ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಬ್ಯಾಂಕ್‌ನಿಂದ ₹ 5 ಲಕ್ಷ ಕದ್ದರು

ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೃತ್ಯ
Last Updated 4 ಜುಲೈ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್‌ನ ಚಾಮರಾಜಪೇಟೆ ಶಾಖೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಎಂಟು ದುಷ್ಕರ್ಮಿಗಳ ತಂಡ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ₹ 5 ಲಕ್ಷ ಕದ್ದೊಯ್ದಿದೆ.

ಆ ಸಂಬಂಧ ಬ್ಯಾಂಕ್‌ನ ಹಿರಿಯ ಶಾಖಾ ವ್ಯವಸ್ಥಾಪಕ ಬಿಪ್ಲಬ್ ಗೋರೈ ಅವರು ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.

‘ಜೂನ್ 28ರಂದು ಸಂಜೆ ಬ್ಯಾಂಕ್ ವ್ಯವಹಾರದ ಅವಧಿ ಮುಗಿದ ಮೇಲೆ, ನಗದು ಕೇಂದ್ರದಲ್ಲಿದ್ದ ಹಣ ಎಣಿಕೆ ಮಾಡಲಾಗಿತ್ತು. ₹ 5 ಲಕ್ಷ ಕಡಿಮೆ ಇರುವುದು ಗಮನಕ್ಕೆ ಬಂದಿತ್ತು. ಬ್ಯಾಂಕ್‌ನಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹಣ ಕಳುವಾದ ಬಗ್ಗೆ ಹಿರಿಯ ಬ್ಯಾಂಕ್ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿತ್ತು’ ಎಂದು ಬಿಪ್ಲಬ್ ದೂರಿನಲ್ಲಿ ತಿಳಿಸಿದ್ದಾರೆ.

‘ಜೂನ್ 30ರಂದು ಎರಡನೇ ಬಾರಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅವಾಗಲೇ ಎಂಟು ದುಷ್ಕರ್ಮಿಗಳಿಂದ ತಂಡ, ಹಣವನ್ನು ಕದ್ದುಕೊಂಡು ಹೋಗಿದ್ದು ತಿಳಿಯಿತು’ ಎಂದು ಹೇಳಿದ್ದಾರೆ.

‘ಜೂನ್ 28ರಂದು ಬೆಳಿಗ್ಗೆ 10.10ರಿಂದ 10.20ರ ಅವಧಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬ್ಯಾಂಕ್‌ಗೆ ಬಂದಿದ್ದ ದುಷ್ಕರ್ಮಿಗಳು, ನಗದು ಕೇಂದ್ರದಲ್ಲಿದ್ದ ನೌಕರ ಎ. ವೇಲು ಎಂಬುವರ ಗಮನ ಬೇರೆಡೆ ಸೆಳೆದಿದ್ದರು. ಕೇಂದ್ರದ ತೆರೆದ ಕ್ಯಾಬಿನ್‌ನೊಳಗೆ ಕೈ ಹಾಕಿ ಹಣ ಕದ್ದಿದ್ದಾರೆ. ನಂತರ, ಒಬ್ಬೊಬ್ಬರಾಗಿ ಬ್ಯಾಂಕ್‌ನಿಂದ ಹೊರಟು ಹೋಗಿದ್ದಾರೆ. ಈ ದೃಶ್ಯಗಳು ಸೆರೆಯಾಗಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚಾಮರಾಜಪೇಟೆ ಪೊಲೀಸರು, ‘ದುಷ್ಕರ್ಮಿಗಳು ಗ್ಯಾಂಗ್ ಕಟ್ಟಿಕೊಂಡು ಹಾಡಹಗಲೇ ಬ್ಯಾಂಕ್‌ಗೆ ಹೋಗಿ ಕೃತ್ಯ ಎಸಗಿದ್ದಾರೆ. ಇದೊಂದು ಹೊರ ರಾಜ್ಯದ ಗ್ಯಾಂಗ್ ಇರಬಹುದು ಎಂಬ ಶಂಕೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT