ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಲ್ಯಾಟ್‌ಗಳಿಗೆ ಪ‍್ರತ್ಯೇಕ ಮೀಟರ್‌ ಚಿಂತನೆ

ಕಾಯ್ದೆಗೆ ತಿದ್ದುಪಡಿ ಅಗತ್ಯ: ಅಪಾರ್ಟ್‌ಮೆಂಟ್‌ ಫೆಡರೇಷನ್ ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷರ ಹೇಳಿಕೆ
Published 23 ಮಾರ್ಚ್ 2024, 22:51 IST
Last Updated 23 ಮಾರ್ಚ್ 2024, 22:51 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆಯಾಗುವ ನೀರಿನ ಪ್ರಮಾಣವನ್ನು ತಿಳಿಯುವ ಸಲುವಾಗಿ, ಅಪಾರ್ಟ್‌ಮೆಂಟ್‌ನ ಪ್ರತಿಯೊಂದು ಫ್ಲ್ಯಾಟ್‌ಗೂ ಪ್ರತ್ಯೇಕ ಮೀಟರ್‌ ಅಳವಡಿಸುವ ಚಿಂತನೆ ನಡೆದಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ನೀರು ಉಳಿತಾಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫ್ಲ್ಯಾಟ್‌ಗಳಿಗೆ ಪ್ರತ್ಯೇಕ ಮೀಟರ್ ಅಳವಡಿಸಲು ಬೆಂಗಳೂರು ಫೆಡರೇಷನ್ ಸದಸ್ಯರು ಮನವಿ ಮಾಡಿದರು. ‘ಇದನ್ನು ಜಾರಿಗೆ ತರಲು ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ. ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿರುವಂತಹ ಸಂದರ್ಭದಲ್ಲೇ ಫ್ಲ್ಯಾಟ್‌ಗಳಿಗೆ ಪ್ರತ್ಯೇಕವಾಗಿ ಮೀಟರ್ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು. ಪ್ರತ್ಯೇಕ ಮೀಟರ್‌ ಅಳವಡಿಸಲು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಮನವಿ ನೀಡಿದರೆ, ಅದನ್ನು ಸರ್ಕಾರದ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ರಾಮ್‌ಪ್ರಸಾತ್‌ ಭರವಸೆ ನೀಡಿದರು.

‘ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ನಲ್ಲಿ 30 ಕ್ಲಸ್ಟರ್‌ಗಳಿವೆ. 15 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ. ಈ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರು, ಕೊಳವೆಬಾವಿಗಳು, ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿವೆ. ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಿತ ಬಳಕೆಯನ್ನು ಉತ್ತೇಜಿಸಲು ಜಲಮಂಡಳಿ ‘ಗ್ರೀನ್ ಸ್ಟಾರ್ ರೇಟಿಂಗ್ ಚಾಲೆಂಜ್’ ಪ್ರಾರಂಭಿಸಿದೆ. ಇದನ್ನು ಅಪಾರ್ಟ್‌ಮೆಂಟ್‌ನವರು ಒಪ್ಪಿಕೊಂಡಿರುವುದು ಶ್ಲಾಘನೀಯ’ ಎಂದರು.

ಮಾಹಿತಿ ಸಂಗ್ರಹ: ‘ಯಾವ ಮೂಲಗಳಿಂದ ನೀರು ಸಂಗ್ರಹಿಸಲಾಗುತ್ತಿದೆ ಎಂಬ ವಿವರ ಒದಗಿಸಲು ಅಪಾರ್ಟ್‌ಮೆಂಟ್‌ ಫೆಡರೇಷನ್‌ಗೆ ಕೇಳಲಾಗಿದೆ. ಅದನ್ನು ಆಧರಿಸಿ 15 ರಿಂದ 30 ದಿನಗಳಲ್ಲಿ ಅಪಾರ್ಟ್‌ಮೆಂಟ್‌ಗಳಿಗೆ ಕನಿಷ್ಠ ಅಗತ್ಯ ನೀರು ಪೂರೈಸಲಾಗುವುದು’ ಎಂದು ಅಧ್ಯಕ್ಷರು ಭರವಸೆ ನೀಡಿದರು.

ಟ್ಯಾಂಕರ್‌ಗಳಿಗೆ ಬಾಡಿಗೆ ನಿಗದಿ

ಬೆಂಗಳೂರು: ಜಲಮಂಡಳಿ ವತಿಯಿಂದ ನೀರು ಪೂರೈಕೆಗಾಗಿ ಖಾಸಗಿ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಬಾಡಿಗೆ ದರ ನಿಗದಿಪಡಿಸಿದೆ.

ನಗರ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 24 ಸಾವಿರ ಲೀಟರ್‌ ಮೇಲಿನ ಸಾಮರ್ಥ್ಯದ ಸುಮಾರು 200 ಟ್ಯಾಂಕರ್‌ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆ ಆಧಾರದಲ್ಲಿ ಬಳಸಿಕೊಳ್ಳಲು ಬೆಂಗಳೂರು ಜಲಮಂಡಳಿ ಬಯಸಿ, ಅದಕ್ಕಾಗಿ ಬಾಡಿಗೆ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿತ್ತು.

ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ನಿಭಾಯಿಸಲು ದರ ನಿಗದಿಗೆ ತಾಂತ್ರಿಕ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದ್ದರು. ಲೋಕೋಪಯೋಗಿ ಇಲಾಖೆಯ ಎಸ್‌.ಆರ್‌. ದರಗಳು ಹಾಗೂ ವಾಸ್ತವದ ಅಂಕಿ–ಅಂಶಗಳನ್ನು ಅವಲೋಕಿಸಿ ಸಮಿತಿಯು ವರದಿಯನ್ನು ಸಲ್ಲಿಸಿತ್ತು. ಅದರ ಆಧಾರದಲ್ಲಿ ಟ್ಯಾಂಕರ್‌ಗಳಿಗೆ ಬಾಡಿಗೆ ದರ ನಿಗದಿ ಜಿಲ್ಲಾಧಿಕಾರಿ ಮಾರ್ಚ್‌ 23ರಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT