ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ‘ಸಿಗ್ನಲ್‌’ ದಾಟುವ ಸವಾಲು: ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ಪರದಾಟ

ಜೆ.ಸಿ.ರಸ್ತೆ: ತಪ್ಪದ ಸವಾರರ ಗೋಳು: ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗುವ ನಾಗರಿಕರು
Last Updated 10 ಡಿಸೆಂಬರ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ಹಸಿರು ದೀಪ ಹೊತ್ತಿದೊಡನೆ ಕಡುಗ‍ಪ್ಪು ಹೊಗೆ ಉಗುಳುತ್ತಾ ಅಣತಿ ದೂರ ಸಾಗಿ ಗಕ್ಕನೆ ನಿಲ್ಲುವ ವಾಹನಗಳು. ಬೇಗನೆ ಕಚೇರಿ ತಲುಪುವ ಧಾವಂತದಲ್ಲಿ ಪಾದಚಾರಿ ಮಾರ್ಗದ ಮೇಲೇ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು. ರಸ್ತೆಯ ಇಕ್ಕೆಲಗಳಲ್ಲೇ ಸಾಲುಗಟ್ಟಿ ನಿಂತಿರುವ ಗೂಡ್ಸ್‌ ವಾಹನಗಳು...

ಬೆಂಗಳೂರು ದಕ್ಷಿಣದಿಂದ ನಗರದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಬೆಸೆಯುವ ಜೆ.ಸಿ.ರಸ್ತೆಯ ಚಿತ್ರಣವಿದು.

ರವೀಂದ್ರ ಕಲಾಕ್ಷೇತ್ರ, ಕಾರ್ಪೊರೇಷನ್‌ ವೃತ್ತ, ಕನ್ನಡ ಭವನ, ಪುರಭವನ, ಬಿಬಿಎಂಪಿ ಕೇಂದ್ರ ಕಚೇರಿ, ಕೆ.ಆರ್‌.ಮಾರುಕಟ್ಟೆ ಹಾಗೂ ಶಾಂತಿನಗರಕ್ಕೆ ಹೋಗುವ ಬಹುಪಾಲು ಮಂದಿ ಜೆ.ಸಿ.ರಸ್ತೆಯನ್ನೇ ಅವಲಂಬಿಸುತ್ತಾರೆ. ಹೀಗಾಗಿ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸಲಿದ್ದು, ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಶಾಲೆ, ಕಾಲೇಜು, ಕಚೇರಿಗಳಿಗೆ ಸರಿಯಾದ ಸಮಯಕ್ಕೆ ತಲುಪಲಾಗದೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಪರಿತಪಿಸುವಂತಾಗಿದೆ.

ಮಿನರ್ವ ವೃತ್ತದಿಂದ ಶುರುವಾಗುವ ಈ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಬ್ಯಾಂಕ್‌ಗಳ ಶಾಖಾ ಕಚೇರಿಗಳು, ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿವೆ. ಪ್ರಮುಖ ವಿದ್ಯಾಸಂಸ್ಥೆ ಹಾಗೂ ಧಾರ್ಮಿಕ ಕೇಂದ್ರಗಳೂ ಈ ಮಾರ್ಗಕ್ಕೆ ಹೊಂದಿಕೊಂಡಂತೆಯೇ ಇವೆ.

ಮಿನರ್ವ ವೃತ್ತ, ವಿ.ವಿ.ಪುರಂ ಹಾಗೂ ಕಿಮ್ಸ್‌ ಆಸ್ಪತ್ರೆ ಕಡೆಯಿಂದ ಪುರಭವನಕ್ಕೆ ಬರುವವರು ಈ ಹಾದಿಯಲ್ಲಿ ಮೂರು ‘ಸಿಗ್ನಲ್‌’ಗಳನ್ನು ದಾಟಬೇಕು. ರಸ್ತೆಯೇನೋ ವಿಸ್ತಾರವಾಗಿದೆ. ಹೀಗಿದ್ದರೂ ದಟ್ಟಣೆ ಸಮಸ್ಯೆ ತಪ್ಪಿಲ್ಲ. ಪಾದಚಾರಿಗಳು ರಸ್ತೆ ದಾಟುವುದೂ ಸವಾಲಾಗಿದೆ.

‘ಬೆಳಿಗ್ಗೆ ಹಾಗೂ ಸಂಜೆ ಈ ರಸ್ತೆಯಲ್ಲಿ ನಿತ್ಯವೂ ದಟ್ಟಣೆ ಉಂಟಾಗುತ್ತದೆ. ಜೆ.ಸಿ.ರಸ್ತೆ ಜಂಕ್ಷನ್‌ನಿಂದ ಹಿಡಿದು ರವೀಂದ್ರ ಕಲಾಕ್ಷೇತ್ರದವರೆಗೂ ರಸ್ತೆಯ ಎಡಬದಿಯಲ್ಲಿ ಟಯರ್‌, ಸೀಟ್‌ ಸೇರಿದಂತೆ ವಾಹನಗಳ ಬಿಡಿಭಾಗ ಹಾಗೂ ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಿವೆ. ಖರೀದಿಗಾಗಿ ನಗರದ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಾರೆ. ಅವರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲುಗಡೆ ಮಾಡಿರುತ್ತಾರೆ. ಅದರಿಂದ ದಟ್ಟಣೆ ಹೆಚ್ಚುತ್ತಿದೆ’ ಎಂದು ವಿ.ವಿ.ಪುರ ನಿವಾಸಿ ಕಿರಣ್‌ ದೂರಿದರು.

‘ಬೇಗನೆ ಕಚೇರಿ ತಲುಪುವ ಧಾವಂತದಲ್ಲಿ ಕೆಲವರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಟಯರ್‌ ಅಂಗಡಿಗಳಿಗೆ ಹೋಗುವವರು ನಡುರಸ್ತೆಯಿಂದ ಏಕಾಏಕಿ ಎಡಕ್ಕೆ ತಿರುವು‍ಪಡೆಯಲು ಮುಂದಾಗುತ್ತಾರೆ. ಈ ವೇಳೆ ಹಿಂಬದಿಯ ವಾಹನ ಡಿಕ್ಕಿಯಾಗಿ ಹಲವರು ತಲೆ ಹಾಗೂ ಕೈಕಾಲಿಗೆ ಗಾಯ ಮಾಡಿಕೊಂಡ ಉದಾಹರಣೆಗಳು ಇವೆ’ ಎಂದೂ ತಿಳಿಸಿದರು.

‘ಅಗತ್ಯವಿದ್ದರಷ್ಟೆ ವಾಹನ ರಸ್ತೆಗಿಳಿಸಲಿ’

‘20 ವರ್ಷಗಳ ಹಿಂದೆ ಜೆ.ಸಿ.ರಸ್ತೆಯು ದ್ವಿಪಥ ಮಾರ್ಗವಾಗಿತ್ತು. ದಟ್ಟಣೆ ಸಮಸ್ಯೆ ತಪ್ಪಿಸುವ ಸಲುವಾಗಿ ಅದನ್ನು ಏಕಮುಖ ಸಂಚಾರಕ್ಕಷ್ಟೇ ಮೀಸಲಿಡಲಾಯಿತು. ಈಗ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ರಸ್ತೆ ವಿಸ್ತಾರವಾಗಿದ್ದರೂ ದಟ್ಟಣೆ ಉಂಟಾಗುತ್ತಿದೆ. ನಾಗರಿಕರು ತೀರಾ ಅಗತ್ಯವಿದ್ದರಷ್ಟೇ ವಾಹನಗಳನ್ನು ರಸ್ತೆಗೆ ಇಳಿಸಬೇಕು. ಹಾಗಾದಾಗ ಮಾತ್ರ ದಟ್ಟಣೆ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಹೇಳಿದರು.

‘ಮಿನರ್ವ ವೃತ್ತದಿಂದ ಕಾರ್ಪೊರೇಷನ್‌ ವೃತ್ತದವರೆಗೂ ಮೇಲ್ಸೇತುವೆ ನಿರ್ಮಿಸಲು ಸಾಧ್ಯವೇ ಇಲ್ಲ. ಅದು ನಗರದ ಸೌಂದರ್ಯಕ್ಕೂ ಮಾರಕ. ಈ ರಸ್ತೆಯಲ್ಲಿ ಸುರಂಗ ಮಾರ್ಗ ಕೊರೆಸಿ ಮೆಟ್ರೊ ಸಂಚರಿಸುವಂತೆ ಮಾಡಬಹುದು. ಆಗ ಜನರು ಅಗತ್ಯ ಕೆಲಸಗಳಿಗಾಗಿ ಮೆಟ್ರೊ ಅವಲಂಬಿಸುತ್ತಾರೆ. ಅದರಿಂದ ವಾಹನ ಬಳಕೆಯೂ ತಗ್ಗಲಿದೆ. ಸಂಚಾರ ದಟ್ಟಣೆಯ ಸಮಸ್ಯೆಗೂ ಮುಕ್ತಿ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮೆಜೆಸ್ಟಿಕ್‌ ತಲುಪುವುದೂ ಸವಾಲು’

‘ದಟ್ಟಣೆ ಸಮಸ್ಯೆಯಿಂದಾಗಿ ಮೆಜೆಸ್ಟಿಕ್‌ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹೋಗುವವರು ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹನುಮಂತನಗರದ ಸಿದ್ದಾರ್ಥ್‌ ಹೇಳಿದರು.

‘ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಜೆ.ಸಿ.ರಸ್ತೆ ಜಂಕ್ಷನ್‌ನಿಂದ ಟೌನ್‌ಹಾಲ್‌ಗೆ ತಲುಪಲು ಕನಿಷ್ಠ ಅರ್ಧಗಂಟೆಯಾದರೂ ಬೇಕು. ಈ ಸಮಯದಲ್ಲಿ ಆಂಬುಲೆನ್ಸ್‌ಗಳು ದಟ್ಟಣೆಯಲ್ಲಿ ಸಿಲುಕಿಕೊಂಡರೆ ರೋಗಿಗಳು ಪರಿತಪಿಸಬೇಕಾಗುತ್ತದೆ. ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಅನೇಕ ಮಂದಿ ಪಾದಚಾರಿ ಮಾರ್ಗದ ಮೇಲೆ ಬೈಕ್‌ ಹಾಗೂ ಸ್ಕೂಟರ್‌ಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT