ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಈಜು ಕೇಂದ್ರ

Last Updated 2 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈಜು ತರಬೇತಿ ನೀಡಲು ಸರ್ಕಾರದಿಂದ ಪಡೆದ ಪ್ರಮಾಣ ಪತ್ರ ಕಡ್ಡಾಯ. ನುರಿತ ತಜ್ಞರಿಗೆ ಮಾತ್ರ ತರಬೇತಿ ನಡೆಸಲು ಅವಕಾಶವಿದೆ. ಅತ್ಯಂತ ಕಿರಿ ವಯಸ್ಸಿನ ಮಕ್ಕಳಿಗೆ ಈಜು ಕಲಿಸುವ ಬೆರಳೆಣಿಕೆ ಕೇಂದ್ರಗಳು ನಗರದಲ್ಲಿವೆ.

ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಈಜು ಕಲಿಯುವುದು ಒಳ್ಳೆಯ ಅಭ್ಯಾಸ. ಚಿಕ್ಕ ವಯಸ್ಸಿನಲ್ಲಿಯೇ ಈಜುವುದನ್ನು ಕಲಿತರೆ ಮುಂದೊಂದು ದಿನ ಇದು ಒಂದು ಸಾಮರ್ಥ್ಯವಾಗಿ ರೂಪುಗೊಳ್ಳಲಿದೆ ಎಂಬ ಮಾತು ಇದೆ.

ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢ ಶಾಲೆಯಲ್ಲಿರುವ ಈಜು ಕೊಳದಲ್ಲಿ ಕಳೆದ ಮೂರು ವರ್ಷಗಳಿಂದ ‘ಇನ್‌ಫ್ಯಾಂಟ್ಸ್‌ ಆ್ಯಂಡ್ ಟಾಡ್ಲರ್ಸ್‌’ ಕೇಂದ್ರ ಆರಂಭಗೊಂಡಿದೆ.

ವಾರದಲ್ಲಿ ಎರಡು ದಿನ ಶನಿವಾರ ಮತ್ತು ಭಾನುವಾರ ಮಾತ್ರ ಚಿಕ್ಕಮಕ್ಕಳಿಗೆ ಇಲ್ಲಿ ಈಜು ಹೇಳಿಕೊಡಲಾಗುತ್ತದೆ. ಬೆಳಿಗ್ಗೆ 10ರಿಂದ 10.30, 10.30 ರಿಂದ 11 ಎರಡು ಬ್ಯಾಚ್ ಮಾಡಲಾಗಿದೆ. ಪ್ರಮಾಣ ಪತ್ರ ಪಡೆದುಕೊಂಡ ನುರಿತ ಕೋಚ್‌ಗಳಾದ ಎಂ.ಸತೀಶ್‌ ಕುಮಾರ್‌, ವಿ.ಮಂಜುನಾಥ್‌ ಹಾಗೂ ವಿಜಯ್‌ ನೀಲಕಂಠಯ್ಯ ಅವರು ಇಲ್ಲಿ ಮಕ್ಕಳಿಗೆ ಈಜು ಕಲಿಸುತ್ತಿದ್ದಾರೆ.

ಸುರಕ್ಷತೆ: ‘ಚಿಕ್ಕ ಮಕ್ಕಳಿಗೆ ಈಜು ಕಲಿಸಲು ಬೇಕಾಗಿರುವ ಎಲ್ಲಾ ಸುರಕ್ಷತೆ ಇಲ್ಲಿದೆ. ಮಕ್ಕಳು ನೀರಿಗೆ ಇಳಿಯುವ ಮೊದಲು ಮಗುವಿನ ತಂದೆ, ತಾಯಿ ಅಥವಾ ಸಂಬಂಧಿಯೊಬ್ಬರು ಮೊದಲೇ ಈಜುಕೊಳದಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಕನಿಷ್ಟ ಇಬ್ಬರು ತರಬೇತುದಾರರು ನೀರಿನಲ್ಲಿ ಮೊದಲೇ ಇರುತ್ತಾರೆ. ಚಿಕ್ಕ ಮಕ್ಕಳಿಗೆ ಕಲಿಸುವಾಗ 3 ಅಡಿಗಿಂತ ಹೆಚ್ಚು ನೀರು ಇರದಂತೆ ನೋಡಿಕೊಳ್ಳಲಾಗುತ್ತದೆ. ವಾಟರ್‌ ಬೆಡ್‌ ಇಟ್ಟುಕೊಂಡೇ ಕಲಿಸಲಾಗುತ್ತದೆ’ ಎನ್ನುತ್ತಾರೆ ಕೋಚ್‌ ವಿಜಯ್‌ ನೀಲಕಂಠಯ್ಯ.

ಮಾನಸಿಕ ದೃಢತೆ: ಆರು ತಿಂಗಳಿನಿಂದಲೇ ಈಜು ಪ್ರಾರಂಭಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಉಸಿರಾಟ, ಅಸ್ತಮಾದಂಥ ಆರೋಗ್ಯ ಸಂಬಂಧಿ ತೊಂದರೆಗಳಿದ್ದರೆ ಕ್ರಮೇಣ ಕಡಿಮೆಯಾಗುತ್ತದೆ. ಉತ್ತಮ ವ್ಯಾಯಾಮ ಸಿಗುವುದರಿಂದ ಮಗುವಿನ ದೈಹಿಕ ವಿಕಾಸದಲ್ಲಿ ನೆರವಾಗುತ್ತದೆ. ದೈರ್ಯ ಹಾಗೂ ಒತ್ತಡ ರಹಿತ ಜೀವನಶೈಲಿಗಾಗಿ ಈಜು ಮುಖ್ಯ ಎನ್ನುತ್ತಾರೆ ಕೋಚ್‌.

‘ಚಿಕ್ಕಮಕ್ಕಳೊಂದಿಗೆ ತಂದೆ, ತಾಯಿ ನೀರಿಗಿಳಿದು ಅಭ್ಯಾಸ ಮಾಡುವುದರಿಂದ ಅವರ ನಡುವಿನ ಬಾಂಧವ್ಯ ವೃದ್ಧಿಯಾಗುತ್ತದೆ. ಮಗುವನ್ನು ಅಪ್ಪಿ ನೀರಿನಲ್ಲಿ ಆಟ ಆಡುತ್ತಾರೆ. ನೀರಿನಿಂದ ತೊಂದರೆಯಾಗದಂತೆ ಕಾಳಜಿ ವಹಿಸುತ್ತಾರೆ. ಈ ಕಾರಣದಿಂದಲೇ ಹೆಚ್ಚಿನವರು ಇಲ್ಲಿಗೆ ಈಜು ಕಲಿಯಲು ಬರುತ್ತಾರೆ. ಚಿಕ್ಕ ಮಕ್ಕಳಿಗೆ ನುರಿತ ತಜ್ಞರು ಈಜು ಹೇಳಿಕೊಡುವ ಅವಕಾಶ ಸಿಗುವುದು ತೀರಾ ಕಡಿಮೆ. ಆದ್ದರಿಂದ ಇಲ್ಲಿಗೆ ಚೆನ್ನೈನಿಂದಲೂ ಮಕ್ಕಳು ಬರುತ್ತಿದ್ದಾರೆ. ಬೆಂಗಳೂರಿನ ಎಲ್ಲಾ ಭಾಗಗಳಿಂದಲೂ ಮಕ್ಕಳು ಬರುತ್ತಾರೆ. ಈಗ ಎರಡೂ ಬ್ಯಾಚ್‌ ಸೇರಿ 25ರಿಂದ 30 ಮಕ್ಕಳು ಇದ್ದಾರೆ’ ಎಂದು ನೀಲಕಂಠಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT