ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತ’ ಆತಂಕಕಾರಿ ಆಶಯ

Last Updated 31 ಜನವರಿ 2018, 3:58 IST
ಅಕ್ಷರ ಗಾತ್ರ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಮ್ಮದೇ ಸಚಿವಾಲಯದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳನ್ನು (‘ನಾವೇನು ದನಗಳಾ?’, ಪ್ರ.ವಾ., ಜ.17) ಗಮನಿಸಿದರೆ, ಅವರು ವಿವಾದಾತ್ಮಕ ಹೇಳಿಕೆಗಳನ್ನು ಒಂದು ನಿಗದಿತ ವೇಳಾಪಟ್ಟಿಯ ಅನುಸಾರ ಬಿತ್ತರಿಸುವ ಯೋಜನೆ ಹಾಕಿಕೊಂಡಿರುವಂತೆ ತೋರುತ್ತದೆ.

ಮೂರು ತಿಂಗಳ ಹಿಂದೆ ಹೆಗಡೆ ಅವರು ಮುಸಲ್ಮಾನರ ಬಗ್ಗೆ ಕಾನೂನುಬಾಹಿರವಾದ, ಪೂರ್ವಗ್ರಹದ ಮಾತುಗಳನ್ನು ಆಡಿದ್ದು ಮಾತ್ರವಲ್ಲ, ಅದನ್ನು ಪದಶಃ ಪ್ರಕಟಿಸುವಂತೆ ಪತ್ರಿಕಾ ವರದಿಗಾರರಿಗೆ ಸವಾಲನ್ನೂ ಹಾಕಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಯಿತೇ ವಿನಾ, ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಲಿಲ್ಲ.

ಆನಂತರ ಅವರು ಸಾರ್ವಜನಿಕ ಸಭೆಯಲ್ಲಿ ‘ಸಂವಿಧಾನ’ವನ್ನು ಕುರಿತಾಗಿ ಆಡಿದ ‘ವಿವಾದಾಪೇಕ್ಷೆಯ’ ಮಾತುಗಳು ದೇಶದಾದ್ಯಂತ ಟೀಕೆಗೆ ಒಳಗಾಗಿದ್ದು ಮಾತ್ರವಲ್ಲದೆ, ಸಂಸತ್ತಿನ ಅಧಿವೇಶನದಲ್ಲೂ ವಾಗ್ದಾಳಿಗೆ ಒಳಗಾದವು. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಜನಪ್ರತಿನಿಧಿಯೊಬ್ಬರು ಅಂತಹ ಉಡಾಫೆಯ ಮಾತುಗಳನ್ನು ಆಡಿರುವ ಬಗ್ಗೆ ಅವರ ಪಕ್ಷವಾಗಲೀ ಸಚಿವ ಸಂಪುಟವಾಗಲೀ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ಅವರೂ ಔಪಚಾರಿಕ ಕ್ಷಮೆ ಯಾಚನೆಯ ಹೊರತಾಗಿ ಯಾವ ಪಶ್ಚಾತ್ತಾಪವನ್ನೂ ಪ್ರಕಟಿಸಲಿಲ್ಲ.

ಈ ಎರಡೂ ಪ್ರಕರಣಗಳಲ್ಲಿ ಅವರು ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯ ಉತ್ತರದಾಯಿತ್ವ, ಪ್ರಭುತ್ವದಲ್ಲಿ ಸಂವಿಧಾನಕ್ಕಿರುವ ಔನ್ನತ್ಯ ಕಾಪಾಡುವ ಬದ್ಧತೆ ಹೊಂದಿರುವವರಂತೆ ನಡೆದುಕೊಳ್ಳಲಿಲ್ಲ. ಸದ್ಯಕ್ಕೆ ಅಧಿಕಾರ ಉಳಿಸಿಕೊಳ್ಳಲು ತಾಂತ್ರಿಕವಾಗಿ ಅವಶ್ಯಕವಿರುವ ಸಮಜಾಯಿಷಿಯನ್ನಷ್ಟೇ ನೀಡಿ, ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ಕುರಿತ ಅಸಮಾಧಾನದ ಬೂದಿ ಮುಚ್ಚಿದ ಕೆಂಡವನ್ನು ನಿಗಿ ನಿಗಿಯಾಗೇ ಇಟ್ಟುಕೊಂಡಿರುವುದು, ಜನವರಿ 16ರಂದು ಆಡಿದ ಮಾತುಗಳಿಂದ ನಿಚ್ಚಳವಾಗಿದೆ.

ಈ ಆಕ್ಷೇಪವನ್ನು ನಾನು ಎತ್ತುತ್ತಿರುವುದು, ಅವರ ಪ್ರಸ್ತುತ ಭಾಷಣದಲ್ಲಿ ಆಡಿದ ‘ದನಗಳಾ?’, ‘ಮನುಷ್ಯರು ದೇವರಾಗಬೇಕು’ ಇತ್ಯಾದಿ ಬಿರುಬೀಸಿನ, ದನಿಹೀನ ಮಾತುಗಳ ಬಗ್ಗೆಯಾಗಲೀ, ಸಾಹಿತಿಗಳನ್ನು ಕುರಿತು ಆಡಿದ ಕುಟುಕು ಮಾತುಗಳ ಬಗೆಗಾಗಲೀ ಅಲ್ಲ. ಅವುಗಳನ್ನು ವಿರೋಧಿಗಳ ಬಗ್ಗೆ ಅವರು ಮಾಡಿದ ಸಭ್ಯತೆಯ ಹಂಗಿಲ್ಲದ ವಾಗ್ದಾಳಿ ಎಂದುಕೊಳ್ಳಬಹುದು.

ಆದರೆ, ಅದೇ ಭಾಷಣದಲ್ಲಿ ಅವರು ಆಡಿರುವ ಇನ್ನೊಂದು ಸಂಗತಿ ಸಾರ್ವಜನಿಕ ಗಮನವನ್ನು ಹೆಚ್ಚಾಗಿ ಸೆಳೆದಂತಿಲ್ಲ. ಪತ್ರಿಕೆಯ ಮುಖಪುಟದಲ್ಲೇ ಪ್ರಕಟವಾಗಿರುವ ಅವರ ಮಾತುಗಳು, ‘ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಬಲಿಷ್ಠರು ಮಾತ್ರ ಬದುಕುವಂತಹ ಸ್ಥಿತಿ ಬರಲಿದೆ. ದುರ್ಬಲರನ್ನು ದೇವರಲ್ಲ ಅವರ ತಾಯಿ ಕೂಡ ರಕ್ಷಿಸಲಾರಳು. ಅದಕ್ಕಾಗಿ ಯುವಕರು ಬಲಿಷ್ಠರಾಗಲು ಪ್ರಯತ್ನಿಸಬೇಕು. ನಾವು ಅಂದುಕೊಂಡದ್ದನ್ನು ಸಾಧಿಸುವ ಛಲ ಹೊಂದಬೇಕು. ಹುಟ್ಟಿದ್ದು ಆಳುವುದಕ್ಕೋಸ್ಕರ ಎನ್ನುವ ಧ್ಯೇಯದಲ್ಲಿ ಯುವಕರು ಮುನ್ನುಗ್ಗಬೇಕು...’

ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವವರಿಗೆ, ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಸ್ಥೆಯುಳ್ಳವರಿಗೆ ಈ ಮಾತುಗಳು ಅಘಾತವುಂಟುಮಾಡುತ್ತವೆ. ಅನಂತಕುಮಾರ ಹೆಗಡೆಯವರ ಮಾತಿನ ಒರಟುತನವನ್ನು ಬದಿಗಿಟ್ಟು, ಈ ಮಾತುಗಳ ದನಿಯಲ್ಲಿ ಅಡಗಿರುವ ಸರ್ವಾಧಿಕಾರದ ವಾಂಛೆ ಹಾಗೂ ಅದನ್ನು ಪ್ರತಿಪಾದಿಸುವ ಹುಮ್ಮಸ್ಸನ್ನು ನೋಡಿ! ಇದು ಮ್ಯಾನೇಜ್‌ಮೆಂಟ್‌ ಗುರುಗಳು ಭೋಧಿಸುವ ‘ಪಾಸಿಟಿವ್ ಆ್ಯಟಿಟ್ಯೂಡ್’ ಬುಡಬುಡಿಕೆಯಲ್ಲ. ನೇರಾ
ನೇರ ‘ಹೊಡೆಬಡಿ ಬಂಡವಾಳಶಾಹಿ’ ಬೆತ್ತಲೆ ಸಿದ್ಧಾಂತದ ಪ್ರತಿಪಾದನೆಯಲ್ಲಿ ದೃಢ ನಂಬಿಕೆಯ ದ್ಯೋತಕ. ನಮ್ಮ ಸಂವಿಧಾನದ ಮೂಲ ತತ್ವವೆಂದರೆ, ಇಲ್ಲಿ ಬಲಾಢ್ಯರು ಹಾಗೂ ದುರ್ಬಲರು ಸಮಾನ ಮೌಲ್ಯವುಳ್ಳ ಪ್ರಜೆಗಳು. ಬಲಾಢ್ಯರು ತಮ್ಮ ತೋಳ್ಬಲ ಪ್ರಯೋಗಿಸಿ, ಸಾಮಾಜಿಕ ಅವಕಾಶಗಳಿಂದ ವಂಚಿತರಾಗಿ ದುರ್ಬಲರಾಗಿರುವ ಜನರನ್ನು ತುಳಿಯುವುದು ಅಪರಾಧ. ‘ಹುಟ್ಟಿದ್ದು ಆಳುವುದಕ್ಕೋಸ್ಕರ’ ಎನ್ನುವ ಮನೋಭಾವ, ಆಚರಣೆಗಳನ್ನು ಶಕ್ತಿವಂತರು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪ್ರತಿಪಾದಿಸುವಂತಿಲ್ಲ. ಪ್ರಭುತ್ವ ವ್ಯವಸ್ಥೆ ಅದನ್ನು ಮಾನ್ಯ ಕೂಡ ಮಾಡಕೂಡದು.

ಆದರೆ, ಕೌಶಲ ಅಭಿವೃದ್ಧಿ ಖಾತೆಯ ಸಚಿವರು, ತಮ್ಮ ಸಚಿವಾಲಯದ ಅಧಿಕೃತ ಸಭೆಯಲ್ಲಿ ‘ಹುಟ್ಟಿದ್ದು ಆಳುವುದಕ್ಕೋಸ್ಕರ’ ಎನ್ನುವುದನ್ನು ಪರಮಾದರ್ಶ ಮಾಡಿಕೊಳ್ಳಲು ಕರೆ ಕೊಡುತ್ತಾರೆ ಎಂದರೆ ಅದು ಅವರು ಪ್ರಸ್ತುತ ಇರುವ ಸಂವಿಧಾನದ ಮೂಲ ತತ್ವವನ್ನೇ ಅಲ್ಲಗಳೆದು, ಸರ್ವಾಧಿಕಾರಿ ಪ್ರಭುತ್ವದ ದೊಣೆನಾಯಕರ ನ್ಯಾಯವನ್ನು ಎತ್ತಿ ಹಿಡಿಯುತ್ತಾರೆ ಎನ್ನುವುದನ್ನು ಸೂಚಿಸುತ್ತದೆ! ಕೌಶಲ ಅಭಿವೃದ್ಧಿ ಖಾತೆಯ ಸಾಂವಿಧಾನಿಕ ಉದ್ದೇಶವಾದರೂ ಏನು? ಯಾರಿಗೆ, ಸಾಮಾಜಿಕ ಕಾರಣಗಳಿಗಾಗಿ (ಆಸ್ತಿಹೀನರು, ಕೆಳ ಜಾತಿಗಳವರು, ಸ್ತ್ರೀಯರು ಹಾಗೂ ಅಲ್ಪಸಂಖ್ಯಾತರು) ಆಧುನಿಕ ಬದುಕಿನಲ್ಲಿ ಹೊಟ್ಟೆಪಾಡಿನ
ಕೆಲಸಗಳನ್ನು ಮಾಡಲು ಅವಶ್ಯಕವಾದ ಕೌಶಲಗಳನ್ನು ಪಡೆಯುವುದಕ್ಕೆ ಸಾಧ್ಯವಿಲ್ಲವೋ, ಅವರಿಗೆ ಮುಫತ್ತಾಗಿ ಕೌಶಲಗಳನ್ನು ಕಲಿಸಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು. ಅದಕ್ಕಾಗಿ, ಸಾರ್ವಜನಿಕ ಬೊಕ್ಕಸದ ಸಂಪನ್ಮೂಲವನ್ನು ನೀಡುವುದು. ಅಂದರೆ, ದುರ್ಬಲರು ತಮ್ಮ ಅಸಹಾಯಕ ಸಾಮಾಜಿಕ ಸ್ಥಿತಿಯ ಕಾರಣವಾಗಿ, ಸಿರಿವಂತರ ತೊತ್ತುಗಳಾಗಿ ಬದುಕುವಂತಹದ್ದನ್ನು ತೊಡೆಯುವುದು. ಇಂತಹ ಯೋಜನೆ ಯಶಸ್ವಿಯಾದಲ್ಲಿ ದುರ್ಬಲರು ಸ್ವಾಭಿಮಾನಿಗಳಾಗಿ, ಬಲಾಢ್ಯರ ‘ಹುಟ್ಟಿದ್ದು ಆಳುವುದಕ್ಕೋಸ್ಕರ’ ಎಂಬ ಧಿಮಾಕಿನ ಯಜಮಾನಿಕೆಯನ್ನು ಧಿಕ್ಕರಿಸುವ ಪರಿಸರ ನಿರ್ಮಾಣವಾಗುತ್ತದೆ ಎನ್ನುವುದು ಆಶಯ.

ಆದರೆ, ಕೌಶಲ ಅಭಿವೃದ್ಧಿ ಸಚಿವರ ಆಶಯ ಇದಕ್ಕೆ ತದ್ವಿರುದ್ಧವಾದದ್ದು! ಸಭೆಯಲ್ಲಿ ಸೇರಿದ್ದ, ಸಾಮಾಜಿಕವಾಗಿ ದುರ್ಬಲರಾಗಿರುವ ಯುವಕರಿಗೆ ಅವರು ಸೂಚ್ಯವಾಗಿ ಹೇಳಿದ್ದರ ಅರ್ಥ: ‘ನಿಮ್ಮಲ್ಲಿರುವ ನೂರರಲ್ಲಿ ಒಬ್ಬನಿಗೆ ಮಾತ್ರ ನಾವು ಪ್ರೋತ್ಸಾಹ ಕೊಡುತ್ತೇವೆ; ಅದನ್ನು ಪಡೆಯಬೇಕೆಂದರೆ, ಆ ಒಬ್ಬನು ಉಳಿದವರನ್ನು ಬಡಿದು ಹಾಕಿ, ಅವರನ್ನು ತೊತ್ತುಗಳನ್ನಾಗಿ ದುಡಿಸಿಕೊಳ್ಳುವ ಸಾಮರ್ಥ್ಯ ಪಡೆದುಕೊಳ್ಳಬೇಕು; ಈಗ ನಿಮ್ಮೊಳಗೆ ಬಡಿದಾಟ ಶುರುವಿಟ್ಟುಕೊಳ್ಳಿ! ನೀವು ಬಡಿದು ಹಾಕುವ ತೊತ್ತುಗಳನ್ನು ದೇವರೂ, ತಾಯಿಯೂ ರಕ್ಷಿಸಲಾರರು! ಒಬ್ಬ ಬಲಾಢ್ಯನ ದರ್ಪದಲ್ಲಿ ತೊಂಬತ್ತೊಂಬತ್ತು ತೊತ್ತುಗಳು ಜೀತ ಮಾಡುವ ವ್ಯವಸ್ಥೆಯನ್ನು ತರುವುದು ನಮ್ಮ ಉದ್ದೇಶ; ಅದಕ್ಕೆ ತಯಾರು ಮಾಡುವುದಕ್ಕೆ ಇರೋದು ನಮ್ಮ ಸಚಿವಾಲಯ!’

ಈ ಮಾತಿನ ಹಿನ್ನೆಲೆಯಲ್ಲಿ, ನಾವು ಅನಂತಕುಮಾರ ಹೆಗಡೆಯವರ ಹಿಂದಿನ ಮಾತುಗಳ ಚುಕ್ಕೆಗಳನ್ನು ಸೇರಿಸಿದರೆ, ಅವರ ‘ಅನಂತ’ ಆತಂಕಕಾರಿ (ಸಂವಿಧಾನ ವಿರೋಧಿ) ಆಶಯಗಳು ಬೆತ್ತಲಾಗಿ ಕಾಣುತ್ತವೆ! ಮನಃಶಾಸ್ತ್ರವು ಮನಸ್ಸಿನಲ್ಲಿ ಸುಪ್ತವಾಗಿರುವಂತಹ ಭಾವಗಳು, ಪ್ರಕಟಿಸುವುದಕ್ಕೆ ಪ್ರಸ್ತುತವಲ್ಲದ ಗಳಿಗೆಯಲ್ಲಿ ಎಚ್ಚರ ಸ್ಥಿತಿಯನ್ನು ಬದಿಗೊತ್ತಿ ಮಾತಲ್ಲಿ ಪ್ರಕಟಗೊಳ್ಳುವುದನ್ನು ‘ಫ್ರಾಯ್ಡಿಯನ್ ಸ್ಲಿಪ್’ ಅನ್ನುತ್ತದೆ. ಹೆಗಡೆಯವರ ‘ಹುಟ್ಟಿದ್ದೇ ಆಳುವುದಕ್ಕೋಸ್ಕರ’ ಆದರ್ಶ ಅಂಥ ‘ಸ್ಲಿಪ್’ ಕೂಡ ಅಲ್ಲ. ಅವರೇ ಪತ್ರಕರ್ತರಿಗೆ ಸವಾಲು ಹಾಕಿದ್ದಾರಲ್ಲ, ‘ನಾನು ಹೊರಗೊಂದು ಒಳಗೊಂದು ಆಡೋದಿಲ್ಲ! ಹೀಗೆ ಹೇಳ್ದೆ ಅಂತ ಬರೀರಿ’ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT