ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರಕ್ಷಾ’ಗೆ 1.98 ಲಕ್ಷ ಮಂದಿ ಮೊರೆ

ನಗರ ಪೊಲೀಸರ ವಿಶೇಷ ಅಭಿಯಾನ
Last Updated 7 ಡಿಸೆಂಬರ್ 2019, 4:55 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ತ್ವರಿತವಾಗಿ ಸಹಾಯಕ್ಕೆ ಧಾವಿಸಲು ನಗರ ಪೊಲೀಸರು ಬಿಡುಗಡೆ ಮಾಡಿರುವ ‘ಸುರಕ್ಷಾ’ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಶುಕ್ರವಾರದ ಅಂತ್ಯಕ್ಕೆ 1.98 ಲಕ್ಷ ಮಂದಿ ಆ್ಯಪ್‌ ಡೌನ್‌ಲೋಡ್‌ ಹಾಗೂ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೂ ಮುನ್ನ 40 ಸಾವಿರ ಮಂದಿ ಮಾತ್ರ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡಿದ್ದರು.

ಘಟನೆ ನಡೆದು 9 ದಿನವಾಗಿದ್ದು, ಈ ಅವಧಿಯಲ್ಲಿ 1.58 ಲಕ್ಷ ಮಂದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಕೆಲವರು ತುರ್ತು ಬಟನ್‌ ಬಳಕೆ ಮಾಡಿ ಪರೀಕ್ಷೆಯನ್ನೂ ಮಾಡಿದ್ದಾರೆ. ಇಂಥ‍ಪ್ರಕರಣಗಳಲ್ಲಿ 2ರಿಂದ 5 ನಿಮಿಷದಲ್ಲೇ ಪೊಲೀಸರು ಮಹಿಳೆಯರಿದ್ದ ಸ್ಥಳಕ್ಕೆ ಬಂದು ಹೋಗಿದ್ದಾರೆ.

ಇನ್ನು ಕೆಲವರು ಅಪಾಯದಲ್ಲಿದ್ದ ವೇಳೆ ಆ್ಯಪ್ ಬಳಕೆ ಮಾಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸಹಾಯ ಮಾಡಿದ್ದಾರೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವಅಖಿಲಾ ವೆಂಕಟ್, ‘ಆ್ಯಪ್ ಬಗ್ಗೆ ತಿಳಿಯುತ್ತಿದ್ದಂತೆ ಡೌನ್‌ಲೋಡ್‌ ಮಾಡಿದ್ದೆ. ಮೊನ್ನೆಯಷ್ಟೇ ಅಪರಿಚಿತನೊಬ್ಬ ನನ್ನನ್ನು ಹಿಂಬಾಲಿಸುತ್ತಿದ್ದ. ಭಯವಾಗಿ ಸುರಕ್ಷಾ ಆ್ಯಪ್‌ನಲ್ಲಿದ್ದ ಬಟನ್ ಒತ್ತಿದ್ದೆ. ಕೂಡಲೇ ಪೊಲೀಸರು ನನಗೆ ಕರೆ ಮಾಡಿ ವಿಷಯ ತಿಳಿದುಕೊಂಡರು. ಎರಡೇ ನಿಮಿಷದಲ್ಲಿ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಹಿಡಿದುಕೊಂಡು ಠಾಣೆಗೆ ಹೋದರು’ ಎಂದು ಹೇಳಿದ್ದಾರೆ.

ಕಮಿಷನರ್ ಭಾಸ್ಕರ್ ರಾವ್, ‘ಪ್ರತಿಯೊಂದು ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪ್ರತಿಯೊಬ್ಬರೂ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್‌ ಮೂಲಕ ನೀಡಿದ ದೂರುಗಳು ವಿಡಿಯೊ ಸಮೇತ ನಿಯಂತ್ರಣ ಕೊಠಡಿಗೆ ಬರುತ್ತವೆ. ದೂರು ನೀಡಿದವರು ಸ್ಥಳದ ಬಗ್ಗೆ ಹೇಳದಿದ್ದರೂ ವಿಡಿಯೊ ಮೂಲಕ ಅದು ಯಾವ ಸ್ಥಳವೆಂಬುದು ತಿಳಿಯುತ್ತದೆ’ ಎಂದರು.

ವಿಶೇಷ ಅಭಿಯಾನ: ನಗರದ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಆ್ಯಪ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಉದ್ಯಾನ, ಬಸ್ ತಂಗುದಾಣ, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅಪಾಯದ ಸಂದರ್ಭದಲ್ಲಿ ಬಳಕೆ ಮಾಡುವಂತೆ ಕೋರುತ್ತಿದ್ದಾರೆ.

‘ಎನ್‌ಕೌಂಟರ್‌ ಮಾಡಿದ್ದು ಸರಿ’

‘ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಅಲ್ಲಿಯ ಪೊಲೀಸರು ಎನ್‌ಕೌಂಟರ್‌ ಮಾಡಿರುವುದು ಸರಿಯಾದ ನಿರ್ಧಾರ’ ಎಂದು ಕಮಿಷನರ್‌ ಭಾಸ್ಕರ್ ರಾವ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಮಾತನಾಡಿದ ಅವರು, ‘ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇಂಥ ಸಂದರ್ಭದಲ್ಲೇ ಎನ್‌ಕೌಂಟರ್ ಮಾಡಿದ್ದಾರೆ. ನಾವೆಲ್ಲರೂ ಆ ಪೊಲೀಸರನ್ನು ಬೆಂಬಲಿಸಬೇಕು’ ಎಂದು ತಿಳಿಸಿದರು.

‘ಹಲೊ ನೆರೆಹೊರೆ’ ಕಾರ್ಯಕ್ರಮ

‘ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೆರೆ–ಹೊರೆಯವರ ನಡುವೆ ಪರಸ್ಪರ ಪರಿಚಯವೇ ಇಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ‘ಹಲೊ ನೆರೆಹೊರೆ’ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ’ ಎಂದು ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಆಯಾ ಠಾಣೆಯ ವ್ಯಾಪ್ತಿಯಲ್ಲಿ‘ಹಲೊ ನೆರೆಹೊರೆ’ ಕಾರ್ಯಕ್ರಮವನ್ನು ಆಯೋಜಿಸಿ ನಿವಾಸಿಗಳನ್ನು ಆಹ್ವಾನಿಸಲಾಗುತ್ತಿದೆ. ಅಲ್ಲಿಯೇ ನೆರೆಹೊರೆಯವರನ್ನು ಪರಿಚಯಿಸಲಾಗುತ್ತಿದೆ. ಠಾಣೆ ಸಿಬ್ಬಂದಿ ಹಾಗೂ ಗಸ್ತು ಸಿಬ್ಬಂದಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಅಪರಾಧ ಪ್ರಕರಣಗಳನ್ನು ತಡೆಯಲು ಜನರ ಸಹಕಾರ ಅಗತ್ಯ. ಜೊತೆಗೆ, ನೆರೆಹೊರೆಯವರು ಪರಸ್ಪರ ಸಂಪರ್ಕದಲ್ಲಿರುವುದೂ ಮುಖ್ಯ.
- ಭಾಸ್ಕರ್‌ ರಾವ್,ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT