ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಅನುಯಾಯಿಗಳ ಉತ್ಸಾಹ ಹೆಚ್ಚಿಸಿದ ಮಳೆ

ಅನುರಣಿಸಿದ ‘ಮೋದಿ... ಮೋದಿ’ ಘೊಷಣೆ * ರಾರಾಜಿಸಿದ ಪ್ರಧಾನಿ ಚಿತ್ರಗಳು
Published 20 ಏಪ್ರಿಲ್ 2024, 21:24 IST
Last Updated 20 ಏಪ್ರಿಲ್ 2024, 21:24 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆ ಮೈದಾನದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ ಆರಂಭವಾಗುವ ಮುನ್ನ ಐದು ನಿಮಿಷ ಮಳೆ ಸುರಿಯಿತು. ‘ಮೋದಿ... ಮೋದಿ..’ ಎಂದು ಘೋಷಣೆ ಕೂಗುತ್ತಾ ಪ್ರಧಾನಿಯವರ ಆಗಮನಕ್ಕೆ ಕಾಯುತ್ತಿದ್ದ ಕಾರ್ಯಕರ್ತರಿಗೆ ಮಳೆ ಇನ್ನಷ್ಟು ಹುರುಪು ತುಂಬಿತು.

‘ಕಾಂಗ್ರೆಸ್‌ನ ‘ಐರನ್ ಲೆಗ್’ನಿಂದಾಗಿ ಮಳೆ ಕೈಕೊಟ್ಟಿತ್ತು. ಬರಗಾಲ ಬಂದಿತ್ತು. ನರೇಂದ್ರ ಮೋದಿಯವರು ಬರುತ್ತಿದ್ದಂತೆ ಮಳೆ ಬಂದಿದೆ. ಇದು ಮೋದಿಯವರ ಕಾಲ್ಗುಣ’ ಎಂದು ನಿರೂಪಕರು ಬಣ್ಣಿಸಿ ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ತುಂಬಿದರು.

ಮೋದಿ ಕೈ ಮುಗಿಯುತ್ತಾ ವೇದಿಕೆಗೆ ಬಂದು ಜನರತ್ತ ಕೈ ಬೀಸಿದಾಗ ‘ಮೋದಿ.. ಮೋದಿ..’ ಕೂಗು, ಶಿಳ್ಳೆ, ಚಪ್ಪಾಳೆಗಳ ಸದ್ದು ಅನುರಣಿಸಿತು. ಕೆಲವರು ಮೋದಿ ಮುಖವಾಡ ಹಾಕಿಕೊಂಡಿದ್ದರೆ ಬಹುತೇಕರ ಕೈಯಲ್ಲಿ ಮೋದಿ ಚಿತ್ರವಿದ್ದ ಫಲಕಗಳಿದ್ದವು. ಬಿಜೆಪಿ ಬಾವುಟಗಳನ್ನು ಬೀಸುತ್ತಾ ಫಲಕಗಳನ್ನು ಪ್ರದರ್ಶಿಸಿದರು. 

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಕೈಕುಲುಕಿದ ಮೋದಿ ಆರೋಗ್ಯ ವಿಚಾರಿಸಿದರು. ‘ಕಿವಿ ಸರಿ ಇದೆಯಾ’ ಎಂದು ಸಂಜ್ಞೆ ಮಾಡಿ ಕೇಳಿದರು. ಸಂಸದ ಡಿ.ವಿ.ಸದಾನಂದ ಗೌಡರೊಂದಿಗೆ ಆಪ್ತವಾಗಿ ಮಾತನಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ.ಸಿ.ಮೋಹನ್‌, ಬೆಂಗಳೂರು ದಕ್ಷಿಣದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಅವರ ಹೆಸರನ್ನು ಉಲ್ಲೇಖಿಸಿ ಇವರನ್ನು ಗೆಲ್ಲಿಸಿಕೊಡುವಂತೆ ಮೋದಿಯವರು ಕೋರಿದರು.

‘ಕರಗ ಶಾಲು’ ಹೊದಿಸಿ ಸನ್ಮಾನ: ನರೇಂದ್ರ ಮೋದಿಯವರಿಗೆ ‘ಕರಗ ಶಾಲು’ ಹೊದಿಸಿ, ಹತ್ತು ಕೈಗಳ ಮಹಾವಿಷ್ಣುವಿನ ವಿಗ್ರಹ ನೀಡಿ ಬಿಜೆಪಿ ನಾಯಕರು ಸನ್ಮಾನಿಸಿದರು. ಬಳಿಕ ಮಹಿಳೆಯರಿಂದ ಸನ್ಮಾನ ನಡೆಯಿತು.

ಮೋದಿಗಾಗಿ ಬಂದ ಎನ್‌ಆರ್‌ಐ!: ‘ಐ ಆ್ಯಮ್‌ ಎನ್‌ಆರ್‌ಐ, ಕೇಮ್‌ ಫ್ರಂ ಅಮೆರಿಕ, ಟು ಸಪೋರ್ಟ್‌ ಮೋದಿ, ವಿ ಲವ್‌ ಯು’ ಎಂದು ಅನಿವಾಸಿ ಭಾರತೀಯನೊಬ್ಬ ದೊಡ್ಡ ಫಲಕ ಹಿಡಿದುಕೊಂಡು ಸಭಾಂಗಣದಲ್ಲಿ ಸುತ್ತಾಡುತ್ತಾ ಗಮನ ಸೆಳೆದರು.

ತಡವಾದ ಜನರಾಗಮನ: ಕಾರ್ಯಕ್ರಮ ಆರಂಭಕ್ಕಿಂತ ಎರಡು ತಾಸು ಮೊದಲೇ ಜನರು ಬರಲಾರಂಭಿಸಿದ್ದರು. ಮುಖ್ಯ ಸಭಾಂಗಣ ತುಂಬಿ ಹೋಗಿತ್ತು. ಮೋದಿ ಅವರು ಸರಿಯಾಗಿ 5 ಗಂಟೆಗೆ ಕಾರ್ಯಕ್ರಮಕ್ಕೆ ಬಂದರೆ,  ಮೋದಿ ಭಾಷಣ ಶುರು ಮಾಡಿದ ಮೇಲೂ ಜನರು ಬರುತ್ತಿದ್ದರು. ಅಕ್ಕಪಕ್ಕದಲ್ಲಿ ಹಾಕಿದ್ದ ಕುರ್ಚಿಗಳು ಭರ್ತಿಯಾಗುವ ಹೊತ್ತಿಗೆ ಪ್ರಧಾನಿಯವರ ಅರ್ಧ ಭಾಷಣ ಮುಗಿದಿತ್ತು. ಪಿಂಕ್‌ ಬಾಕ್ಸ್‌ಗಳ ಮೂಲಕ ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. 

ಮತ್ತೊಮ್ಮೆ ಮೋದಿ ಸರ್ಕಾರ ಎಂದು ಜನರಿಂದ ಹೇಳಿಸಿದ ನರೇಂದ್ರ ಮೋದಿ ಅವರು, ‘ನನಗಾಗಿ ನೀವು ಮನೆ ಮನೆಗೆ ತೆರಳಿ ಮತ ಹಾಕಿಸಬೇಕು’ ಎಂದು ಕೋರಿದರು.

ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ​​, ರಾಜ್ಯಸಭಾ ಸದಸ್ಯ ಜಗ್ಗೇಶ್‌, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಬೈರತಿ ಬಸವರಾಜ, ಸುರೇಶ್‌ ಕುಮಾರ್‌, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ರವಿ ಸುಬ್ರಮಣ್ಯ, ಮುನಿರತ್ನ, ಸಿ.ಕೆ. ರಾಮಮೂರ್ತಿ, ಸತೀಶ್‌ ರೆಡ್ಡಿ, ಉದಯ್‌ ಬಿ. ಗರುಡಾಚಾರ್‌ ಪಾಲ್ಗೊಂಡಿದ್ದರು.

‘ನಾನೂ ಮೋದಿ ಪರಿವಾರ’ ಎಂದು ಬಿಜೆಪಿ ಕಾರ್ಯಕರ್ತೆಯರು ಫಲಕ ಪ್ರದರ್ಶಿಸಿದರು.–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
‘ನಾನೂ ಮೋದಿ ಪರಿವಾರ’ ಎಂದು ಬಿಜೆಪಿ ಕಾರ್ಯಕರ್ತೆಯರು ಫಲಕ ಪ್ರದರ್ಶಿಸಿದರು.–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT