ಮಂಗಳವಾರ, ಫೆಬ್ರವರಿ 25, 2020
19 °C
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಪ್ರತಿಭಟನೆ l ‘ಶಾಹೀನ್ ಬಾಗ್’ ಮಾದರಿ ಧರಣಿ

ಟ್ಯಾನರಿ ರಸ್ತೆಯಲ್ಲಿ ‘ಬಿಲಾಲ್ ಬಾಗ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರೋಧಿಸಿ ದೆಹಲಿಯ ‘ಶಾಹೀನ್ ಬಾಗ್‌’ ಮಾದರಿಯಲ್ಲಿ ನಗರದ ಟ್ಯಾನರಿ ರಸ್ತೆಯಲ್ಲಿ ಹಮ್ಮಿಕೊಂಡಿರುವ ‘ಬಿಲಾಲ್ ಬಾಗ್’ ಅನಿರ್ದಿಷ್ಟಾವಧಿ ಧರಣಿ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ.

ನಗರದ ವಿದ್ಯಾರ್ಥಿಗಳು ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ‘ಬಿಲಾಲ್’ ಮಸೀದಿ ಪಕ್ಕದ ರಸ್ತೆಯಲ್ಲಿ ಹಮ್ಮಿಕೊಂಡಿರುವ ಧರಣಿ ಗುರುವಾರ ಆರನೇ ದಿನ ಪೂರೈಸಿತು. ಮೊದಲ ದಿನ ಸುಮಾರು 20 ಮಂದಿ ಮಾತ್ರ ಧರಣಿಯಲ್ಲಿ ಪಾಲ್ಗೊಂಡಿದ್ದರು. ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ 100ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರು.

ಜಾಮಿಯಾ ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಕೀಲರು, ಹೋರಾಟಗಾರರು ಹಾಗೂ ಹಲವು ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ದಿನದ 24 ಗಂಟೆಯೂ ನಡೆಯುವ ಹೋರಾಟದಲ್ಲೇ ನಿತ್ಯವೂ ಒಂದೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶುಕ್ರವಾರವೂ ಚಿತ್ರಕಲೆ ಸ್ಪರ್ಧೆ, ಪುಸ್ತಕಗಳ ಓದು, ಕಾವ್ಯ ಸಂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಹಣೆಗೆ ಕೆಂಪು ಬಿಂದಿ ಹಚ್ಚಿಕೊಂಡಿದ್ದರು.

ಹಲವು ಪ್ರತಿಭಟನಕಾರರು, ಡಾ. ಬಿ.ಆರ್‌.ಅಂಬೇಡ್ಕರ್‌ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಮುಖವಾಡವನ್ನೂ ಧರಿಸಿ ಘೋಷಣೆ ಕೂಗಿದರು. ಅಂಕಣಕಾರ ಆಕಾರ್ ಪಟೇಲ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

‘ಬೆಂಗಳೂರಿನಲ್ಲಿ ‘ಶಾಹೀನ್ ಬಾಗ್’ ಮಾದರಿ ಹೋರಾಟ ನಡೆಸುವುದು ನಮ್ಮ ಉದ್ದೇಶ. ಹೀಗಾಗಿಯೇ ‘ಬಿಲಾಲ್‌ ಬಾಗ್’ ಧರಣಿ ಹಮ್ಮಿಕೊಂಡಿದ್ದೇವೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ’ ಎಂದು ಆಯೋಜಕ ಸಯ್ಯದ್ ಸಮೀವುದ್ದೀನ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಕೇಂದ್ರ ಸರ್ಕಾರವು ಕಾಯ್ದೆಯನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ರಾಷ್ಟ್ರಮಟ್ಟದ ಹೋರಾಟಗಾರರೂ ಧರಣಿ ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ’ ಎಂದರು.

ಹೋರಾಟಗಾರ್ತಿ ಕವಿತಾ ರೆಡ್ಡಿ, ‘2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಪ್ರಧಾನಿಯವರು ಹೇಳಿದ್ದರು. ಆದರೆ, 20 ಲಕ್ಷ ಜನರಿಗೇ ಕೆಲಸ ನೀಡಲು ಆಗಿಲ್ಲ. ಬೆಳಿಗ್ಗೆ ಪಾಕಿಸ್ತಾನ್ ಹಾಗೂ ಸಂಜೆ ಬಾಂಗ್ಲಾದೇಶ ಎನ್ನುತ್ತಲೇ ದಿನ ಕಳೆಯುತ್ತಿದ್ದಾರೆ. ಇದೀಗ ಸಿಎಎ ತಂದು ದೇಶವನ್ನು ಒಡೆಯುತ್ತಿದ್ದಾರೆ’ ಎಂದು ಹೇಳಿದರು.

'ಮನವಿ ಸಲ್ಲಿಸಿ ಹೋರಾಟ’: ‘ಸ್ಥಳೀಯರ ಸಹಕಾರ ಪಡೆದು ರಸ್ತೆಯಲ್ಲಿ ಧರಣಿ ಮಾಡುತ್ತಿದ್ದೇವೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮನವಿ ಸಲ್ಲಿಸಿದ್ದೇವೆ. ನಮ್ಮದು ಶಾಂತಿಯುತ ಪ್ರತಿಭಟನೆ’ ಎಂದು ಸಯ್ಯದ್ ಸಮೀವುದ್ದೀನ್ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು