ಶನಿವಾರ, ಫೆಬ್ರವರಿ 22, 2020
19 °C
ಟಿಡಿಆರ್‌ ವಂಚನೆ ಪ್ರಕರಣ

ಟಿಡಿಆರ್ ವಂಚನೆ ಪ್ರಕರಣ: ಎಂಜಿನಿಯರ್‌ ಕೃಷ್ಣಲಾಲ್‌ಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವಂಚನೆ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದ ಬಿಡಿಎಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣದ ಪ್ರಮುಖ ಆರೋಪಿ ಕೃಷ್ಣಲಾಲ್‌ ಅವರನ್ನು ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎಸಿಬಿ ಅಧಿಕಾರಿಗಳು ಹಾಜರುಪಡಿಸಿದ್ದರು. ಕೌದೇನಹಳ್ಳಿಯಲ್ಲಿ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿದ್ದ ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಟಿಡಿಆರ್‌ ಹಕ್ಕನ್ನು ಮೂಲ ಮಾಲೀಕರನ್ನು ಬಿಟ್ಟು ಬೇರೆಯವರಿಗೆ ವಿತರಿಸಿದ ಆರೋಪ ಕೃಷ್ಣಲಾಲ್‌ ಅವರ ಮೇಲಿದೆ.

ಈ ನಿವೇಶನದ ಪಕ್ಕದಲ್ಲೇ ಸ್ವಾಧೀನಪಡಿಸಿಕೊಂಡಿದ್ದ ಕಟ್ಟಡಕ್ಕೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಟಿಡಿಆರ್‌ಸಿ ನೀಡಲಾಗಿದೆ ಎಂಬ ಆರೋಪವೂ ಇವರ ಮೇಲಿದೆ. ಅಲ್ಲದೆ, ಕೃಷ್ಣಲಾಲ್‌ ಬಿಬಿಎಂಪಿ ಮಹದೇವಪುರ ವಲಯದ ಸಹಾಯಕ ಎಂಜಿನಿಯರ್‌ ಆಗಿದ್ದಾಗ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದ 47 ಕಡತ ನಾಪತ್ತೆಯಾಗಿರುವ ಬಗ್ಗೆಯೂ ದೂರು ದಾಖಲಾಗಿದೆ.

ಟಿಡಿಆರ್‌ ವಂಚನೆ ಪ್ರಕರಣದ ತನಿಖೆಗೆ ಸಹಕರಿಸುವಂತೆ ಸೂಚಿಸಿ, ಲೋಕಾಯುಕ್ತ ಕೋರ್ಟ್‌ ಕೃಷ್ಣಲಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ. ಟಿಡಿಆರ್ ವಂಚನೆ ಸಂಬಂಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ  ಬಿಡಿಎ ಎಂಜಿನಿಯರ್‌ ಅವರನ್ನು ಎಸಿಬಿ ಅಧಿಕಾರಿಗಳು ಇತ್ತೀಚೆಗೆ ಕೋರಮಂಗಲದಲ್ಲಿ ಬಂಧಿಸಿದ್ದರು.

ಇದಕ್ಕೂ ಮೊದಲು ಟಿಡಿಆರ್‌ಸಿ ವಂಚನೆ ಪ್ರಕರಣದಲ್ಲಿ ಕೆಲ ಮಧ್ಯವರ್ತಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಅವರೆಲ್ಲರೂ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇದಲ್ಲದೆ, ಆರೋಪದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇನ್ನೂ ಅನೇಕ ಅಧಿಕಾರಿಗಳ ವಿರುದ್ಧ ಪ್ರಕರಣ  ದಾಖಲಿಸಲು ಅನುಮತಿ ನೀಡುವಂತೆ ಕೇಳಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)