ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲೇ ದೋಚುವ ‘ಹರಿಯಾಣ ಗ್ಯಾಂಗ್’ ಸೆರೆ!

ಐವರನ್ನು ಬಂಧಿಸಿದ ಕಂಟೋನ್ಮೆಂಟ್ ಪೊಲೀಸರು l 9 ಪ್ರಕರಣ ಬಯಲು, 1 ಕೆ.ಜಿ. ಚಿನ್ನ ಜಪ್ತಿ
Last Updated 27 ಫೆಬ್ರುವರಿ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ‍ರೈಲಿನಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್‌ಗಳಿಂದ ಚಿನ್ನಾಭರಣ ದೋಚುತ್ತಿದ್ದ ಮಾವ–ಅಳಿಯನ ನೇತೃತ್ವದ ‘ಹರಿಯಾಣ ಕಳ್ಳರ ಗ್ಯಾಂಗ್’ ರೈಲ್ವೆ ಪೊಲೀಸರ ಬಲೆಗೆ ಬಿದ್ದಿದೆ.

‘ಹರಿಯಾಣದ ಹಿಸ್ಸಾರ್ ಜಿಲ್ಲೆಯ ಸುಭಾಷ್ (44), ದೆಹಲಿ ಸುಲ್ತಾನ್‌ಪುರಿಯ ರಣವೀರ್ ಸಿಂಗ್ (43), ಆತನ ಅಳಿಯ ಲಲಿತ್ ಕುಮಾರ್ (26), ಸತ್ಬೀರ್ (46) ಹಾಗೂ ವಿನೋದ್ (31) ಎಂಬುವರನ್ನು ಬಂಧಿಸಿ ₹ 28 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ಈ ಗ್ಯಾಂಗ್ ವಿರುದ್ಧ ಕಂಟೋನ್ಮೆಂಟ್ ಹಾಗೂ ಕೆ.ಆರ್.ಪುರ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು’ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ಸಾಫ್ಟ್‌ವೇರ್ ಉದ್ಯೋಗಿಗಳಾದ ಟಿ.ದಿಲೀಪ್‌ ಕುಮಾರ್ ಹಾಗೂ ಸುಷ್ಮಿತಾ ಎಂಬುವರು ಇದೇ ಫೆ.8ರಂದು ಆಂಧ್ರಪ್ರದೇಶದಲ್ಲಿ ವಿವಾಹವಾಗಿದ್ದರು. ಮದುವೆ ಕಾರ್ಯ ಮುಗಿಸಿಕೊಂಡು ಆ ಜೋಡಿ, ಫೆ.13ರಂದು ಹೌರಾ–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ನಗರಕ್ಕೆ ಬರುತ್ತಿತ್ತು. ಆಗ ಅದೇ ಬೋಗಿಯಲ್ಲಿದ್ದ ಆರೋಪಿಗಳು, ಸುಷ್ಮಿತಾ ಅವರ ಕೈಲಿದ್ದ ಮೆಹಂದಿ ನೋಡಿ ನವವಿವಾಹಿತೆ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದರು. ಕೆ.ಆರ್.ಪುರ ನಿಲ್ದಾಣ ಬಂದಾಗ ಲಗೇಜ್‌ಗಳನ್ನು ಇಳಿಸಲು ದಂಪತಿಗೆ ನೆರವಾಗುವವರಂತೆ ಹೋಗಿ, ಬ್ಯಾಗ್‌ನಿಂದ 300 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕಂಟೋನ್ಮೆಂಟ್ ರೈಲ್ವೆ ಪೊಲೀಸರು, ಕೆ.ಆರ್.ಪುರ ರೈಲ್ವೆ ನಿಲ್ದಾಣದಲ್ಲೇ ನಾಲ್ಕೈದು ದಿನ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಗ್ಯಾಂಗನ್ನು ಸೆರೆ ಹಿಡಿದಿದ್ದಾರೆ.

ರಣವೀರ್‌ನೇ ಕಿಂಗ್‌ಪಿನ್: ರೈಲುಗಳಲ್ಲಿ ಕಳ್ಳತನ ಮಾಡಲೆಂದೇ ನಾಲ್ಕೈದು ಗ್ಯಾಂಗ್‌ಗಳನ್ನು ಕಟ್ಟಿದ್ದ ರಣವೀರ್, ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆಗೆ ಇಳಿಸಿದ್ದ. ರೈಲಿನಲ್ಲಿ ಮಾತ್ರ ಕಳವು ಮಾಡುವ ಈ ಗುಂಪುಗಳು ‘ಹರಿಯಾಣ ಗ್ಯಾಂಗ್’ಗಳು ಎಂದೇ ಕುಖ್ಯಾತಿ ಪಡೆದಿದ್ದವು. ಗ್ಯಾಂಗ್ ಸದಸ್ಯ ಲಲಿತ್, ಎರಡೂವರೆ ವರ್ಷಗಳ ಹಿಂದೆ ಹೆಚ್ಚಿನ ಮಾಲು ಕದ್ದು ತಂದಿದ್ದ. ಆ ಖುಷಿಯಲ್ಲಿ ರಣವೀರ್ ತನ್ನ ಮಗಳನ್ನೇ ಆತನಿಗೆ ಕೊಟ್ಟು ಮದುವೆ ಮಾಡಿದ್ದ ಎಂದು ಪೊಲೀಸರು ಹೇಳಿದರು.

ತಿಂಗಳಲ್ಲಿ ಒಮ್ಮೆ ಬೆಂಗಳೂರು ಮಾರ್ಗದಲ್ಲಿ ಬರುತ್ತಿದ್ದ ಆರೋಪಿಗಳು, ಒಳ್ಳೆಯ ಉಡುಪುಗಳನ್ನು ಧರಿಸಿಕೊಂಡು ಎ.ಸಿ ಕೋಚ್‌ಗಳಲ್ಲೇ ಪ್ರಯಾಣಿಸುತ್ತಿದ್ದರು. ಹೆಚ್ಚು ಲಗೇಜ್ ಹೊಂದಿರುವ ಪ್ರಯಾಣಿಕರನ್ನು ಮಾತನಾಡಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಅವರು ಇಳಿಯುವಾಗ ಲಗೇಜ್‌ಗಳನ್ನು ಕೆಳಗಿಳಿಸಲು ಸಹಾಯ ಮಾಡುವವರಂತೆ ಹೋಗುತ್ತಿದ್ದರು. ಈ ಹಂತದಲ್ಲೇ ಅವರ ಗಮನ ಬೇರೆಡೆ ಸೆಳೆದು, ಸ್ಕ್ರೂಡ್ರೈವರ್ ಮಾದರಿಯ ಆಯುಧದಿಂದ ಬ್ಯಾಗ್‌ನ ಜಿಪ್ ಕತ್ತರಿಸಿ ಆಭರಣ ದೋಚಿಬಿಡುತ್ತಿದ್ದರು.

ಬೆಂಗಳೂರಿಗೆ ಬಂದ ನಂತರ ರಾಮನಗರ, ತುಮಕೂರು ಅಥವಾ ನೆಲಮಂಗಲದ ಲಾಡ್ಜ್‌ಗಳಲ್ಲಿ ಉಳಿದುಕೊಂಡು, ಸ್ಥಳೀಯ ರೈಲುಗಳಲ್ಲೂ ಕಳವು ಮಾಡುತ್ತಿದ್ದರು. ಗ್ಯಾಂಗ್‌ನ ಒಬ್ಬ ಸದಸ್ಯ ಸಂಜೆಯೊಳಗೆ ಲಾಡ್ಜ್‌ಗೆ ವಾಪಸಾಗದಿದ್ದರೂ, ತಕ್ಷಣವೇ ಕೊಠಡಿ ಖಾಲಿ ಮಾಡಿ ಊರಿಗೆ ಮರಳುತ್ತಿದ್ದರು.

ಹಂಸರಾಜ್ ಗ್ಯಾಂಗ್‌ನಿಂದ ಸುಳಿವು
ರೈಲ್ವೆ ಪೊಲೀಸರು 2017ರ ಡಿಸೆಂಬರ್‌ನಲ್ಲಿ ಹರಿಯಾಣದ ಸಾಂಸಿ ಬಸ್ತಿ ಗ್ಯಾಂಗ್‌ನ ಹಂಸರಾಜ್, ಸುರೇಂದ್ರ ಸಿಂಗ್, ವೀರೇಂದ್ರ ಎಂಬುವರನ್ನು ಬಂಧಿಸಿದ್ದರು. ಜೈಲಿನಲ್ಲಿದ್ದ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ‘ರಣವೀರ್ ಸಿಂಗ್‌ ಗ್ಯಾಂಗ್ ಕಾರ್ಯಾಚರಣೆ ನಡೆಸಿರಬಹುದು. ಅವರು ಒಮ್ಮೆ ನಗರಕ್ಕೆ ಬಂದರೆ ವಾರವಿಡೀ ಕಳವು ಮಾಡಿಕೊಂಡು ಕೆ.ಆರ್.ಪುರ ನಿಲ್ದಾಣದ ಮೂಲಕವೇ ರಾಜ್ಯಕ್ಕೆ ವಾಪಸ್ ಹೋಗುತ್ತಾರೆ’ ಎಂದು ಹೇಳಿಕೆ ಕೊಟ್ಟಿದ್ದರು.

ಆ ಸುಳಿವು ಆಧರಿಸಿ ಕಂಟೋನ್ಮೆಂಟ್ ರೈಲ್ವೆ ಠಾಣೆಯ ಎಚ್.ಲಕ್ಷ್ಮಿನಾರಾಯಣ ಪ್ರಸಾದ್ ನೇತೃತ್ವದ ಮೂರು ತಂಡಗಳು, ಕೆ.ಆರ್.ಪುರ, ಬಾಣಸವಾಡಿ ಹಾಗೂ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದವು. ಫೆ.22ರಂದು ಐವರು ಆರೋಪಿಗಳು ಹೆಗಲಿಗೆ ಬ್ಯಾಗ್‌ಗಳನ್ನು ಹಾಕಿಕೊಂಡು ಅಲ್ಲಿಗೆ ಬಂದಿದ್ದರು. ಪ್ರಯಾಣಿಕರಂತೆ ನಿಂತುಕೊಂಡಿದ್ದ ಪೊಲೀಸರು, ಕೂಡಲೇ ಅವರನ್ನು ಸುತ್ತುವರಿದು ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ. ಆಗ ನವದಂಪತಿಯಿಂದ ದೋಚಿದ್ದ 300 ಗ್ರಾಂ ಚಿನ್ನಾಭರಣದ ಜತೆಗೆ, ಇನ್ನೂ 700 ಗ್ರಾಂ ಒಡವೆಗಳೂ ಸಿಕ್ಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT