ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಬ್ರಿಡ್ ವಿಡಿಯೊ ಸಂವಾದ ಮಾದರಿ ವಿಸ್ತರಿಸಬೇಕು: ಎ.ಎಸ್. ಓಕಾ

Last Updated 4 ಸೆಪ್ಟೆಂಬರ್ 2021, 22:18 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಹೈಕೋರ್ಟ್‌ನಲ್ಲಿ ಅಳವಡಿಸಿಕೊಂಡಿರುವ ಹೈಬ್ರಿಡ್ ವಿಡಿಯೊ ಸಂವಾದ ಮಾದರಿಯನ್ನು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಿಗೂ ವಿಸ್ತರಿಸಬೇಕು‘ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಎ.ಎಸ್. ಓಕಾ ಹೇಳಿದರು.

ಬೆಂಗಳೂರು ವಕೀಲರ ಸಂಘದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಜೊತೆ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‌‌‘ಎಲ್ಲ ನ್ಯಾಯಾಲಯಗಳಲ್ಲೂ ಇ-ಸೇವಾ ಕೇಂದ್ರ ಆರಂಭಿಸಬೇಕು. ವಿದ್ಯುನ್ಮಾನ ವಿಧಾನಗಳಲ್ಲೇ ಸಾಕ್ಷ್ಯಗಳನ್ನು ದಾಖಲು ಮಾಡಿಕೊಳ್ಳಬೇಕು‘ ಎಂದು ಸಲಹೆ ನೀಡಿದರು.

’ಐದು ವರ್ಷ ಹಳೆಯ ಕೇಸುಗಳನ್ನು 2021ರ ಡಿಸೆಂಬರ್ ಒಳಗೆ ವಿಲೇವಾರಿಗೆ ಗುರಿ ಹೊಂದಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಆದರೆ, 2022ರ ಜೂನ್ ವೇಳೆಗೆ ಕರ್ನಾಟಕದಲ್ಲಿ ಖಂಡಿತಾ ಐದು ವರ್ಷಕ್ಕಿಂತ ಹಿಂದಿನ ಕೇಸುಗಳಿರುವುದಿಲ್ಲ‘ ಎಂದ ಅವರು, ‘ಸಮಾಜದ ತಳಮಟ್ಟದವರಿಗೆ ಆದ್ಯತೆಯ ಮೇಲೆ ನ್ಯಾಯದಾನ ಮಾಡಲು ವಕೀಲರು, ನ್ಯಾಯಾಧೀಶರು ಶ್ರಮಿಸಬೇಕು’ ಎಂದರು.

‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ನುವುದಕ್ಕಿಂತ ಕರ್ನಾಟಕ ಸಿಜೆ ಎಂದು ಕರೆಸಿಕೊಳ್ಳುವುದರಲ್ಲಿ ಖುಷಿ ಇದೆ. ವಕೀಲ ಉದಯ್ ಹೊಳ್ಳ ತಮ್ಮನ್ನು ಕನ್ನಡಿಗ ಎಂದು ಬಣ್ಣಿಸಿದರು. ಅದನ್ನು ನಾನು ಒಪ್ಪುತ್ತೇನೆ’ ಎಂದರು.

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ, ‘ಕನ್ನಡ ಮಣ್ಣಿಗೆ ನಾನು ಸದಾ ಖುಣಿಯಾಗಿರುತ್ತೇನೆ. ದೆಹಲಿಯಿಂದ ಬೆಂಗಳೂರಿಗೆ ಬಂದು ವಕೀಲಿಕೆ ಆರಂಭಿಸಿದ್ದು, ತಮ್ಮ ಜೀವನದ ಮಹತ್ವದ ನಿರ್ಧಾರ’ ಎಂದು ವೃತ್ತಿ ಜೀವನವನ್ನು ಮೆಲುಕು ಹಾಕಿದರು.

’ತಂದೆ-ಮಗ, ಕೆ.ಎಸ್. ಹೆಗ್ಡೆ ಮತ್ತು ಅವರ ಮಗ ಸಂತೋಷ್ ಹೆಗ್ಡೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿರುವ ದಾಖಲೆ ಇದೆ. ಇದೀಗ ನಾನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗಿರುವುದರಿಂದ ತಂದೆ-ಮಗಳು ಸರ್ವೋನ್ನತ ನ್ಯಾಯಾಲಯಕ್ಕೆ ಏರಿದಂ‌ತಾಗಿದೆ’ ಎಂದು ನಾಗರತ್ನಾ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ’ನ್ಯಾಯಾಂಗ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋದಾಗ ದೇಶ ಸುಭದ್ರವಾಗಿರುತ್ತದೆ. ನ್ಯಾಯಾಂಗ ಮತ್ತು ಸರ್ಕಾರ ಎರಡರ ಉದ್ದೇಶವೂ ಪ್ರಜಾತಂತ್ರ ಕಲ್ಯಾಣ ರಾಜ್ಯವನ್ನು ಸೃಷ್ಟಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ವಕೀಲರಾದ ಉದಯ್ ಹೊಳ್ಳ, ಕೆ.ಎನ್. ಪುಟ್ಟೇಗೌಡ ಅವರು ಓಕಾ ಮತ್ತು ಬಿ.ವಿ. ನಾಗರತ್ನಾ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT