ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ | ₹300 ಕೋಟಿ ಹೂಡಿಕೆಗೆ ಒಪ್ಪಿಗೆ: ಎಚ್.ಕೆ. ಪಾಟೀಲ

ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್‌ಗೆ ಚಾಲನೆ
Published 28 ಜುಲೈ 2023, 16:04 IST
Last Updated 28 ಜುಲೈ 2023, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರ ಸಮಿತಿಯು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ₹300 ಕೋಟಿಗಳ ಬಂಡವಾಳ ಹೂಡಿಕೆ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ಪ್ರವಾಸೋದ್ಯಮ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಖಾಸಗಿ ಹೂಡಿಕೆಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ’ ಎಂದರು.

‘ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶವನ್ನು ಕಲ್ಪಿಸಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಗೂ ಪೂರಕವಾಗಿದೆ’ ಎಂದು ಅವರು ತಿಳಿಸಿದರು.

‘ಸ್ಪಿಯರ್ ಟ್ರಾವೆಲ್ ಮೀಡಿಯಾ ಕಂಪನಿ 'ಇಂಡಿಯಾ ಇಂಟರ್‌ನ್ಯಾಶನಲ್ ಟ್ರಾವೆಲ್ ಮಾರ್ಟ್' (ಐಐಟಿಎಂ) ಆಯೋಜಿಸಿದೆ.

ಸ್ಪಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ರೋಹಿತ್ ಹಂಗಲ್ ಮಾತನಾಡಿ, ‘ಪ್ರಸ್ತುತ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ವಿದೇಶಗಳಿಂದ ಭಾರತಕ್ಕೆ ಭೇಟಿ ನೀಡುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ. ಐಐಟಿಎಂ ದೇಶಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲತುಂಬುವ ಕಾರ್ಯಕ್ರಮವಾಗಿದೆ. ತೀರ್ಥಯಾತ್ರೆ, ಸಾಹಸ, ಕುಟುಂಬ ಸದಸ್ಯರೊಂದಿಗೆ ಪ್ರವಾಸ ಮತ್ತು ಹನಿಮೂನ್‌ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ಯಾಕೇಜ್‌ಗಳನ್ನು ಹುಡುಕುತ್ತಿರುವವರಿಗೆ ಅಥವಾ ತಮ್ಮ ಕಂಪನಿಗಳು ಸಮ್ಮೇಳನಗಳನ್ನು ಆಯೋಜಿಸಲು ಸ್ಥಳಗಳನ್ನು ಹುಡುಕುತ್ತಿರುವವರಿಗೆ ಇದು ಸೂಕ್ತ ವೇದಿಕೆಯಾಗಿದೆ’ ಎಂದು ಹೇಳಿದರು.

ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಟ್ರಾವೆಲ್ ಏಜೆಂಟರು ಹಾಗೂ ಟೂರ್ ಆಪರೇಟರ್‌ಗಳು, ಹೋಟೆಲ್‌-ರೆಸಾರ್ಟ್‌, ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ, ತಂತ್ರಜ್ಞಾನ ವೇದಿಕೆ, ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕಳೆದ 23 ವರ್ಷಗಳಿಂದ ಮೇಳ ನಡೆಯುತ್ತಿದ್ದು, ಈ ಬಾರಿಯ ಮೇಳದಲ್ಲಿ ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಬಿಹಾರ, ಉತ್ತರಪ್ರದೇಶ, ಪಂಜಾಬ್, ತಮಿಳುನಾಡು, ಛತ್ತೀಸ್‌ಗಡ ಸೇರಿದಂತೆ 22 ರಾಜ್ಯಗಳು ಭಾಗವಹಿಸಿವೆ. ಜತೆಗೆ, ಮಲೇಷ್ಯಾ, ವಿಯೆಟ್ನಾಂ, ಥಾಯ್ಲೆಂಡ್‌, ನೇಪಾಳ, ದುಬೈ, ಟರ್ಕಿ, ಸಿಂಗಾಪುರ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT