ಮಂಗಳವಾರ, ಮೇ 24, 2022
23 °C
ಬೇಕಾಬಿಟ್ಟಿ ಎಳೆದಾಡಿ ವಾಹನ ಜಖಂ

‘ಟೋಯಿಂಗ್’ ಜಾಲದೊಳಗೆ ಕಿರಿಕಿರಿ, ಅಕ್ರಮ; ಟೈಗರ್ ವಾಹನ ಸಿಬ್ಬಂದಿ ದುರ್ವರ್ತನೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಹಾಗೂ ವಾಹನ ನಿಲುಗಡೆ ನಿಷೇಧವಿರುವ (ನೋ ಪಾರ್ಕಿಂಗ್) ಜಾಗದಲ್ಲಿ ನಿಲ್ಲಿಸುವ ವಾಹನಗಳನ್ನು ಎತ್ತುಕೊಂಡು ಹೋಗಿ ದಂಡ ವಿಧಿಸಲು ಟೋಯಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕಾಗಿ ಸಂಚಾರ ಪೊಲೀಸರು, ಖಾಸಗಿ ಏಜೆನ್ಸಿಗಳ ಮೊರೆ ಹೋಗಿದ್ದಾರೆ. ಇಂಥ ಏಜೆನ್ಸಿಗಳ ಸಿಬ್ಬಂದಿ ದುರ್ವರ್ತನೆ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುವುದೂ ಅಲ್ಲದೇ, ಇಲಾಖೆಗೂ ಕೆಟ್ಟ ಹೆಸರು ತರುತ್ತಿದೆ.

ಸಿಲಿಕಾನ್ ಸಿಟಿ ಹಾಗೂ ಉದ್ಯಾನ ನಗರಿ ಎನಿಸಿಕೊಂಡಿರುವ ಬೆಂಗಳೂರು, ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ನಗರವಾಗಿ ಮಾರ್ಪಟ್ಟಿದೆ. ಲಾಕ್‌ಡೌನ್‌ ವೇಳೆ ಕಡಿಮೆಯಾಗಿದ್ದ ವಾಹನಗಳ ಸಂಖ್ಯೆ, ಲಾಕ್‌ಡೌನ್‌ ತೆರವಾದ ನಂತರ ಮತ್ತೆ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲೇ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸುವರ ಪತ್ತೆಗೆ ನಿತ್ಯವೂ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಕ್ಷಗಟ್ಟಲೆ ರೂಪಾಯಿ ದಂಡವನ್ನೂ ತಪ್ಪಿತಸ್ಥರಿಂದ ಸಂಗ್ರಹಿಸುತ್ತಿದ್ದಾರೆ.

ಆದರೆ, ಕೆಲವೆಡೆ ವಾಹನಗಳನ್ನು ನಿಯಮಬಾಹಿರವಾಗಿ ಟೋಯಿಂಗ್ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಿಲ್ಲದ ಕಡೆ ನಿಲ್ಲಿಸಿರುವ ವಾಹನಗಳನ್ನೂ ಟೋಯಿಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಿಯಮಬಾಹಿರ ಕ್ರಮಗಳನ್ನು ಪ್ರಶ್ನಿಸುವ ಸಾರ್ವಜನಿಕರ ಜೊತೆ, ಕೆಲ ಪೊಲೀಸರು ಹಾಗೂ ಟೋಯಿಂಗ್ ಏಜೆನ್ಸಿ ಸಿಬ್ಬಂದಿ ಜಗಳ ಮಾಡುತ್ತಿದ್ದಾರೆ. ಇಂಥ ಕಿರಿಕಿರಿಯಿಂದಾಗಿ ಬೇಸತ್ತ ಬಹುತೇಕ ಸಾರ್ವಜನಿಕರು, ಜಗಳ ಬೇಡವೆಂದು ದಂಡ ಪಾವತಿ ಮಾಡಿ ಸುಮ್ಮನಾಗುತ್ತಿದ್ದಾರೆ. ಕೆಲವರು ಮಾತ್ರ ಟೋಯಿಂಗ್ ವ್ಯವಸ್ಥೆಯಲ್ಲಿರುವ ಲೋಪಗಳು ಹಾಗೂ ಅಕ್ರಮಗಳ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಟೋಯಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ತಯಾರಿಯನ್ನೂ ಮಾಡಿಕೊಂಡಿದ್ದಾರೆ.

ಇಂದಿರಾನಗರದಲ್ಲಿ ಕಲ್ಲು ನಿಲ್ಲಿಸಿ ಟೋಯಿಂಗ್: ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್ ಬಳಿಯ ರಸ್ತೆಯಲ್ಲಿ ಕೆಲವೆಡೆ ಮಾತ್ರ ‘ನೋ ಪಾರ್ಕಿಂಗ್’ ಫಲಕಗಳನ್ನು ಅಳವಡಿಸಲಾಗಿದೆ. ಇನ್ನು ಹಲವೆಡೆ, ಕಲ್ಲುಗಳನ್ನು ಅಡ್ಡ ಹಾಕಲಾಗಿದೆ. ಕಲ್ಲಿನಿಂದ ಗುರುತು ಮಾಡಿದ ಸ್ಥಳದಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ ಎಂಬುದು ಸ್ಥಳೀಯರ ದೂರು.

ಈ ಕ್ರಮವನ್ನು ಖಂಡಿಸುತ್ತಿರುವ ಸ್ಥಳೀಯರು, ‘ಮನಬಂದಂತೆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ತಪ್ಪು ಮಾಡದ ಜನರಿಂದಲೂ ದಂಡ ವಸೂಲಿ ಮಾಡಲಾಗುತ್ತಿದೆ’ ಎಂದೂ ಆರೋಪಿಸುತ್ತಿದ್ದಾರೆ.

ಇತ್ತೀಚೆಗೆ ಇದೇ ರಸ್ತೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ಮಾಮೂಲಿ ಎಂಬಂತಾಗಿದೆ. ‘ನೋ ಪಾರ್ಕಿಂಗ್’ ಫಲಕವಿಲ್ಲದ ಜಾಗದಲ್ಲಿ ಸ್ಥಳೀಯ ನಿವಾಸಿಯೊಬ್ಬರು, ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಕೆಲ ನಿಮಿಷಗಳ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ವಾಹನವನ್ನು ಟೋಯಿಂಗ್ ಮಾಡಿಕೊಂಡು ಹೋಗಿದ್ದರು.

ವಿಷಯ ತಿಳಿದು ವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಹೋಗಿದ್ದ ನಿವಾಸಿ, ‘ನೋ ಪಾರ್ಕೀಂಗ್ ಫಲಕವಿರಲಿಲ್ಲ. ಹೀಗಾಗಿ, ವಾಹನ ನಿಲ್ಲಿಸಿದ್ದೆ’ ಎಂದು ಹೇಳಿದ್ದರು. ‘ಅಲ್ಲಿ ಫಲಕವಿಲ್ಲ. ಬದಲಿಗೆ ಕಲ್ಲುಗಳನ್ನು ನಿಲ್ಲಿಸಲಾಗಿದೆ. ಅದುವೇ ನೋ ಪಾರ್ಕಿಂಗ್ ಜಾಗ. ಅದು ಸ್ಥಳೀಯ ಅಂಗಡಿಯವರಿಗೂ ಗೊತ್ತಿದೆ. ದಂಡ ಪಾವತಿಸಿ’ ಎಂದಿದ್ದರು. ಆಕ್ಷೇಪ ವ್ಯಕ್ತಪಡಿಸಿದ್ದ ನಿವಾಸಿ, ‘ಫಲಕವಿದ್ದರೆ ದಂಡ ಪಾವತಿ ಮಾಡಬಹುದು. ಕಲ್ಲು ಇಟ್ಟು ಗುರುತು ಮಾಡಲು ಕಾನೂನಿನಲ್ಲಿ ಅವಕಾಶವಿದೆಯಾ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪೊಲೀಸರು ಯಾವುದೇ ಉತ್ತರ ನೀಡಿಲ್ಲ. ಜಗಳ ಮಾಡಿ ದಂಡ ಕಟ್ಟಿಸಿಕೊಂಡು ವಾಹನ ಬಿಟ್ಟು ಕಳುಹಿಸಿದ್ದಾರೆ.

ಟೋಯಿಂಗ್‌ ವ್ಯವಸ್ಥೆಯ ಲೋಪವನ್ನು ಈ ಘಟನೆ ಎತ್ತಿ ತೋರಿಸುತ್ತಿದೆ. ಇಂಥ ಹಲವು ಘಟನೆಗಳು ರಾಜಧಾನಿಯಲ್ಲಿ ನಿತ್ಯವೂ ನಡೆಯುತ್ತಿದ್ದು, ಧ್ವನಿ ಇಲ್ಲದ ಸಾರ್ವಜನಿಕರು ಪೊಲೀಸರು ಹೇಳಿದಕ್ಕೆಲ್ಲ ತಲೆಯಾಡಿಸಿ ದಂಡ ಕಟ್ಟಿ ಹೋಗುತ್ತಿದ್ದಾರೆ.

‘ಪೊಲೀಸರ ತಪ್ಪನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಜೊತೆಯೇ ವಾಗ್ವಾದ ನಡೆಸಿದರು. ಹೆಚ್ಚು ಮಾತನಾಡಿದರೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣ ದಾಖಲಿಸುವುದಾಗಿಯೂ ಬೆದರಿಸಿದರು. ಅನಿವಾರ್ಯವಾಗಿ ದಂಡ ಕಟ್ಟಿ ವಾಹನ ಬಿಡಿಸಿಕೊಂಡು ಬಂದೆ. ನನಗಾದ ಸ್ಥಿತಿ, ನಿತ್ಯವೂ ಹಲವರಿಗೆ ಆಗುತ್ತಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ನಿವಾಸಿ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ಇಂದಿರಾನಗರ ಮಾತ್ರದಲ್ಲದೇ ಎಸ್‌ಪಿ ರಸ್ತೆ, ಮೆಜೆಸ್ಟಿಕ್‌, ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಕಲಾಸಿಪಾಳ್ಯ, ಬಸವನಗುಡಿ, ರಾಜಾಜಿನಗರ, ಯಶವಂತಪುರ, ಮತ್ತಿಕೆರೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲೂ ಇದೇ ಸ್ಥಿತಿ ಇದೆ.

ವಾಹನ ಹುಡುಕಾಟದಲ್ಲೇ ಸಮಯ ವ್ಯರ್ಥ: ಕಚೇರಿ, ಮನೆ, ಅಂಗಡಿ… ಹೀಗೆ ನಾನಾ ಕೆಲಸಕ್ಕಾಗಿ ಜನ ವಾಹನಗಳಲ್ಲಿ ರಸ್ತೆಗೆ ಬರುತ್ತಾರೆ. ಕೆಲವರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇಂಥ ವಾಹನಗಳನ್ನು ಠಾಣೆ ವ್ಯಾಪ್ತಿಯ ನಿಗದಿತ ಸ್ಥಳದಲ್ಲಿ ನಿಲ್ಲಿಸಲಾಗುತ್ತಿದ್ದು, ಅವುಗಳನ್ನು ಹುಡುಕುವುದರಲ್ಲೇ ಜನರ ಸಮಯ ವ್ಯರ್ಥವಾಗುತ್ತಿದೆ.

ಟೋಯಿಂಗ್ ಮಾಡಿಕೊಂಡು ಹೋಗುವ ವಾಹನಗಳನ್ನು ನಿಲ್ಲಿಸುವ ಜಾಗಕ್ಕೆ ತೆರಳಲು ಕೆಲ ಜನ, ನೂರಾರು ರೂಪಾಯಿಗಳನ್ನು ಆಟೊರಿಕ್ಷಾಕ್ಕೆ ಕೊಡುತ್ತಿದ್ದಾರೆ. ಹಲವರಿಗೆ, ಜಾಗ ಹುಡುಕಿ ವಾಹನ ಬಿಡಿಸಿಕೊಳ್ಳುವುದೇ ದೊಡ್ಡ ಸವಾಲಾಗುತ್ತಿದೆ.

ಎಎಸ್‌ಐ ಹಾಗೂ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಗಳಿಗೆ ಮಾತ್ರ ದಂಡ ವಿಧಿಸಲು ಅಧಿಕಾರವಿದೆ. ನಗರದ ಬಹುತೇಕ ಕಡೆ ಎಎಸ್‌ಐಗಳೇ ಟೋಯಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಕೆಲ ನಿಗದಿತ ಸ್ಥಳದಲ್ಲಿ ಎಎಸ್‌ಐಗಳೇ ಇರುವುದಿಲ್ಲ. ಅವರಿಗಾಗಿ ಸಾರ್ವಜನಿಕರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯೂ ಇದೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ರಾಜಾಜಿನಗರದ ನಿವಾಸಿಯೊಬ್ಬರು, ‘ಕಚೇರಿಗೆ ಹೊರಡುವಾಗ ಟೀ ಕುಡಿಯಲೆಂದು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿದ್ದೆ. ಕೆಲ ಕ್ಷಣಗಳಲ್ಲೇ ಬೈಕ್ ಟೋಯಿಂಗ್ ಮಾಡಿದರು. ಸ್ಥಳಕ್ಕೆ ಹೋದರೂ, ಟೋಯಿಂಗ್ ವಾಹನ ಬಂದಿರಲಿಲ್ಲ. ಗಂಟೆ ಬಿಟ್ಟು ವಾಹನ ಬಂದರೂ ಹಿರಿಯ ಅಧಿಕಾರಿ ಇರಲಿಲ್ಲ. ಅವರಿಗಾಗಿ ಸಂಜೆಯವರೆಗೂ ಕಾಯಬೇಕಾಯಿತು. ಒಂದು ದಿನದ ಕೆಲಸದ ಸಂಬಳವೂ ಹೋಯಿತು’ ಎಂದರು.

‘ಟೈಗರ್’ ಏಜೆನ್ಸಿ ಸಿಬ್ಬಂದಿ ದುರ್ವರ್ತನೆ: ವಾಹನಗಳನ್ನು ಟೋಯಿಂಗ್ ಮಾಡಲು ಖಾಸಗಿ ಏಜೆನ್ಸಿಗಳಿಂದ ‘ಟೈಗರ್’ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಈ ವಾಹನದಲ್ಲಿರುವ ಏಜೆನ್ಸಿ ಸಿಬ್ಬಂದಿ, ಸಾರ್ವಜನಿಕರ ಜೊತೆ ದುರ್ವರ್ತನೆ ತೋರುತ್ತಿದ್ದಾರೆ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಹಿರಿಯ ಅಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದರೂ ಸಿಬ್ಬಂದಿ ದುರ್ವರ್ತನೆ ಮಾತ್ರ ಕಡಿಮೆಯಾಗಿಲ್ಲ.

ಟೋಯಿಂಗ್ ವೇಳೆ ಮೈಕ್‌ನಲ್ಲಿ ಮೂರು ಸಲ ಕೂಗಬೇಕೆಂಬ ನಿಯಮವಿದೆ. ‘ಟೈಗರ್’ ವಾಹನದಲ್ಲಿ ಮೈಕ್ ಇದ್ದರೂ ಕೆಲವರು ಅದನ್ನು ಬಳಸುತ್ತಿಲ್ಲ. ಜೊತೆಗೆ, ಟೋಯಿಂಗ್ ವೇಳೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ಎಳೆದಾಡಲಾಗುತ್ತಿದೆ. ವಾಹನಗಳೂ ಜಖಂ ಆಗುತ್ತಿದ್ದು, ಈ ಬಗ್ಗೆಯೇ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಹನ ಟೋಯಿಂಗ್ ವೇಳೆ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಿತ್ಯವೂ ಸಾಮಾನ್ಯವಾಗಿದೆ. ಇದಕ್ಕೆ ಅಂತ್ಯವಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

‘ಏಜೆನ್ಸಿ ವಿರುದ್ಧ ಮುಲಾಜಿಲ್ಲದೇ ಕ್ರಮ’
‘ಟೋಯಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕೈಗೊಳ್ಳಲು ಕ್ರಮವಹಿಸಲಾಗಿದೆ. ಸಾರ್ವಜನಿಕರ ಜೊತೆ ದುರ್ವರ್ತನೆ ತೋರುವ ಹಾಗೂ ಕೆಟ್ಟದಾಗಿ ನಡೆದುಕೊಳ್ಳುವ ಸಿಬ್ಬಂದಿಯ ಏಜೆನ್ಸಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಏಜೆನ್ಸಿಗಳನ್ನೂ ರದ್ದುಪಡಿಸಲಾಗುತ್ತಿದೆ’ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌. ರವಿಕಾಂತೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೈಗರ್ ವಾಹನಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಜಿಪಿಎಸ್‌ ಉಪಕರಣ ಅಳವಡಿಸಲಾಗಿದೆ. ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವಾಗ ಕ್ಯಾಮೆರಾ ಆನ್‌ ಇರಲಿದೆ. ದೃಶ್ಯದ ದತ್ತಾಂಶ ಎರಡು ತಿಂಗಳು ಸಂಗ್ರಹವಿರಲಿದೆ. ಯಾವುದೇ ದೂರು ಬಂದರೂ, ದೃಶ್ಯ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ತಿಳಿಸಿದರು.

‘ಟೋಯಿಂಗ್ ಸ್ಥಳದಲ್ಲಿ ಏಜೆನ್ಸಿಯ ಸಿಬ್ಬಂದಿ ಸ್ವತಂತ್ರವಾಗಿ ಕೆಲಸ ಮಾಡುವುದಿಲ್ಲ. ಎಎಸ್‌ಐ ಉಸ್ತುವಾರಿ ಇರುತ್ತದೆ. ದೂರುಗಳು ಬಂದ ಕಡೆ ಟೈಗರ್‌ ಕಾರ್ಯಾಚರಣೆ ಸ್ಥಗಿತಗೊಳಿಸಿ ವಿಚಾರಣೆ ಮಾಡುತ್ತೇವೆ. ತಪ್ಪು ಕಂಡುಬಂದರೆ, ಅಮಾನತು ಮಾಡುತ್ತೇವೆ’ ಎಂದೂ ಹೇಳಿದರು.

‘ನೋ ಪಾರ್ಕಿಂಗ್ ಜಾಗದ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ನಿಗದಿತ ಜಾಗದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಫಲಕ ಹಾಕಲಾಗುತ್ತದೆ. ಅದನ್ನು ಜನ, ಗಮನಿಸಬೇಕು. ಹೆಜ್ಜೆಗೊಂದು ಹಾಗೂ 100 ಅಡಿಗೊಂದು ಫಲಕ ನಿಲ್ಲಿಸಲು ಆಗುವುದಿಲ್ಲ. ಆದರೆ, ಕೆಲವೆಡೆ ಫಲಕವಿಲ್ಲದಿದ್ದರೂ ಸಿಬ್ಬಂದಿ ಟೋಯಿಂಗ್ ಮಾಡಿದರೆ ದೂರು ನೀಡಬಹುದು. ವ್ಯವಸ್ಥೆ ಪಾರದರ್ಶಕವಾಗಲು ಸಾರ್ವಜನಿಕರ ಸಹಕಾರವೂ ಬೇಕು’ ಎಂದೂ ತಿಳಿಸಿದರು.

 


ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸಂಚಾರ ಪೊಲೀಸರು ಟೋಯಿಂಗ್ ಮಾಡಿ, ನಿಗದಿತ ನಿಲುಗಡೆ ಸ್ಥಳಕ್ಕೆ ತಂದು ಇಳಿಸಿದರು. ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.

ಹೆಚ್ಚಾದ ದಂಡ, ಸಿಬ್ಬಂದಿ ಕೈಬಿಸಿಯೇ ಹೆಚ್ಚು
ಟೋಯಿಂಗ್ ದಂಡದ ಮೊತ್ತವನ್ನು ಹೆಚ್ಚಿಸಿ ಪರಿಷ್ಕರಣೆ ಮಾಡಲಾಗಿದೆ. ಇದು ಕೆಲ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟಿದೆ. ಬಹುತೇಕ ಕಡೆ ಸಿಬ್ಬಂದಿ ಕೈಬಿಸಿ ಮಾಡಿ ವಾಹನ ಬಿಡಿಸಿಕೊಂಡು ಹೋಗುವ ಜನರ ಸಂಖ್ಯೆಯೇ ಹೆಚ್ಚಿರುವ ದೂರುಗಳೂ ಬರುತ್ತಿವೆ.

‘ದ್ವಿಚಕ್ರ ವಾಹನಗಳಿಗೆ ₹1,650 ದಂಡವಿದೆ. ಅಷ್ಟು ದಂಡ ಪಾವತಿಸಲು ಆಗದ ಜನ, ನಿಗದಿತ ಸ್ಥಳದಲ್ಲಿ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಕೊನೆಯಲ್ಲಿ, ₹500ರಿಂದ ₹1,000 ಕೊಟ್ಟು ವಾಹನ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಈ ದಂಡ ಪಾವತಿಗೆ ಲೆಕ್ಕವೇ ಇಲ್ಲದಂತಾಗಿದ್ದು, ಕೆಲ ಪೊಲೀಸ್ ಸಿಬ್ಬಂದಿಯ ಈ ವರ್ತನೆಯಿಂದ ಸರ್ಕಾರದ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ.

‘ದಿನದ ದುಡಿಮೆ ಹಾಗೂ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ದಂಡ ನಿಗದಿ ಮಾಡಬೇಕು. ಬೇಕಾಬಿಟ್ಟಿಯಾಗಿ ದಂಡ ನಿಗದಿ ಮಾಡಿದರೆ, ಭ್ರಷ್ಟಾಚಾರಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ. ದೊಡ್ಡ ಮೊತ್ತ ಪಾವತಿಸಲಾಗದ ಜನ, ಕೈಲಾದಷ್ಟು ಕೊಟ್ಟು ಹೊರಟು ಹೋಗುತ್ತಾರೆ. ಟೋಯಿಂಗ್ ವಾಹನ ನಿಲುಗಡೆ ಸ್ಥಳಕ್ಕೆ ಹೋದರೆ, ಸಿಬ್ಬಂದಿ ಕೈಬಿಸಿ ಮಾಡುವ ಘಟನೆಗಳೇ ಇಂದು ಹೆಚ್ಚಾಗಿ ಕಾಣುತ್ತಿವೆ‘ ಎಂದು ಸವಾರರೊಬ್ಬರು ಹೇಳಿದರು.

‘ದೂರುವುದನ್ನು ಬಿಟ್ಟು, ನಿಯಮ ಪಾಲಿಸಿ’
ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವೆಡೆ, ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಆಗುತ್ತಿದೆ. ಇಂಥ ವಾಹನಗಳನ್ನು ಕಾನೂನು ಪ್ರಕಾರ ಟೋಯಿಂಗ್ ಮಾಡುತ್ತಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ದ್ವಿಚಕ್ರ ವಾಹನಕ್ಕೆ ಮೀಸಲಿಟ್ಟ ಜಾಗದಲ್ಲಿ ಕಾರು ನಿಲ್ಲಿಸುವುದು ಹಾಗೂ ಕಾರಿಗೆ ಮೀಸಲಿಟ್ಟ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವ ಮೂಲಕ ಕೆಲ ಜನರೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಸಮ–ಬೆಸ ದಿನಾಂಕಗಳ ಪಾರ್ಕಿಂಗ್ ವ್ಯವಸ್ಥೆಯನ್ನೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನರೇ ಎಚ್ಚೆತ್ತುಕೊಂಡು ಸಂಚಾರ ನಿಯಮ ಪಾಲಿಸಿದರೆ, ವಾಹನ ಟೋಯಿಂಗ್ ಮಾಡುವ ಅಗತ್ಯವೇ ಇರುವುದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಕೆಲವರು, ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರು. ಇದರ ತಡೆಗಾಗಿ ಟೋಯಿಂಗ್ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ತಪ್ಪು ಮಾಡಿದ್ದನ್ನು ಗುರುತಿಸಿ ವಾಹನ ಟೋಯಿಂಗ್‌ ಮಾಡಿದಾಗಲೂ ಕೆಲ ಜನರು ಪೊಲೀಸರನ್ನು ದೂರುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಹೆಸರು ಹೇಳಿಕೊಂಡು ಕೆಲವರು, ಪೊಲೀಸರಿಗೆ ಬೆದರಿಕೆ ಹಾಕುವ ಪ್ರಕರಣಗಳೂ ನಡೆದಿವೆ. ತಮ್ಮ ತಪ್ಪು ಮುಚ್ಚಿಟ್ಟುಕೊಂಡು ಪೊಲೀಸರನ್ನು ದೂರುವ ಬದಲು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು