ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರ ನಿಧಿ ಸ್ಥಾಪಿಸಲು ಚಿಂತನೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಖಾಸಗಿ ವಾಹನಗಳ ಚಾಲಕರೊಂದಿಗಿನ ಸಭೆಯಲ್ಲಿ ರಾಮಲಿಂಗಾ ರೆಡ್ಡಿ
Published 1 ಆಗಸ್ಟ್ 2023, 0:30 IST
Last Updated 1 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಸೆಸ್‌ ಸಂಗ್ರಹಿಸಿ ಚಾಲಕರ ನಿಧಿ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಖಾಸಗಿ ಬಸ್‌, ಟ್ಯಾಕ್ಸಿ, ಆಟೊ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.

ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವುದನ್ನು ವಸೂಲಿ ಮಾಡಲು ತೆರಿಗೆ ಅದಾಲತ್‌ ಮಾಡಲಾಗುವುದು. ರಿಯಾಯಿತಿ ನೀಡಿ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಚಾಲಕರ ಮಕ್ಕಳಿಗೆ 10ನೇ ತರಗತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 1ನೇ ತರಗತಿಯಿಂದಲೇ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅನಧಿಕೃತವಾಗಿ ಸಂಚರಿಸುತ್ತಿರುವ ರ‍್ಯಾಪಿಡೊ ನಿಷೇಧಿಸಲಾಗುವುದು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿ ಇತ್ಯರ್ಥ ಆಗುವವರೆಗೆ ಕಾಯಬೇಕಾಗುತ್ತದೆ. ರ‍್ಯಾಪಿಡೊ ಕಂಪನಿ ತಂದಿರುವ ತಡೆಯಾಜ್ಞೆಯನ್ನು ಒಂದು ವಾರದೊಳಗೆ ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಜುಲೈ 25 ಚಾಲಕರ ದಿನ ಎಂದು ನಿರ್ಧಾರವಾಗಿದೆ. ಆದರೆ, ಅನುಷ್ಠಾನಕ್ಕೆ ಬಂದಿಲ್ಲ. ಪ್ರತಿ ವರ್ಷ ಜುಲೈ 25ರಂದು ಚಾಲಕರ ದಿನ ಆಚರಿಸುವಂತೆ ಮಾಡಲಾಗುವುದು ಎಂದರು.

ಸಾರಥಿ ಸೂರು ಯೋಜನೆಯಡಿ ವಸತಿ ಒದಗಿಸುವ ಬಗ್ಗೆ ವಸತಿ ಸಚಿವರ ಜಮೀರ್‌ ಅಹ್ಮದ್‌ಖಾನ್‌ ಜೊತೆ ಸಭೆ ನಡೆಸಲಾಗುವುದು. ಇಲಾಖೆಯ ಹಂತದಲ್ಲೇ ಪರಿಹರಿಸಬಹುದಾದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ತೆರಿಗೆ ಕಡಿತ ಮುಂತಾದ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಭಾರತ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಶನ್‌, ಜೈ ಭಾರತ್‌ ವಾಹನ ಚಾಲಕರ ಸಂಘ, ಕರ್ನಾಟಕ ರಾಜೀವ್‌ ಗಾಂಧಿ ಅಟೊ ಚಾಲಕರ ವೇದಿಕೆ, ಬೆಂಗಳೂರು ಅಟೊ ಸೇನೆ, ನಮ್ಮ ಚಾಲಕರ ಟ್ರೇಡ್‌ ಯೂನಿಯನ್‌. ಕರ್ನಾಟಕ ರಾಜ್ಯ ಶಾಲಾ ವಾಹನ ಚಾಲಕರ ಟ್ರೇಡ್‌ ಯೂನಿಯನ್‌, ಆಟೊ ರಿಕ್ಷಾ ಡ್ರೈವರ್‌ ಯೂನಿಯನ್‌ (ಎಆರ್‌ಡಿಯು), ಸ್ನೇಹಜೀವಿ ಚಾಲಕರ ಟ್ರೇಡ್‌ ಯೂನಿಯನ್‌, ವಿಜಯಸೇನೆ ಅಟೊ ಘಟಕ, ಬೆಂಗಳೂರು ಸಾರಥಿ ಸೇನೆ, ಅಟೊರಿಕ್ಷಾ ಡ್ರೈವರ್‌ ಯೂನಿಯನ್‌ (ಸಿಐಟಿಯು), ಕರುನಾಡ ಸಾರಥಿ ಸೇನೆ ಟ್ರೇಡ್‌ ಯೂನಿಯನ್‌, ನೊಂದ ಚಾಲಕರ ವೇದಿಕೆ, ಕರ್ನಾಟಕ ಟ್ಯಾಕ್ಸಿ ಓನರ್ಸ್‌ ಆ್ಯಂಡ್‌ ಡ್ರೈವರ್‌ ಸಹಿತ ವಿವಿಧ ಸಂಘಟನೆಗಳು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT