ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವ್ಯವಸ್ಥೆ ನಿಯಂತ್ರಿಸುತ್ತಿರುವ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆ: ಶಿವನ್‌

ಎಲ್ಲ ಸೌಲಭ್ಯ ಪೂರೈಕೆ; ತ್ರಿಪುರ ಸಿಎಂ ಭರವಸೆ
Last Updated 18 ಸೆಪ್ಟೆಂಬರ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ತ್ರಿಪುರದಲ್ಲಿ ಬಂದು ಉದ್ದಿಮೆ ಆರಂಭಿಸುವಂತೆ ಅಲ್ಲಿನ ಮುಖ್ಯಮಂತ್ರಿ ಬಿಪ್ಲವ್‌ ಕುಮಾರ್‌ ದೇವ್‌ ಆಹ್ವಾನಿಸಿದರು.

ಇಂಡಿಯಾ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ಸಂಘದ ಆಶ್ರಯದಲ್ಲಿ ಮಂಗಳವಾರ ನಡೆದ ಸ್ಪೇಸೋಟ್ರಾನಿಕ್ಸ್‌ –2018 ಹೆಸರಿನ ಎಲೆಕ್ಟ್ರಾನಿಕ್ಸ್‌ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ನೀತಿ ಸಂಬಂಧಿಸಿದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ತ್ರಿಪುರದಂತಹ ಸಣ್ಣ ರಾಜ್ಯವನ್ನು ಹೊಸ ರೀತಿಯಲ್ಲಿ ಬೆಳೆಸುವುದರಲ್ಲಿ ಸಂತೋಷವಿದೆ. ಅಲ್ಲಿ ಭೂಮಿ, ವಿದ್ಯುತ್‌, ಮೂಲಸೌಲಭ್ಯಗಳು ಅತ್ಯಂತ ಅಗ್ಗವಾಗಿ ದೊರೆಯುತ್ತದೆ. ಶೇ 90ರಷ್ಟು ಸಾಕ್ಷರತೆ ಇರುವ ರಾಜ್ಯವದು. ಆದರೆ, ಶಿಕ್ಷಣ ಪಡೆದವರು ಎಲ್ಲೆಲ್ಲೋ ಚದುರಿ ಹೋಗಿದ್ದಾರೆ. ಅವರನ್ನು ಮತ್ತೆ ತಾಯ್ನಾಡಿಗೆ ಕರೆಸಬೇಕು. ಈ ದಿಸೆಯಲ್ಲಿ ಉದ್ಯಮ ಕ್ಷೇತ್ರದವರು ನೆರವಾಗಬೇಕು’ ಎಂದು ಅವರು ಕೋರಿದರು.

‘ನಾವು ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿ ಬಾಗಿಲು ತೆರೆದಿದ್ದೇವೆ. ಸಂವಹನದ ದೃಷ್ಟಿಯಿಂದ ತ್ರಿಪುರ ಅಜ್ಞಾತವಾಗಿ ಉಳಿದಿಲ್ಲ. ರೈಲು, ರಸ್ತೆ ಸಂಪರ್ಕ, ದೂರವಾಣಿ, ಹೈಸ್ಪೀಡ್‌ ಇಂಟರ್‌ನೆಟ್‌ ಎಲ್ಲವೂ ಇದೆ. ಅಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಗುಣಮಟ್ಟದ ಉತ್ಪನ್ನ ಹೊರತಂದರೆ ಇಡೀ ಮಾರುಕಟ್ಟೆ ನಿಮ್ಮದೇ ಆಗುತ್ತದೆ’ ಎಂದು ಭರವಸೆ ಮೂಡಿಸಿದರು.

ಅಗರ್ತಲಾದಲ್ಲಿ ಇಸ್ರೋದ ಇನ್ಕ್ಯುಬೇಷನ್‌ ಸೆಂಟರ್‌ಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್‌, ‘ದೇಶದಲ್ಲಿ ತೈಲದ ಬಳಿಕ ಹೆಚ್ಚು ಪ್ರಮಾಣದಲ್ಲಿ ಆಮದಾಗುತ್ತಿರುವುದು ಎಲೆಕ್ಟ್ರಾನಿಕ್ಸ್ ವಸ್ತುಗಳು. ಇವು ಸದ್ದಿಲ್ಲದೇ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. 2020ರ ವೇಳೆಗೆ ವಹಿವಾಟು ಮೌಲ್ಯ 400 ಬಿಲಿಯನ್‌ಗೆ ಏರಲಿದೆ. ಆದರೆ, ನಾವು ಕೇವಲ 100 ಬಿಲಿಯನ್‌ ಮೌಲ್ಯದಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದ್ದೇವೆ. ರೂಪಾಯಿ ಮೌಲ್ಯ ಕುಸಿದಿರುವ ಹಿಂದೆ ಈ ಮಾರುಕಟ್ಟೆಯ ಪಾತ್ರ ಬಹಳಷ್ಡು ಇದೆ. ಎಲ್ಲವನ್ನೂ ಆಮದು ಮಾಡುವ ಬದಲು ನಾವೇ ವಸ್ತುಗಳನ್ನು ಉತ್ಪಾದಿಸುವಂತಾಗಬೇಕು. ಕೈಗಾರಿಕೆಗಳ ಉತ್ಪನ್ನಗಳನ್ನು ಇಸ್ರೋ ಕೊಳ್ಳಲಿದೆ. ಆದ್ದರಿಂದ ಮಾರುಕಟ್ಟೆಯ ಆತಂಕ ಬೇಡ’ ಎಂದರು.

‘ಇಸ್ರೋ ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತಿದೆ. ಎಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲವೋ ಅಲ್ಲೆಲ್ಲಾ ತನ್ನ ಸೌಲಭ್ಯ ಕೇಂದ್ರಗಳನ್ನು ತೆರೆಯಲಿದೆ. ದೇಶದ 6 ಕಡೆ ಇಂಥ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುವುದು. ಇನ್ನೂ ಮರೆಯಲ್ಲಿರುವ (ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವ) ವಿಶ್ವವಿದ್ಯಾಲಯಗಳಲ್ಲಿಯೂ ಇಸ್ರೋ ತನ್ನ ಸಂಶೋಧನಾ ಪೀಠ ಸ್ಥಾಪಿಸಲಿದೆ’ ಎಂದರು.

ಇಸ್ರೊ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಮಾತನಾಡಿ, ‘ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಗಡಿ, ರೇಖೆಗಳ ಇತಿಮಿತಿ ಇಲ್ಲ. ಸದ್ಯ ದೇಶದಲ್ಲಿ 40 ಉಪಗ್ರಹಗಳಿವೆ. ಆದರೆ, ನಮ್ಮ ಅಗತ್ಯಗಳನ್ನು ಪೂರೈಸಲು ಇವುಗಳ ಸಂಖ್ಯೆ ದುಪ್ಪಟ್ಟುಗೊಳ್ಳಬೇಕು. ಬಾಹ್ಯಾಕಾಶ ಸಾಹಸ, ಪ್ರವಾಸೋದ್ಯಮ ಇತ್ಯಾದಿ ಮುಂದಿನ ಮಾರುಕಟ್ಟೆಯಾಗಿ ಬರಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT