ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ತುಘಲಕ್ ಸರ್ಕಾರದ ದರ್ಬಾರ್; ಡಿ.ಕೆ.ಶಿವಕುಮಾರ್ ಆರೋಪ

ಕಾಂಗ್ರೆಸ್‌ನಿಂದ ಬಿಬಿಎಂಪಿ ಚಲೋ
Last Updated 4 ಜನವರಿ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಬಿಬಿಎಂಪಿ ಮೂಲಕ ಬೇಕಾಬಿಟ್ಟಿಯಾಗಿ ತೆರಿಗೆ ಹೆಚ್ಚಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ‘ಬಿಬಿಎಂಪಿ ಚಲೊ’ ರ‍್ಯಾಲಿ ನಡೆಸಿದರು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಘೋಷಣಾ ಫಲಕ ಪ್ರದರ್ಶಿಸಿದರು. ‘ಹೆಚ್ಚಿನ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಇತರರು ತೆರೆದ ವಾಹನದಲ್ಲಿ ನಿಂತು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಡಿ.ಕೆ.ಶಿವಕುಮಾರ್, ‘ಕೊರೊನಾ ಸೋಂಕು ಹರಡುವಿಕೆ ಸಮಯದಲ್ಲಿ ಲಾಕ್‌ಡೌನ್ ಹಾಗೂ ಸೀಲ್ ಡೌನ್ ಮಾಡಿದ್ದ ಸರ್ಕಾರವೇ ಇದೀಗ ಜನಸಾಮಾನ್ಯರ ಮೇಲೆ ಬೇಕಾಬಿಟ್ಟಿಯಾಗಿ ತೆರಿಗೆ ವಿಧಿಸಿ ಆರ್ಥಿಕ ಹೊರೆಯನ್ನುಂಟು ಮಾಡುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಸುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಕಿಡಿಕಾರಿದರು.

‘ಲಾಕ್‌ಡೌನ್‌ನಿಂದ ಜನ ತತ್ತರಿಸಿದ್ದಾರೆ. ನಗರದ ಬಹುತೇಕ ಕಡೆ ವ್ಯಾಪಾರ ವಹಿವಾಟು ಬಂದ್ ಆಗಿದೆ. ಇಂಥ ಸಂದರ್ಭದಲ್ಲೇ ಪಾಲಿಕೆ, ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ತೆರಿಗೆ ಮನ್ನಾ ಮಾಡಬೇಕಿದ್ದ ಸರ್ಕಾರ, ಹೆಚ್ಚಳ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದೆ’ ಎಂದೂ ದೂರಿದರು.

‘ನಗರದಲ್ಲಿರುವ ಬೀದಿ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕರಿಗೆ, ಸಾಂಪ್ರದಾಯಿಕ ವೃತ್ತಿ ಮಾಡುತ್ತಿರುವವರಿಗೆ ತಲಾ ₹ 5 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಪರಿಹಾರವನ್ನು ಒಮ್ಮೆ ಕೊಟ್ಟರೆ ಸಾಲದು, ಕನಿಷ್ಠ 6 ತಿಂಗಳಾದರೂ ಕೊಡಬೇಕು’ ಎಂದು ಅವರು ಆಗ್ರಹಿಸಿದರು.

ಸ್ಥಳೀಯ ವಿಷಯಗಳನ್ನು ಇಟ್ಟುಕೊಂಡು ರಾಜ್ಯದ 150 ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆ ಎಳೆಯುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ರಾಮಲಿಂಗಾ ರೆಡ್ಡಿ, ’ಬಿಬಿಎಂಪಿ ತೆರಿಗೆ ಹೆಚ್ಚಳ ಮಾಡಿ ಜನರನ್ನು ಸುಲಿಗೆ ಮಾಡುತ್ತಿದೆ. ಈ ಹಿಂದೆ ಬಿಜೆಪಿಯು ಪಾಲಿಕೆಯ 11 ಆಸ್ತಿಗಳನ್ನು ಅಡ ಇಟ್ಟಿತ್ತು. ನಾವು ಬಿಡಿಸಿಕೊಂಡಿದ್ದೆವು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT