ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಆರ್‌ ಪಡೆದರು: ಜಾಗವನ್ನೂ ಮಾರಿದರು!

ಮತ್ತೊಂದು ಟಿಡಿಆರ್ ಹಗರಣ l ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಸೇರಿ ನಾಲ್ವರು ಎಂಜಿನಿಯರ್‌ಗಳು ಶಾಮೀಲು?
Last Updated 6 ಸೆಪ್ಟೆಂಬರ್ 2021, 22:09 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆಯ (ಟಿಡಿಆರ್‌) ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.‍ಪ್ರಹ್ಲಾದ್‌ ಸೇರಿದಂತೆ ನಾಲ್ವರು ಎಂಜಿನಿಯರ್‌ಗಳು ಇದರಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಟಿಡಿಆರ್‌ ಪಡೆದಿರುವ ಜಾಗವನ್ನೇ ಮಹಿಳೆಯರಿಬ್ಬರು, ₹52 ಲಕ್ಷಕ್ಕೆ ಮಾರಾಟ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಯಲಹಂಕ ವಲಯದ ಯೋಜನಾ ವಿಭಾಗದಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಬಿ.ಎಸ್‌.ಪ್ರಹ್ಲಾದ್‌, ಯಲಹಂಕ ವಲಯದ ರಸ್ತೆ ಮೂಲಸೌಕರ್ಯ ವಿಭಾಗದ ಸಹಾಯಕ ಎಂಜಿನಿಯರ್‌ ವರುಣ್‌ (ಈ ಹಿಂದೆ ಇದೇ ವಲಯದ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್‌), ಆರ್‌.ಆರ್‌.ನಗರ ವಲಯದ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಜೆ.ಆರ್.ನಂದೀಶ್‌ (ಈ ಹಿಂದೆ ಯಲಹಂಕ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್), ನಿವೃತ್ತ ಎಂಜಿನಿಯರ್‌ ಜಾಕೀರ್‌ ಅಲಿ (ಯಲಹಂಕ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌) ವಿರುದ್ಧ ತನಿಖೆಗೆ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ.

ಟಿಡಿಆರ್‌ ವಿತರಣೆ ವೇಳೆ ಅಕ್ರಮ ನಡೆದ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಬಂದಿತ್ತು. ಅಧಿಕಾರಿಗಳು ಅಕ್ರಮ ಎಸಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದ್ದು, ವಿಚಾರಣೆಗೆ ಪೂರ್ವಾನುಮತಿ ನೀಡುವಂತೆ ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ (ಕೇಂದ್ರ ಸ್ಥಾನ) ಅವರು ನಗರಾಭಿವೃದ್ಧಿ ಇಲಾಖೆಯನ್ನು ಕೋರಿದ್ದರು.

ಏನಿದು ಪ್ರಕರಣ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ರಸ್ತೆ ವಿಸ್ತರಣೆಗಾಗಿ ಮೈಲನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನ ಮಾಡಲು ಪಾಲಿಕೆ ತೀರ್ಮಾನಿಸಿತ್ತು. ಈ ಗ್ರಾಮದ ಸರ್ವೆ ಸಂಖ್ಯೆ 46/4ರ 24 ಗುಂಟೆ ಜಮೀನಿನ ಪೈಕಿ 654 ಚ.ಮೀ. (6.46 ಗುಂಟೆ) ಹಾಗೂ ಅದರಲ್ಲಿದ್ದ ಕಟ್ಟಡವನ್ನು ರಸ್ತೆ ನಿರ್ಮಾಣಕ್ಕಾಗಿ ಪಾಲಿಕೆಗೆ ಬಿಟ್ಟುಕೊಟ್ಟು ಇದಕ್ಕೆ ಪ್ರತಿಯಾಗಿ 1,264.34 ಚ.ಮೀ. ವಿಸ್ತೀರ್ಣಕ್ಕೆ ಅಭಿವೃದ್ದಿ ಹಕ್ಕು ಪ್ರಮಾಣಪತ್ರ (ಡಿಆರ್‌ಸಿ) ಪಡೆಯುವ ಬಗ್ಗೆ ಪರಿತ್ಯಾಜ್ಯ ಪತ್ರವನ್ನು ಸ್ವತ್ತಿನ ಮಾಲೀಕರಾದ ಶಾಂತಮ್ಮ ಹಾಗೂ ಪಾರ್ವತಮ್ಮ ಅವರು ಪಾಲಿಕೆಗೆ ನೋಂದಣಿ ಮಾಡಿಕೊಟ್ಟಿದ್ದರು. ನಂತರ ಪಾಲಿಕೆಯವರು ಡಿಆರ್‌ಸಿಯನ್ನು ಸ್ವತ್ತಿನ ಮಾಲೀಕರಿಗೆ ವಿತರಿಸಿದ್ದರು. ಮಹಿಳೆಯರಿಬ್ಬರು ಡಿಆರ್‌ಸಿಯನ್ನು ಪ್ರಸಿದ್ಧಿ ವೆಂಚರ್ಸ್‌ಗೆ ₹54.84 ಲಕ್ಷಕ್ಕೆ ಮಾರಿದ್ದರು.

ನಂತರ, ಶಾಂತಮ್ಮ ಹಾಗೂ ಪಾರ್ವತಮ್ಮ ಅವರು ಸರ್ವೆ ಸಂಖ್ಯೆ 46/4ರ 24 ಗುಂಟೆಯನ್ನು ಧನಂಜಯ ಆರ್‌. ಎಂಬುವರಿಗೆ ₹52 ಲಕ್ಷಕ್ಕೆ ಮಾರಾಟ ಮಾಡಿದ್ದರು. ‘ಗ್ರಾಮದ ಸರ್ವೆ ಸಂಖ್ಯೆ 46/1ರಲ್ಲಿ ಹಾದು ಹೋಗಿರುವ ರಸ್ತೆಯನ್ನು ಸರ್ವೆ ಸಂಖ್ಯೆ 46/4ರಲ್ಲಿ ಹಾದು ಹೋಗಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸ್ವತ್ತಿನ ವಾಸ್ತವ ಮಾಲೀಕತ್ವವನ್ನು ಮರೆ ಮಾಡಿ ಟಿಡಿಆರ್‌ ವಿತರಿಸಲಾಗಿದೆ. ನಾಲ್ವರು ಎಂಜಿನಿಯರ್‌ಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ನಗರಾಭಿವೃದ್ಧಿ ಇಲಾಖೆಯು ಆದೇಶದಲ್ಲಿ ತಿಳಿಸಿದೆ.

ಅಕ್ರಮ ನಡೆಸಿದ್ದು ಹೇಗೆ?

lನಿಯಮಾನುಸಾರವಾಗಿ ಪರಿತ್ಯಾಜ್ಯ ಪತ್ರ ಪಡೆದು ಜಮೀನು ವಶಕ್ಕೆ ತೆಗೆದುಕೊಂಡ ಬಳಿಕವೇ ಟಿಡಿಆರ್‌ ವಿತರಿಸಬೇಕು. ಆದರೆ, ಬಿಬಿಎಂಪಿ ಅಧಿಕಾರಿಗಳು ಪರಿತ್ಯಾಜ್ಯ ಪತ್ರ (2013ರ ಜನವರಿ) ಪಡೆದುಕೊಳ್ಳುವ ಮುನ್ನವೇ ಟಿಡಿಆರ್ (2012ರ ಡಿ.29) ವಿತರಿಸಿದ್ದಾರೆ.

lಯೋಜನೆಗೆ ಮೈಲನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 46/1ರ ಜಮೀನು ಅಗತ್ಯವಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಸರ್ವೆ ಸಂಖ್ಯೆ 46/4ರ ಜಮೀನಿಗೆ ಟಿಡಿಆರ್‌ ನೀಡಿದ್ದಾರೆ.

lಮೈಲನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 46/4ರಲ್ಲಿ 654 ಚ.ಮೀ. ಜಾಗಕ್ಕೆ ಟಿಡಿಆರ್ ನೀಡಿದ್ದರೂ ಈ ಜಾಗವನ್ನು ಪಾಲಿಕೆ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿಲ್ಲ. ರಸ್ತೆ ವಿಸ್ತರಣೆಗೆ ಶಾಂತಮ್ಮ ಹಾಗೂ ಪಾರ್ವತಮ್ಮ ಜಮೀನು ಅಗತ್ಯವಿಲ್ಲದಿದ್ದರೂ ಟಿಡಿಆರ್‌ ನೀಡಲಾಗಿದೆ. ಶಾಂತಮ್ಮ ಹಾಗೂ ‍ಪಾರ್ವತಮ್ಮ ಅವರು ಟಿಡಿಆರ್‌ ಮಾರಾಟ ಮಾಡಿ ₹54.84 ಲಕ್ಷ ಲಾಭ ಮಾಡಿಕೊಂಡಿದ್ದಾರೆ. ನಂತರ ಅದೇ ಜಾಗವನ್ನು ₹52 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಪ್ರಕರಣ ಮುಚ್ಚಿ ಹಾಕುವ ಯತ್ನ?

ಟಿಡಿಆರ್‌ ಹಗರಣ ಸಂಬಂಧ ಜೆ.ಆರ್‌.ನಂದೀಶ್‌ ಅವರನ್ನು ಸೇವೆಯಿಂದ ಅಮಾನತು ಮಾಡಿ ಪಾಲಿಕೆಯ ಅಂದಿನ ಉಪ ಆಯುಕ್ತರಾದ (ಆಡಳಿತ) ಶಿಲ್ಪಾ 2014ರಲ್ಲಿ ಆದೇಶ ಹೊರಡಿಸಿದ್ದರು. ಬಳಿಕ, ನಂದೀಶ್‌ ಅವರಿಂದ ಲೋಪವಾಗಿಲ್ಲ ಎಂದು ಶಿಲ್ಪಾ ಅವರೇ ಆರೋಪಮುಕ್ತ ಮಾಡಿದ್ದರು. ಈ ಮೂಲಕ ಭಾರಿ ಮೊತ್ತದ ಟಿಡಿಆರ್ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗಿತ್ತು. ಬಳಿಕ ನಂದೀಶ್‌ ಅವರಿಗೆ ದೊಡ್ಡ ದೊಡ್ಡ ಯೋಜನೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿತ್ತು ಎಂದು ನಗರಾಭಿವೃದ್ಧಿ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT