ಸೋಮವಾರ, ಆಗಸ್ಟ್ 19, 2019
28 °C

ಕದ್ದ ಹಣದಲ್ಲೇ ಪತ್ನಿಯರ ಜೊತೆ ಶಾಪಿಂಗ್ !

Published:
Updated:
Prajavani

ಬೆಂಗಳೂರು: ನಗರದ ಹಲವೆಡೆ ಮನೆಗಳಲ್ಲಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ಮಂಗಮ್ಮನಪಾಳ್ಯದ ಸೈಯ್ಯದ್ ಇಮ್ರಾನ್ (22) ಹಾಗೂ ಸಿದ್ದಾಪುರ ಟ್ಯಾಂಕ್ ಗಾರ್ಡನ್‌ನ ವಸೀಂ ಅಕ್ರಮ ಅಲಿಯಾಸ್ ಬ್ಲೇಡ್ ವಸೀಂ (24) ಬಂಧಿತರು. ಇಬ್ಬರಿಂದಲೂ ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

‘ಬೀಗ ಹಾಕಿರುತ್ತಿದ್ದ, ರಂಗೋಲಿ ಇರದ ಹಾಗೂ ಬಾಗಿಲು ಬಳಿ ಹೆಚ್ಚು ಕಸ ಬಿದ್ದಿರುವ ಮನೆಗಳನ್ನು ಗುರುತಿಸಿ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಇಬ್ಬರೂ ಒಟ್ಟಿಗೆ ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕದ್ದುಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ತಿಂಗಳ ಹಿಂದೆಯೇ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಅವರಿಬ್ಬರು, ಪುನಃ ಕೃತ್ಯ ಎಸಗಲಾರಂಭಿಸಿದ್ದರು’ ಎಂದು ತಿಳಿಸಿದರು.

‘ಕದ್ದ ಚಿನ್ನಾಭರಣವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು, ಅದರಿಂದ ಬಂದ ಹಣದಲ್ಲೇ ಪತ್ನಿಯರ ಜೊತೆ ಶಾಪಿಂಗ್ ಮಾಡುತ್ತಿದ್ದರು. ದುಶ್ಚಟಗಳಿಗೂ ಖರ್ಚು ಮಾಡುತ್ತಿದ್ದರು’ ಎಂದರು.

‘ತಮ್ಮ ಮೇಲಿನ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರಿಗೂ ಅದೇ ಹಣ ಕೊಡುತ್ತಿದ್ದರು.’

‘ಇವರಿಬ್ಬರ ಬಂಧನದಿಂದ ಕೋರಮಂಗಲ, ತಿಲಕ್‍ನಗರ, ಬೊಮ್ಮನಹಳ್ಳಿ, ವಿವೇಕನಗರ ಹಾಗೂ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ‍್ರಕರಣಗಳು ಪತ್ತೆಯಾಗಿವೆ’ ಎಂದರು.

Post Comments (+)