋವಿಗೆ ಚಿಕಿತ್ಸೆ ಪಡೆದಿದ್ದ ಕುಮಾರ್ (55) ಎಂಬುವವರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಠಾಣೆ ಎದುರು ಮೃತದೇಹ ಇರಿಸಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯ ಸ್ಟ್ರೆಚರ್‌ನಲ್ಲಿ ಮೃತದೇಹವನ್ನು ತಂದಿದ್ದ ಸಂಬಂಧಿಕರು, ಠಾಣೆ ಎದುರು ನಿಲ್ಲಿಸಿದ್ದರು. ‘ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಸುಬ್ರಹ್ಮಣ್ಯನಗರದ ಕುಮಾರ್, ಹಲ್ಲು ನೋವಿನ ಚಿಕಿತ್ಸೆಗೆಂದು ಇತ್ತೀಚೆಗೆ ದಂತ ವೈದ್ಯರೊಬ್ಬರ ಬಳಿ ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯ, ನೋವಿಗೆ ಚಿಕಿತ್ಸೆ ಕೊಟ್ಟಿದ್ದರು. ಆದರೆ, ಮುಖ ಊದಿಕೊಂಡಿತ್ತು. ಎರಡೂ ಕಣ್ಣಿಗೂ ಹಾನಿಯಾಗಿತ್ತು’ ಎಂದು ಸಂಬಂಧಿಕರೊಬ್ಬರು ಹೇಳಿದರು.

‘ಮುಖ ಊದಿಕೊಂಡು ತೀವ್ರ ನೋವು ಅನುಭವಿಸುತ್ತಿದ್ದ ಕುಮಾರ್ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಕುಮಾರ್ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಂತ ವೈದ್ಯರ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟಾಗಿರುವುದಾಗಿ ವೈದ್ಯರು ಹೇಳಿದ್ದರು. ಹೀಗಾಗಿ, ದಂತ ವೈದ್ಯರ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದೆವು’ ಎಂದು ತಿಳಿಸಿದರು.

‘ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರು ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಯಾವುದೇ ಪ್ರತಿಕ್ರಿಯೆ ಸಹ ನೀಡಲಿಲ್ಲ. 10 ದಿನ ತೀವ್ರ ನಿಗಾ ಘಟಕದಲ್ಲಿದ್ದ ಕುಮಾರ್ ಅವರು ಸೋಮವಾರ ಮೃತಪಟ್ಟಿದ್ದಾರೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವರ್ತನೆಯನ್ನು ಖಂಡಿಸಿ ಮೃತದೇಹವನ್ನು ಠಾಣೆ ಬಳಿ ತಂದಿದ್ದೇವೆ. ವೈದ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂಬಂಧಿಕರು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು, ಕುಮಾರ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕವೇ ಸಂಬಂಧಿಕರು, ಮೃತದೇಹವನ್ನು ವಾಪಸು ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು.

‘ಯುಡಿಆರ್ ದಾಖಲು: ವೈದ್ಯಕೀಯ ಮಂಡಳಿಗೆ ಪತ್ರ’

‘ಕುಮಾರ್ ಸಾವಿನ ಬಗ್ಗೆ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ. ವೈದ್ಯಕೀಯ ಮಂಡಳಿಗೆ ಪತ್ರ ಬರೆಯಲಾಗಿದ್ದು ಉತ್ತರ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕುಮಾರ್ ಸಾವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಕುಮಾರ್ ಅವರಿಗೆ ಮಧುಮೇಹವಿತ್ತು. ಈ ವಿಚಾರ ತಿಳಿಯದ ವೈದ್ಯ ಚಿಕಿತ್ಸೆ ನೀಡಿದ್ದರು. ಕೆಲ ಹೊತ್ತಿನ ನಂತರ ನೋವು ಹೆಚ್ಚಾಗಿತ್ತು. ಎರಡು ಮಾತ್ರೆ ಕೊಟ್ಟಿದ್ದ ವೈದ್ಯ ಆ್ಪಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು’ ಎಂದರು.

‘ಆರಂಭದಲ್ಲಿ ಎರಡು ಪ್ರತ್ಯೇಕ ಆಸ್ಪತ್ರೆಗಳಿಗೆ ಕುಮಾರ್ ಅವರನ್ನು ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ಸೇರಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಹೇಳಿದರು. ‘ಪೊಲೀಸರು ಯಾವುದೇ ಕರ್ತವ್ಯಲೋಪ ಎಸಗಿಲ್ಲ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸಂಬಂಧಿಕರು ದೂರು ನೀಡಿದ ದಿನವೇ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT