ಕೇರಳ ಸಿ.ಎಂ ಹೆಸರಿನಲ್ಲಿ ₹ 30 ಕೋಟಿಗೆ ಆಮಿಷ: ವಿಜೇಶ್ ಪಿಳ್ಳೈ ವಿಚಾರಣೆ

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಕೇರಳದ ಸ್ವಪ್ನಾ ಸುರೇಶ್ ಅವರಿಗೆ ₹ 30 ಕೋಟಿ ಆಮಿಷವೊಡ್ಡಿ ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ವಿಜೇಶ್ ಪಿಳ್ಳೈ ಎಂಬುವವರನ್ನು ಕೆ.ಆರ್.ಪುರ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದರು.
‘ವಿಜೇಶ್ ಪಿಳ್ಳೈ ಅವರು ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ಹೂಡಿ ನಿವಾಸಿ ಸ್ವಪ್ನಾ ಸುರೇಶ್ ಅವರು ಮಾರ್ಚ್ 13ರಂದು ಠಾಣೆಗೆ ದೂರು ನೀಡಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಕಣ್ಣೂರಿನ ವಿಜೇಶ್‌ಗೆ ನೋಟಿಸ್ ನೀಡಲಾಗಿತ್ತು. ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ದೂರುದಾರರು ಕೆಲ ಪುರಾವೆಗಳನ್ನು ನೀಡಿದ್ದಾರೆ. ಅದರ ಜೊತೆಯಲ್ಲಿ ಆರೋಪಿ ಹೇಳಿಕೆಯನ್ನೂ ಪಡೆಯಲಾಗಿದೆ. ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ದೂರಿನ ವಿವರ: ‘ನನ್ನ ಮೊಬೈಲ್‌ಗೆ ಮಾರ್ಚ್ 4ರಂದು ಕರೆ ಮಾಡಿದ್ದ ವಿಜೇಶ್ ಪಿಳ್ಳೈ, ವೈಟ್‌ಫೀಲ್ಡ್ ರಸ್ತೆಯಲ್ಲಿರುವ ರಿ ಜ್ಯೂರಿ ಹೋಟೆಲ್‌ಗೆ ಬರುವಂತೆ ಹೇಳಿದ್ದರು. ಅದರಂತೆ ನಾನು ಹೋಟೆಲ್‌ಗೆ ಹೋಗಿದ್ದೆ’ ಎಂದು ದೂರಿನಲ್ಲಿ ಸ್ವಪ್ನಾ ಸುರೇಶ್ ತಿಳಿಸಿದ್ದಾರೆ.
‘ತಮ್ಮ ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಕಳುಹಿಸಿರುವುದಾಗಿ ಹೇಳಿ ವಿಜೇಶ್ ಪರಿಚಯ ಮಾಡಿಕೊಂಡಿದ್ದ. ‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧದ ವಿಷಯವನ್ನು ಸಂಧಾನ ಮಾಡಿಕೊಳ್ಳಿ. ಇದಕ್ಕೆ ಪ್ರತಿಯಾಗಿ₹ 30 ಕೋಟಿ ಕೊಡುತ್ತೇವೆ. ಅದನ್ನು ತೆಗೆದುಕೊಂಡು, ವಾರದೊಳಗೆ ಬೆಂಗಳೂರು ಬಿಟ್ಟು ಹೋಗಿ. ಇಲ್ಲದಿದ್ದರೆ, ನಿಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರಿಸಿ ಭಯೋತ್ಪಾದಕ ಕೃತ್ಯದ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ಇದಕ್ಕೂ ಒಪ್ಪದಿದ್ದರೆ, ಕೊಲೆ ಮಾಡುತ್ತೇವೆ’ ಎಂದೂ ವಿಜೇಶ್ ಬೆದರಿಸಿದ್ದಾರೆ’ ಎಂದೂ ದೂರಿನಲ್ಲಿಉಲ್ಲೇಖಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.