ಬೆಂಗಳೂರು: ನಗರದ ವಿವಿಧೆಡೆ ಮನೆ ಮತ್ತು ಕಚೇರಿಗಳ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿದ್ದ ಇಬ್ಬರು ಯುವಕರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರ ನಿವಾಸಿ ಕಿಶೋರ್ ಮತ್ತು ವಿನಯ್ ಬಂಧಿತರು. ಇವರಿಂದ ₹22 ಲಕ್ಷ ಮೌಲ್ಯದ 32 ವಾಹನ ವಶಕ್ಕೆ ಪಡೆಯಲಾಗಿದೆ.
ಆ.5ರ ರಾತ್ರಿ ಜೆ.ಪಿ.ನಗರದ 3ನೇ ಹಂತದ ಈಸ್ಟ್ ಎಂಡ್ ರಸ್ತೆಯಲ್ಲಿ ವಾಹನ ಕಳವಾಗಿತ್ತು. ಈ ಪ್ರಕರಣದ ತನಿಖೆಯಡಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹಲವೆಡೆ ವಾಹನ ಕೃತ್ಯ ಎಸಗಿರುವುದನ್ನು ಅವರು ಒಪ್ಪಿಕೊಂಡರು ಎಂದು ತಿಳಿಸಿದ್ದಾರೆ.
ತಮಿಳುನಾಡಿನ ವೇಲೂರು ಜಿಲ್ಲೆ ಪೆರಣಂಪೆಟ್ಟು ಗ್ರಾಮ ಮತ್ತು ಜೆ.ಪಿ.ನಗರದ ವಿವಿಧೆಡೆ ವಾಹನಗಳನ್ನು ಅಡಗಿಸಿಡಲಾಗಿತ್ತು. ವಿನಯ್ ಸಂಬಂಧಿಕರು ಚೆನ್ನೈನಲ್ಲಿದ್ದ ಕಾರಣ ಅಲ್ಲಿ ಸುಲಭವಾಗಿ ಮಾರಾಟ ಮಾಡಬಹುದು ಎಂದು ಅಲ್ಲಿಗೆ ಹೋಗಲಾಗಿತ್ತು. ಹೊಂಡಾ ಆಕ್ಟಿವಾ ವಾಹನಗಳ ಕೀ ಸುಲಭವಾಗಿ ತೆಗೆಯಬಹುದಾಗಿದ್ದ ಕಾರಣಕ್ಕೇ ಈ ವಾಹನಗಳನ್ನೇ ಕದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳ ತಂದೆ– ತಾಯಿ ಕೂಲಿ ಕಾರ್ಮಿಕರು. ಡ್ರಗ್ಸ್, ಮದ್ಯ ಸೇವನೆ ಚಟಕ್ಕೆ ದಾಸರಾಗಿರುವ ಆರೋಪಿಗಳು, ವಾಹನಗಳನ್ನು ಕದ್ದು, ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಇಬ್ಬರ ಬಂಧನದಿಂದ ದ್ವಿಚಕ್ರ ವಾಹನ ಕಳವಿನ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಏಳು ವಾಹನ ವಶ: ತಲಘಟ್ಟಪುರ ಠಾಣಾ ವ್ಯಾಪ್ತಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ, ₹ 5 ಲಕ್ಷ ಮೌಲ್ಯದ ಏಳು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಠಾಣಾ ವ್ಯಾಪ್ತಿಯ ಮಂಜುನಾಥ ನಗರದ ನಿವಾಸಿಯೊಬ್ಬರ ವಾಹನ ಕಳವಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ: ನಗರದಲ್ಲಿ ಮನೆ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ನಿವಾಸಿಗಳು ದೂರದ ಊರುಗಳಿಗೆ ಹೋಗುವಾಗ, ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಇದರಿಂದ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಕಮಿಷನರ್ ಕೋರಿದ್ದಾರೆ.