ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಹೊರಬಂದು ಕಳ್ಳತನ; ಆರೋಪಿ ಬಂಧನ

Last Updated 3 ನವೆಂಬರ್ 2020, 14:52 IST
ಅಕ್ಷರ ಗಾತ್ರ

ಬೆಂಗಳೂರು: ದುಶ್ಚಟಗಳಿಗೆ ಹಣ ಹೊಂದಿಸಲು ಸುಲಿಗೆ ಹಾಗೂ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮನೋಜ್‌ಕುಮಾರ್ (20) ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸೂರ್ಯ ಭಾಸ್ಕರ್ (45) ಬಂಧಿತರು ಅವರಿಂದ ₹ 56 ಲಕ್ಷ ಮೌಲ್ಯದ 1 ಕೆ.ಜಿ. 167 ಗ್ರಾಂ ಚಿನ್ನಾಭರಣ ಹಾಗೂ 300 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘9ನೇ ತರಗತಿವರೆಗೆ ಓದಿದ್ದ ಮನೋಜ್‌ಕುಮಾರ್, ತಮಿಳುನಾಡಿನ ಕಂಪನಿಯೊಂದರಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ. ದುಶ್ಚಟಗಳ ದಾಸನಾಗಿದ್ದ ಆತ, ದುಡಿದ ಹಣವನ್ನೆಲ್ಲ ಅದಕ್ಕೆ ಖರ್ಚು ಮಾಡುತ್ತಿದ್ದ. ಹಣ ಸಾಲದಿದ್ದಾಗ ಸುಲಿಗೆ ಹಾಗೂ ಕಳವು ಮಾಡಲಾರಂಭಿಸಿದ್ದ.’

‘2 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮನೋಜ್‌ಕುಮಾರ್ ಸುಲಿಗೆ ಮಾಡಿದ್ದ. ಆ ಪ್ರಕರಣದಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆತ, ಮನೆಗಳಲ್ಲಿ ಕಳವು ಮಾಡಲಾರಂಭಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಹಗಲಿನಲ್ಲಿ ನಗರದ ಹಲವು ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ಆರೋಪಿ, ಬೀಗ ಹಾಕಿದ್ದ, ರಂಗೋಲಿ ಇಲ್ಲದ ಹಾಗೂ ಹೆಚ್ಚು ಕಸ ಬಿದ್ದಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದ. ರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ.’

‘ಮನೋಜ್‌ಕುಮಾರ್ ಕೃತ್ಯಕ್ಕೆ ಆರೋಪಿ ಸೂರ್ಯ ಭಾಸ್ಕರ್ ಸಹಕಾರ ನೀಡುತ್ತಿದ್ದ. ಚಿನ್ನದ ಕೆಲಸ ಮಾಡುತ್ತಿದ್ದ ಸೂರ್ಯ, ಮನೋಜ್ ತಂದುಕೊಡುತ್ತಿದ್ದ ಆಭರಣಗಳನ್ನು ಮಾರುತ್ತಿದ್ದ. ಬಂದ ಹಣದಲ್ಲಿ ಕಮಿಷನ್ ಪಡೆದು ಉಳಿದ ಹಣವನ್ನು ನೀಡುತ್ತಿದ್ದ. ಇವರಿಬ್ಬರ ಬಂಧನದಿಂದ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ಪ್ರಕರಣಗಳು ಬಯಲಾಗಿವೆ. ಮತ್ತಷ್ಟು ಕಡೆ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿಯೂ ಇದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT