ಬುಧವಾರ, ಏಪ್ರಿಲ್ 21, 2021
23 °C
ಪ್ರಜಾವಾಣಿ ವೆಬ್‌ ವಿಶೇಷ *ಬಿಡಿಎ ಅಕ್ರಮ ಸಕ್ರಮ –ಏನು ಎತ್ತ? ಭಾಗ– 2

ಇಡೀ ಬಡಾವಣೆಯಷ್ಟು ಜಾಗ ಒತ್ತುವರಿ: ಬಿಡಿಎ ಅಂಕೆ ತಪ್ಪಿದ್ದೆಲ್ಲಿ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆಗಳ ಅಭಿವೃದ್ಧಿಗೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂ ಪರಿಹಾರ ಹಸ್ತಾಂತರ ಆದೇಶವನ್ನೂ ನೀಡಿರುವ 4,333 ಎಕರೆ 30 ಗುಂಟೆ ಜಾಗಗಳಲ್ಲಿ ಈಗ ಅನಧಿಕೃತ ಕಟ್ಟಡಗಳಿವೆ. ಬಿಡಿಎ ತನ್ನ ‘ಜಾಣ ಮರೆವಿ’ನಿಂದ ಕಳೆದು ಕೊಂಡಿರುವ ಈ ಜಾಗದ ಪ್ರಮಾಣ ತಾನು ಈವರೆಗೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲೇ ಅತೀ ದೊಡ್ಡದಾದ ನಾಡಪ್ರಭು ಕೆಂಪೇಗೌಡ ಬಡಾವಣೆಯ ವಿಸ್ತೀರ್ಣಕ್ಕಿಂತಲೂ (4043ಎಕರೆ 27 ಗುಂಟೆ) ಹೆಚ್ಚು.

ಬಿಡಿಎ ಭೂಪರಿಹಾರ ಹಸ್ತಾಂತರ ಆದೇಶ ನೀಡಿದ ಬಳಿಕವೂ ಇಷ್ಟೊಂದು ಪ್ರಮಾಣದ ಜಾಗದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿದ್ದು ಹೇಗೆ? ಈ ಜಾಗಗಳು ಒತ್ತುವರಿಯಾಗಿವೆ ಎಂದು ತಿಳಿದೂ ಅವುಗಳನ್ನು ತೆಕ್ಕೆಗೆ ತೆಗೆದುಕೊಳ್ಳದಿರಲು ಸಾಧ್ಯವಾಗದಿದ್ದುದ್ದು ಹೇಗೆ. ಈ ವಿಚಾರದ ಬಗ್ಗೆ ದಶಕಗಳಿಂದ ಯಾವ ಸರ್ಕಾರಗಳೂ ಪ್ರಯತ್ನವನ್ನೇ ಪಟ್ಟಿಲ್ಲ ಏಕೆ ಎಂಬುದು ನಿಜಕ್ಕೂ ಚೋದ್ಯದ ವಿಷಯ. 

ಇದರ ವಿವರ ಕೆದಕುತ್ತಾ ಹೋದಾಗ ಭೂಸ್ವಾಧೀನ ಪ್ರಕ್ರಿಯೆಯಲ್ಲೇ ಅಧಿಕಾರಿಗಳು ನಡೆಸುತ್ತಾ ಬಂದಿರುವ ಎಡವಟ್ಟುಗಳೂ ಢಾಳಾಗಿ ಕಾಣಿಸುತ್ತವೆ.

ಯಾವುದಾದರೂ ಹೊಸ ಬಡಾವಣೆ ಅಭಿವೃದ್ಧಿಪಡಿಸುವ ಮುನ್ನ ಬಿಡಿಎ ಅದಕ್ಕೆ ಎಷ್ಟು ಜಾಗ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಅಂದಾಜು ಮಾಡುತ್ತದೆ. ಬಳಿಕ ಈ ಬಗ್ಗೆ ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 4–1ರ ಅಡಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸುತ್ತದೆ. ಇದು ಸ್ವಾಧೀನ ಪಡಿಸಿಕೊಳ್ಳುವ ಜಾಗದ ಅಂದಾಜು ಲೆಕ್ಕಾಚಾರ ಮಾತ್ರ. ನಿಖರ ಲೆಕ್ಕ ಅಲ್ಲ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಅಧಿಸೂಚನೆಯಲ್ಲಿ ಗುರುತಿಸಿರುವ ಜಾಗಗಳ ಮಾಲೀಕರಿಗೆ ನೋಟಿಸ್‌ ನೀಡಬೇಕು.

‘ಒಂದು ವೇಳೆ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶೀಸಿರುವ ಜಾಗದಲ್ಲಿ ಜಾಗದ ಮಾಲೀಕರು ಮನೆ ಅಥವಾ ಇನ್ನಿತರ ಕಟ್ಟಡ ನಿರ್ಮಿಸಿಕೊಂಡಿದ್ದರೆ ಅಷ್ಟು ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಭೂಸ್ವಾಧೀನಾಧಿಕಾರಿಯನ್ನು ಕೋರಲು ಕಾಯ್ದೆಯ ಸೆಕ್ಷನ್ ಅಡಿ 5 ಎ ಅವಕಾಶ ಕಲ್ಪಿಸುತ್ತದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಮಾಪನಾ ಸರ್ವೆ ನಡೆಸಿ, ಸಮಂಜಸ ಕರಣಗಳಿದ್ದರೆ ಮಾಲೀಕ ಕೋರಿದಷ್ಟು ಜಾಗವನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಲು ಅವಕಾಶ ಇರುತ್ತದೆ’ ಎಂದು ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸಿದ್ದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ಆದರೆ, ಬಿಡಿಎ ಭೂಸ್ವಾಧೀನ ಪಡಿಸಿಕೊಳ್ಳುವಾಗ ಜಂಟಿ ಮಾಪನ ಸರ್ವೆ ದಾಖಲೆಯಲ್ಲಿ ಮಾತ್ರ ನಡೆಯುತ್ತದೆ. ಬಿಡಿಎ ಭೂಸ್ವಾಧೀನಾಧಿಕಾರಿಗಳು ಕೆಲವೊಮ್ಮೆ ಸ್ಥಳಕ್ಕೆ ಭೇಟಿ ಕೊಡುವುದೇ ಇಲ್ಲ. ಪಹಣಿ ಪತ್ರ (ಆರ್‌ಟಿಸಿ) ದಾಖಲೆಗಳನ್ನು ನೋಡಿ ಅಂತಿಮ ಅಧಿಸೂಚನೆಗೆ ಕ್ರಮಕೈಗೊಳ್ಳುತ್ತಾರೆ. ಆಗ ಸಕಾರಣದಿಂದ ಜಮೀನಿನ ಮಾಲೀಕರು ಜಾಗ ಬಿಟ್ಟುಕೊಡಲು ತಕರಾರು ಎತ್ತಿದ ಬಳಿಕವೂ, ಕೆಲವು ಜಾಗಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಿಲ್ಲ. ಇಂತಹ ಜಾಗದ ಮಾಲೀಕರು ತಾವು ಜಾಗ ಬಿಟ್ಟುಕೊಡಲು ಒಪ್ಪಿಲ್ಲ ಹಾಗಾಗಿ ಇದು ನಮ್ಮದೇ ಸ್ವತ್ತು ಎಂದು ಅಲ್ಲಿ ಕಟ್ಟಡ ನಿರ್ಮಿಸುತ್ತಾರೆ. ಇಂತಹ ಪ್ರಕರಣಗಳು ಕೂಡಾ ಒತ್ತುವರಿ ಕುರಿತ ಗೊಂದಲಗಳು ನಿರ್ಮಾಣವಾಗಲು ಮುಖ್ಯಕಾರಣ’ ಎಂದು ಅವರು ವಿವರಿಸಿದರು. 

‘ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ ಪಹಣಿ ದಾಖಲೆಗಳಲ್ಲಿ ಜಾಗ ಬಿಡಿಎಗೆ ಸೇರಿದ್ದು ಎಂದೇ ನಮೂದಾಗುತ್ತದೆ. ಆದರೆ, ಅಸಲಿಗೆ ಅದರ ಮಾಲೀಕರ ಸ್ವಾಧೀನದಲ್ಲೇ ಜಾಗ ಇರುತ್ತದೆ. ಕೆಲವೊಮ್ಮೆ ಅಧಿಕಾರಿಗಳು ಬಲವಂತದಿಂದ ಜಾಗ ಸ್ವಾಧೀನಕ್ಕೆ ಹೋದಾಗ  ಭೂಮಾಲೀಕರಾದ ರೈತರೆಲ್ಲ ಒಟ್ಟಾಗಿ ಅಧಿಕಾರಿಗಳನ್ನೇ ಹಿಂದಕ್ಕೆ ಕಳುಹಿಸಿದ ಉದಾಹರಣೆಗಳು ಬಹಳಷ್ಟಿವೆ. ಅವರಿಗೆ ರಾಜಕೀಯ ನಾಯಕರ ಬೆಂಬಲವೂ ಇರುತ್ತದೆ. ನಮಗೇಕೆ ಉಸಾಬರಿ ಎಂದು ಅಧಿಕಾರಿಗಳು ಸುಮ್ಮನಾಗುತ್ತಾರೆ. ಕೆಲವು ಪ್ರಕರಣಗಳಲಿ ಭೂಮಾಲೀಕರು ಪರಿಹಾರದ ಹಣ ಪಡೆಯದೇ ಕಾನೂನು ಹೋರಾಟ ನಡೆಸಿದ ಉದಾಹರಣೆಗಳೂ ಇವೆ. ಪರಿಹಾರ ನ್ಯಾಯಾಲಯ ಸೂಚಿಸಿದ ಖಾತೆಯಲ್ಲಿ ಜಮೆಯಾಗಿರುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಈ ರೀತಿಯ ವ್ಯಾಜ್ಯಗಳಿವೆ’ ಎಂದು ಅವರು ವಿವರಿಸಿದರು.

‘ಇನ್ನು ಕೆಲವು ಪ್ರಕರಣಗಳಲ್ಲಿ ಜಾಗದ ಮಾಲೀಕರು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟವಾದ ಬಳಿಕವೂ ಜಾಗವನ್ನು ಬೇರೆಯವರಿಗೆ ಕೇವಲ ಖಾತಾ ಆಧಾರದಲ್ಲಿ ಮಾರಾಟ ಮಾಡಿರುವ ಉದಾಹರಣೆಗಳಿವೆ. ಆ ಜಾಗ ಖರೀದಿಸಿದವರು ಅಲ್ಲಿ ಮನೆ ಕಟ್ಟಿದ್ದಾರೆ. ಇದು ಕೂಡ ಒತ್ತುವರಿ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ಇರುವುದಕ್ಕೆ ಕಾರಣ’ ಎಂದರು.

‘ನೂರಾರು ಪ್ರಕರಣಗಳಲ್ಲಿ ಬಿಡಿಎ ಅಧಿಕಾರಿಗಳೇ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಜಾಗವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ದಾಖಲಿಸಿದ ಉದಾಹರಣೆಗಳಿವೆ. ಮೂಲ ದಾಖಲೆಗಳಲ್ಲಿ ಅವುಗಳಿನ್ನೂ ಪ್ರಾಧಿಕಾರದ ಜಾಗ. ನಕಲಿ ದಾಖಲೆ ನಂಬಿ ಮೋಸ ಹೋಗಿರುವವರು ಈಗ ದಂಡ ಕಟ್ಟಿ ಮತ್ತೆ ಆ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಅಕ್ರಮ ಸಕ್ರಮ ಯೋಜನೆಯಡಿ ಅವಕಾಶ ಕಲ್ಪಿಸಲಿದೆ’ ಎಂದು ತಿಳಿಸಿದರು.

ಇದನ್ನೂ ಓದಿ... ಪ್ರಜಾವಾಣಿ ವೆಬ್ ವಿಶೇಷ | ಬಿಡಿಎ ಬಳಿ ಇದ್ದೂ ಇಲ್ಲದಂತಿರುವ ನಿವೇಶನ 16,219 ಎಕರೆ!

ಎಲ್ಲರ ಪಾಲೂ ಇದೆ: ‘ಕಾಲ ಕಾಲಕ್ಕೆ ಬಿಡಿಎ ತನಗೆ ಸಂಬಂಧಿಸಿದ ಜಾಗದ ಬಗ್ಗೆ ಸರಿಯಾದ ಲೆಕ್ಕ ಇಡುತ್ತಿದ್ದರೆ ಈಗ 4,333 ಎಕರೆಯಷ್ಟು ಜಾಗದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಇದಕ್ಕೆ ಬಿಡಿಎ ಅಧಿಕಾರಿಗಳು ಎಷ್ಟುಕಾರಣವೋ, ಈ ಬಗ್ಗೆ ಅಸಡ್ಡೆ ಪ್ರದರ್ಶಿಸಿದ ಸರ್ಕಾರಗಳೂ ಅಷ್ಟೇ ಹೊಣೆ’ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ.

‘ತೀರ ಅನಿವಾರ್ಯವಾದರೆ ಸರ್ಕಾರ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲಿ. ಅದರ ಜೊತೆಗೆ ಈ ಅಕ್ರಮಗಳಿಗೆ ಕಾರಣವಾದವರಿಗೆ ಶಿಕ್ಷೆಯೂ ಆಗಬೇಕಲ್ಲವೇ. ಏನೇ ಅಕ್ರಮ ಮಾಡಿದರೂ ರಾಜಕೀಯ ಪ್ರಭಾವ ಬಳಸಿ ಅದನ್ನು ಮುಚ್ಚಿ ಹಾಕಬಹುದು ಎಂಬ ನಂಬಿಕೆ ಇರುವುದರಿಂದಲೇ ವರ್ಷದಿಂದ ವರ್ಷಕ್ಕೆ ಅಕ್ರಮಗಳು ಮುಂದುವರಿಯುತ್ತಲೇ ಇವೆ. ಇದು ತಪ್ಪಬೇಕಾದರೆ ಅಕ್ರಮ ನಡೆಯುವುದಕ್ಕೆ ಕಾರಣವಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು