ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣ್‌ ಅಭಿಯಾನ; ಪ್ರತಿಕ್ರಿಯಿಸಲು ನಾಗರಿಕರ ನಿರಾಸಕ್ತಿ

100ರೊಳಗೆ ಸ್ಥಾನ ಪಡೆಯುವ ಬಿಬಿಎಂಪಿ ಪ್ರಯತ್ನಕ್ಕೆ ಹಿನ್ನಡೆ l ಅಂಕಕ್ಕೆ ಕುತ್ತು?
Last Updated 17 ಜನವರಿ 2020, 20:29 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಚ್ಛ ಸರ್ವೇಕ್ಷಣ್‌ 2020 ಅಭಿಯಾನದಲ್ಲಿ ಈ ಬಾರಿ ಅಗ್ರ 100ರ ಒಳಗಿನ ಸ್ಥಾನ ಪಡೆಯಲು ಬಿಬಿಎಂಪಿ ಶತಾಯಗತಾಯ ಪ್ರಯತ್ನ ನಡೆಸಿದೆ. ಆದರೆ, ಸ್ವಚ್ಛತೆ ಕುರಿತು ನಾಗರಿಕರ ಪ್ರತಿಕ್ರಿಯೆ ಪಡೆಯುವ ವಿಚಾರದಲ್ಲಿ ಈ ಬಾರಿಯೂ ಬಿಬಿಎಂಪಿಗೆ ಹಿನ್ನಡೆ ಆಗುವ ಲಕ್ಷಣಗಳು ಕಾಣಿಸುತ್ತಿವೆ.

2020ರ ಅಭಿಯಾನಕ್ಕೆ ನಾಗರಿಕರ ಪ್ರತಿಕ್ರಿಯೆ ಪಡೆಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳು ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಕೋರಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಹಾಗೂ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಈ ಅಭಿಯಾನದ ಪೋರ್ಟಲ್‌ನ ಸಂಪರ್ಕ ಕೊಂಡಿಗಳನ್ನು (https://swachhsurvekshan2020.org/CitizenFeedback ಅಥವಾ http://bit.ly/SS2020Blr) ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ನಾಗರಿಕರ ಪ್ರತಿಕ್ರಿಯೆ ನೀರಸವಾಗಿದೆ.

‘ನಗರದ ಒಟ್ಟು ಜನಸಂಖ್ಯೆಯ ಶೇ 1ರಷ್ಟು ಮಂದಿ, ಅಂದರೆ ಕನಿಷ್ಠ 1 ಲಕ್ಷ ಮಂದಿ ಪ್ರತಿಕ್ರಿಯೆ ನೀಡಿದರೆ ಬಿಬಿಎಂಪಿಗೂ ಉತ್ತಮ ಅಂಕ ಸಿಗುತ್ತದೆ. ಇದುವರೆಗೆ 4 ಸಾವಿರ ಮಂದಿ ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚು ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಬೇಕು ಎಂಬ ಉದ್ದೇಶದಿಂದಲೇ ನಾವು ಒಂದೂವರೆ ನಿಮಿಷದ ವಿಡಿಯೊ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ
ಹಂಚಿಕೊಂಡಿದ್ದೇವೆ’ ಎಂದು ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಗರಿಕರ ಪ್ರತಿಕ್ರಿಯೆ ಪಡೆಯುವಾಗ ಎಂಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವುಗಳನ್ನು ಆಧರಿಸಿ ಬಿಬಿಎಂಪಿಗೆ ಅಂಕಗಳನ್ನು ನೀಡಲಾಗುತ್ತದೆ. ಅಂಕ ಸಿಗಬೇಕಾದರೆ ಜನ ನಮ್ಮ ಕಸ ವಿಲೇವಾರಿ ವ್ಯವಸ್ಥೆಗೆ ಹೆಚ್ಚು ಅಂಕ ನೀಡಬೇಕೆಂದೇನಿಲ್ಲ. ಅವರು ಪ್ರತಿಕ್ರಿಯೆ ನೀಡಿದರೂ ಸಾಕು’ ಎಂದರು.

ನಾಗರಿಕರ ಪ್ರತಿಕ್ರಿಯೆಗೆ 2019ರ ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಭಾರಿ ಅಂಕಗಳು ನಷ್ಟವಾಗಿದ್ದವು. ಇದು ಕೂಡಾ ಬಿಬಿಎಂಪಿಯ ಕಳಪೆ ಸಾಧನೆಗೆ ಕಾರಣವಾಗಿತ್ತು. ಕಳೆದ ವರ್ಷದ ಅಭಿಯಾನದಲ್ಲಿ ಬಿಬಿಎಂಪಿ 1,250 ಅಂಕಗಳಲ್ಲಿ 617.96 ಅಂಕಗಳನ್ನು ಮಾತ್ರ ಗಳಿಸಿತ್ತು. ಇದು ರಾಷ್ಟ್ರೀಯ ಸರಾಸರಿ (780) ಹಾಗೂ ರಾಜ್ಯದ ಸರಾಸರಿಗಿಂತ(685.15 ಅಂಕ) ತುಂಬಾ ಕಡಿಮೆ ಇತ್ತು. ಈ ಬಾರಿ ಒಟ್ಟು 6 ಸಾವಿರ ಅಂಕಗಳಲ್ಲಿ 1,500 ಅಂಕಗಳನ್ನು ನಾಗರಿಕರ ಪ್ರತಿಕ್ರಿಯೆಗಾಗಿ ಮೀಸಲಿಡಲಾಗಿದೆ.

ಸ್ವಚ್ಛ ಸರ್ವೇಕ್ಷಣ ಸರ್ವೆ:ಬಿಬಿಎಂಪಿ ಹಾದಿ

ವರ್ಷ; ಭಾಗವಹಿಸಿದ ನಗರಗಳು; ಬಿಬಿಎಂಪಿ ಸ್ಥಾನ

2016;73; 38

2017; 434; 210

2018; 4,203; 216

2019;4237; 194

ಮೊಬೈಲ್‌ ಕಡ್ಡಾಯದಿಂದ ನಿರಾಸಕ್ತಿ

ಈ ಸಮೀಕ್ಷೆಯಲ್ಲಿ ಭಾಗವಹಿಸಲು ಮೊಬೈಲ್‌ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಮೊಬೈಲ್‌ ಸಂಖ್ಯೆ ನಮೂದಿಸದ ಹೊರತು ಸ್ವಚ್ಛ ಸರ್ವೇಕ್ಷಣ್‌ ಪೋರ್ಟಲ್‌ನಲ್ಲಿ ಅಭಿಪ್ರಾಯ ದಾಖಲಿಸಲು ಅವಕಾಶವೇ ಇಲ್ಲ. ಮೊಬೈಲ್‌ಗೆ ಬರುವ ಒಮ್ಮೆ ಬಳಸುವ ರಹಸ್ಯ ಸಂಖ್ಯೆ (ಒಟಿಪಿ) ನಮೂದಿಸಿದರೆ ಮಾತ್ರ ಅಭಿಪ್ರಾಯ ದಾಖಲಾಗುತ್ತದೆ.

ಬಹುತೇಕರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಇದು ಕೂಡಾ ಜನ ಈ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕುವುದಕ್ಕೆ ಕಾರಣ.

‘ಸ್ವಚ್ಛ ಸರ್ವೇಕ್ಷಣ್‌ ಪೋರ್ಟಲ್‌ನಲ್ಲಿ ದಾಖಲಾದ ಪ್ರತಿಕ್ರಿಯೆಯ ನೈಜತೆ ಪರೀಕ್ಷೆ ಮಾಡಲು ಮೊಬೈಲ್‌ ಸಂಖ್ಯೆ ಪಡೆಯುವುದು ಅನಿವಾರ್ಯ. ಇದು ಸರ್ಕಾರವೇ ನಡೆಸುವ ಸಮೀಕ್ಷೆ. ಇದು ದುರ್ಬಳಕೆಯಾಗುವುದಿಲ್ಲ. ಜನ ನಿರಾತಂಕವಾಗಿ ಮೊಬೈಲ್‌ ಸಂಖ್ಯೆ ನೀಡಬಹುದು’ ಎಂದು ರಂದೀಪ್‌ ಹೇಳಿದರು.

ಕನ್ನಡದಲ್ಲಿ ಮಾಹಿತಿ ನೀಡಲು ಏಕಿಲ್ಲ ಅವಕಾಶ?

ಸ್ವಚ್ಛ ಸರ್ವೇಕ್ಷಣ್‌ ಪೋರ್ಟಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಿಲ್ಲ. ಇಂಗ್ಲಿಷ್‌ ಗೊತ್ತಿದ್ದವರು ಮಾತ್ರ ಪ್ರತಿಕ್ರಿಯೆ ದಾಖಲಿಸಬಹುದು. ನಗರದ ಸ್ವಚ್ಛತೆ ಬಗ್ಗೆ ಕೇಂದ್ರ ಸರ್ಕಾರ ಜನರಿಂದ ಪ್ರತಿಕ್ರಿಯೆ ಪಡೆಯಬೇಕಾದರೆ, ಅವರ ಆಡುಭಾಷೆಯಲ್ಲಿ ಮಾಹಿತಿ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

‘ಈ ಅಭಿಯಾನದಲ್ಲಿ ಜನರ ಪ್ರತಿಕ್ರಿಯೆಗೆ 1500 ಅಂಕ ನಿಗದಿ ಪಡಿಸಿ, ಜನರು ಆಡುವ ಭಾಷೆ ಬಳಸುವುದಕ್ಕೆ ಅವಕಾಶ ನೀಡದಿದ್ದರೆ ಹೇಗೆ. ಇಂತಹ ಸಮೀಕ್ಷೆಯಿಂದ ಹೊರಹೊಮ್ಮುವ ಫಲಿತಾಂಶಕ್ಕೆ ಅರ್ಥವಿದೆಯೇ’ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್‌ ಜಾವಗಲ್‌ ಪ್ರಶ್ನಿಸಿದರು.

ಬಿಬಿಎಂಬಿ ವ್ಯಾಪ್ತಿಯ ಸ್ವಚ್ಛತೆ ಬಗ್ಗೆ ಲಂಡನ್‌ ನಿವಾಸಿಗಳಿಂದ ಪ್ರತಿಕ್ರಿಯೆ ಪಡೆಯಲು ಬಯಸುತ್ತದೆಯೇ? ಬೆಂಗಳೂರಿನವರ ಪ್ರತಿಕ್ರಿಯೆ ಬೇಕಿದ್ದರೆ, ಕನ್ನಡದಲ್ಲಿ ಅವಕಾಶ ನೀಡಿ
ಅರುಣ್‌ ಜಾವಗಲ್‌, ಕನ್ನಡ ಗ್ರಾಹಕರ ಕೂಟ

ಅಭಿಯಾನಕ್ಕೆ ನಗರದ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಬೇಕು. ಪರಿಸ್ಥಿತಿಯನ್ನು ಈ ಅಭಿಯಾನದ ಪೋರ್ಟಲ್‌ನಲ್ಲಿ ದಾಖಲಿಸಿ ಉತ್ತಮ ರ‍್ಯಾಂಕ್‌ ಪಡೆಯಲು ಸಹಕರಿಸಬೇಕು

ಡಿ.ರಂದೀಪ್‌, ವಿಶೇಷ ಆಯುಕ್ತ (ಕಸ ವಿಲೇವಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT