ಶನಿವಾರ, ಫೆಬ್ರವರಿ 29, 2020
19 °C
ರೈಲು ಯೋಜನೆಗೆ ₹18,618 ಕೋಟಿ ಪ್ರಕಟಿಸಿ ಅನುದಾನ ನೀಡದ ಕೇಂದ್ರ: ಹೋರಾಟಗಾರರ ಅಸಮಾಧಾನ

‘ಸಬ್‌ಅರ್ಬನ್‌’ಗೆ ಒಂದೇ ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಬ್‌ ಅರ್ಬನ್‌ ರೈಲು ಯೋಜನೆಯನ್ನು ₹18,618 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುವುದಾಗಿ 2020–21ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಪಿಂಕ್‌ ಬುಕ್‌ನಲ್ಲಿ ಈ ಯೋಜನೆಗೆ ಕೇವಲ ₹1 ಕೋಟಿ ಮೊತ್ತವನ್ನು ನಿಗದಿಪಡಿಸಿದೆ.

ಕೇಂದ್ರ ಸರ್ಕಾರದ ಈ ನಡೆ ರೈಲ್ವೆ ಪ್ರಯಾಣಿಕರಲ್ಲಿ ಮತ್ತೆ ನಿರಾಶೆ ಮೂಡಿಸಿದೆ. ರೈಲ್ವೆ ಕಾಮಗಾರಿಗಳ ಕುರಿತ ಪಿಂಕ್‌ ಬುಕ್‌ನಲ್ಲಿ ಈ ಯೋಜನೆಗೆ ಸಾಕಷ್ಟು ಅನುದಾನ ಒದಗಿಸದೇ ಇರುವುದರಿಂದ ಇದರ ಅನುಷ್ಠಾನ ಮತ್ತೆ ವಿಳಂಬವಾಗುವುದು ನಿಶ್ಚಿತ. ಕೇಂದ್ರ ಸರ್ಕಾರ ಮತ್ತೆ ಬೆಂಗಳೂರಿಗರನ್ನು ವಂಚಿಸಿದೆ ಎಂದು ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಅಸ್ತಿತ್ವಲ್ಲಿರುವುದರಿಂದ ಈ ಬಾರಿಯಾದರೂ ಸಬ್‌ ಅರ್ಬನ್‌ ರೈಲು ಯೋಜನೆ ಸಾಕಾರಗೊಳ್ಳಲಿದೆ ಎಂಬ ಆಶಾವಾದ ಹೊಂದಿದ್ದೆವು. ಪಿಂಕ್‌ ಬುಕ್‌ನಲ್ಲಿ ₹200 ಕೋಟಿಯಿಂದ ₹500 ಕೋಟಿಯಷ್ಟು ಮೊತ್ತವನ್ನು ಯೋಜನೆಗೆ ಬಿಡುಗಡೆ ಮಾಡಲಾಗುತ್ತದೆ. ರಾಜ್ಯ ಸರ್ಕಾರವೂ 2020–21ನೇ ಸಾಲಿನಲ್ಲಿ ಇಷ್ಟೇ ಮೊತ್ತವನ್ನು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ನಮ್ಮದಾಗಿತ್ತು. ಅನುದಾನ ಹಂಚಿಕೆ ಮಾಡದ ಕಾರಣ ಈ ಯೋಜನೆ ಇನ್ನೂ ಒಂದು ವರ್ಷ ತಡವಾಗಲಿದೆ’ ಎಂದು ‘ಪ್ರಜಾರಾಗ್‌’ ಸಂಘಟನೆಯ ಸಂಜೀವ ದ್ಯಾಮಣ್ಣವರ್‌ ತಿಳಿಸಿದರು.

‘ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈ ಯೋಜನೆಗೆ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಬೆಂಗಳೂರನ್ನು ಪ್ರತಿನಿಧಿಸುವ ಸಂಸದರು ಹಾಗೂ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು. ನಮ್ಮ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸದೇ ಹೋದರೆ ಇನ್ನೂ 20 ವರ್ಷ ಕಳೆದರೂ ಈ ಯೋಜನೆ ಅನುಷ್ಠಾನಗೊಳ್ಳದು’ ಎಂದರು.

‘ಉಪನಗರ ರೈಲು ಯೋಜನೆಯಲ್ಲಿ ತಲಾ ಶೇ 20ರಷ್ಟು ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಿಸಲಿವೆ. ಶೇ 60ರಷ್ಟು ಮೊತ್ತವನ್ನು ಅನ್ಯಮೂಲಗಳಿಂದ ಸಂಗ್ರಹಿಸುವುದಾಗಿ (ಸಾಂಸ್ಥಿಕ ಸಾಲ) ನಿರ್ಮಲಾ ಸಿತಾರಾಮನ್‌ ಬಜೆಟ್‌ ಭಾಷಣದಲ್ಲೇ ಉಲ್ಲೇಖಿಸಿದ್ದರು. ಬೆಂಗಳೂರಿನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಅವರು ಈ ನಗರದ ಜನತೆಯ ದಾರಿ ತಪ್ಪಿಸಿದ್ದಾರೆ. ಕೇಂದ್ರ ಭರಿಸುವ ಶೇ 20ರಷ್ಟು ಪಾಲಿನಲ್ಲಿ ಸ್ವಲ್ಪ ಮೊತ್ತವನ್ನಾದರೂ ಹಂಚಿಕೆ ಮಾಡುತ್ತಿದ್ದರೆ ಸಮಾಧಾನ ಪಡಬಹುದಿತ್ತು’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ಬೇಸರ ವ್ಯಕ್ತಪಡಿಸಿದರು. 

ಈ ವರ್ಷ ಜಾರಿಗೆ ತಂದೇ ಸಿದ್ಧ: ಪಿ.ಸಿ.ಮೋಹನ್‌

‘ಸಬ್‌ಅರ್ಬನ್‌ ರೈಲು ಯೋಜನೆಗೆ ಪಿಂಕ್‌ ಬುಕ್‌ನಲ್ಲಿ ಸಾಕಷ್ಟು ಅನುದಾನ ನೀಡದೇ ಇರಬಹುದು. ಆದರೂ ಈ ಯೋಜನೆಯನ್ನು ಈ ವರ್ಷ ಜಾರಿಗೆ ತಂದೇ ಸಿದ್ಧ’ ಎಂದು ಸಂಸದ ಪಿ.ಸಿ.ಮೋಹನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಯೋಜನೆಗೆ ಕನಿಷ್ಠ ಪಕ್ಷ ₹1 ಸಾವಿರ ಕೋಟಿ ಅನುದಾನ ಕಾಯ್ದಿರಿಸಲಿದ್ದಾರೆ. ಅಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರವೂ ಇದೇ ವರ್ಷ ಬಿಡುಗಡೆ ಮಾಡಲಿದೆ’ ಎಂದು ಅವರು ತಿಳಿಸಿದರು.

ಬೆಂಗಳೂರಿಗೆ ಪಿಂಕ್‌ ಬುಕ್‌ನಲ್ಲಿ ತೋರಿಸಿರುವ ಅನುದಾನ

₹100 ಕೋಟಿ – ವೈಟ್‌ಫೀಲ್ಡ್‌– ಬೆಂಗಳೂರುನಗರ– ಕೆ.ಆರ್‌.ಪುರ–ಮಾರ್ಗವನ್ನು (23.08 ಕಿ.ಮೀ) ನಾಲ್ಕು ಹಳಿಗಳನ್ನಾಗಿ ಪರಿವರ್ತಿಸಲು

₹5 ಕೋಟಿ – ಯಶವಂತಪುರ– ಚನ್ನಸಂದ್ರ (21.7 ಕಿ.ಮೀ) ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸಲು

₹5 ಕೋಟಿ – ಬೈಯಪ್ಪನಹಳ್ಳಿ– ಹೊಸೂರು (46 ಕಿ.ಮೀ) ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸಲು

₹30 ಕೋಟಿ – ಯಲಹಂಕ–ಚಿಕ್ಕಬಳ್ಳಾಪುರ– ಬಂಗಾರಪೇಟೆ ಮಾರ್ಗದ ವಿದ್ಯುದೀಕರಣ

***

ಬಿಬಿಎಂಪಿಯಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ ನೇತೃತ್ವದ ಸರ್ಕಾರಗಳಿದೆ. ಸಬ್‌ಅರ್ಬನ್‌ ರೈಲು ಯೋಜನೆ ವಿಳಂಬದ ಬಗ್ಗೆ ಬೇರೆಯವರ ಮೇಲೆ ಅವರೀಗ ಗೂಬೆ ಕೂರಿಸಲಾಗದು. ವಿಳಂಬಕ್ಕೆ ಅವರೇ ನೇರ ಹೊಣೆ

– ಕೃಷ್ಣಪ್ರಸಾದ್‌, ರೈಲ್ವೆ ಹೋರಾಟಗಾರ

ಸಬ್‌ಅರ್ಬನ್‌ ರೈಲು ಯೋಜನೆ ಬಗ್ಗೆ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಭರವಸೆ ನೀಡಿದಂತೆ ಈ ಯೋಜನೆಯನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲಿದ್ದೇವೆ

- ಪಿ.ಸಿ.ಮೋಹನ್‌, ಸಂಸದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು