ಖಾಸಗಿ ಪಾರ್ಕಿಂಗ್‌ ಸ್ಥಳಗಳಿಗೆ ಶುಕ್ರದೆಸೆ

ಶನಿವಾರ, ಜೂಲೈ 20, 2019
26 °C

ಖಾಸಗಿ ಪಾರ್ಕಿಂಗ್‌ ಸ್ಥಳಗಳಿಗೆ ಶುಕ್ರದೆಸೆ

Published:
Updated:

‘ನಮ್ಮ ಮೆಟ್ರೊ’ ಎರಡನೇ ಹಂತದ ಸುರಂಗ ಮಾರ್ಗದ ಕಾಮಗಾರಿ ಆರಂಭಿಸಲು ಮುನ್ಸೂಚನೆ ನೀಡದೆ ಕೆ.ಕಾಮರಾಜ ರಸ್ತೆಯಲ್ಲಿ ಏಕಾಏಕಿ ವಾಹನ ಸಂಚಾರ ನಿರ್ಬಂಧಿಸಿರುವುದು ಪಾರ್ಕಿಂಗ್‌ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. 

ಕಾವೇರಿ ಎಂಪೋರಿಯಂ ವೃತ್ತದಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ವಾಹನ ನಿಲುಗಡೆ ನಿರ್ಬಂಧಿಸಿದ್ದರಿಂದ ಎಂ.ಜಿ. ರಸ್ತೆಯಲ್ಲಿರುವ ಕಚೇರಿ, ವಾಣಿಜ್ಯ ಮಳಿಗೆ, ಬ್ಯಾಂಕ್‌ ಮತ್ತು ಖಾಸಗಿ ಕಂಪನಿಗಳ ಸಿಬ್ಬಂದಿ ವಾಹನ ಪಾರ್ಕಿಂಗ್‌ಗಾಗಿ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್‌ಗಳಿಗೆ ಹೊಂದಿಕೊಂಡಿರುವ ಖಾಸಗಿ ವಾಹನ ನಿಲುಗಡೆ ಸ್ಥಳಗಳಿಗೆ ಹಠಾತ್ತನೇ ಭಾರಿ ಬೇಡಿಕೆ ಕುದುರಿದೆ.

ಕಾವೇರಿ ಎಂಪೋರಿಯಂ ವೃತ್ತದ ಬಳಿ ಇರುವ ಸಿದ್ಧ ಉಡುಪು ಮಳಿಗೆ ಹಿಂದಿರುವ ಜಾಗ ಮತ್ತು ಚರ್ಚ್‌ಸ್ಟ್ರೀಟ್‌ನಲ್ಲಿ ‘ಮೆಟ್ರೊ‘ ದ್ವಾರದ ಪಕ್ಕ ಇರುವ ಖಾಲಿ ಜಾಗದಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡಬಹುದು. ಅನೇಕ ವರ್ಷಗಳಿಂದ ಚರ್ಚ್‌ಸ್ಟ್ರೀಟ್‌ನಲ್ಲಿರುವ ಖಾಲಿ ಜಾಗ ಕೆಲವು ದಿನಗಳ ಹಿಂದೆ ಬಿಲ್ಡರ್‌ರೊಬ್ಬರಿಗೆ ಮಾರಾಟವಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಲಿವೆ. ಹೀಗಾಗಿ ಅಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. 

ಖಾಲಿ ಜಾಗಗಳಿಗೆ ಕುದುರಿದ ಬೇಡಿಕೆ

ಬಹುಮಹಡಿ ಕಟ್ಟಡಗಳ ಕೆಳ ಮಹಡಿಯಲ್ಲಿ ಖಾಲಿ ಇದ್ದ ಪಾರ್ಕಿಂಗ್‌ ಸ್ಥಳಗಳಿಗೆ ಶುಕ್ರದೆಸೆ ಶುರುವಾಗಿದೆ. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳ ವಾಹನಗಳಿಗೆ ಪಾರ್ಕಿಂಗ್‌ ಒದಗಿಸಲು ಇಂತಹ ಜಾಗಗಳ ಹುಡುಕಾಟ ಆರಂಭಿಸಿವೆ. ಈ ಮೊದಲು ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಒಂದರಿಂದ ಎರಡು ಸಾವಿರ ಮತ್ತು ಕಾರುಗಳ ಪಾರ್ಕಿಂಗ್‌ಗೆ ಎರಡರಿಂದ ಮೂರು ಸಾವಿರ ಶುಲ್ಕ ಪಡೆಯಲಾಗುತ್ತಿತ್ತು. ಈಗ ಏಕಾಏಕಿ ಶುಲ್ಕ ದುಪ್ಪಟ್ಟಾಗಿದೆ. ಕೆಳ ಮಹಡಿಯಲ್ಲಿ ತಿಂಗಳ ಬಾಡಿಗೆ ಆಧಾರದ ಮೇಲೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲು ಕಟ್ಟಡಗಳ ಮಾಲೀಕರು ಮುಂದೆ ಬಂದಿದ್ದಾರೆ. ಈಗಾಗಲೇ ಜಾಗ ಬಾಡಿಗೆ ಪಡೆಯಲು ಪೈಪೋಟಿ ಆರಂಭವಾಗಿದೆ. 

ನಿರುದ್ಯೋಗ ಸಮಸ್ಯೆ

ವಾಹನ ನಿಲುಗಡೆ ನಿರ್ಬಂಧ ವಾಹನ ಸವಾರರಿಗಿಂತ ಪಾರ್ಕಿಂಗ್‌ ಸಿಬ್ಬಂದಿಗೆ ಹೆಚ್ಚು ಆತಂಕ ತಂದೊಡ್ಡಿದೆ. ಪಾರ್ಕಿಂಗ್‌ ಸಿಬ್ಬಂದಿಗೆ ನಿರುದ್ಯೋಗ ಭೀತಿ ಕಾಡುತ್ತಿದೆ. ವಾಹನಗಳ ಪಾರ್ಕಿಂಗ್‌ ಜಾಗಗಳನ್ನು ನಂಬಿಕೊಂಡು ಹಲವಾರು ವರ್ಷಗಳಿಂದ ಬದುಕು ರೂಪಿಸಿಕೊಂಡಿದ್ದ ಅನೇಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಈ ಪಾರ್ಕಿಂಗ್‌ ಸ್ಥಳಗಳು ಅನೇಕರಿಗೆ ಉದ್ಯೋಗ ಒದಗಿಸಿದ್ದವು. ಅವರ ಅನ್ನದ ಮಾರ್ಗಗಳಾಗಿದ್ದವು. ಅವರೆಲ್ಲ ಈಗ ಜೀವನ ನಿರ್ವಹಣೆ ಹೇಗೆ ಎಂದು ದಿಕ್ಕು ತೋಚದೆ ಕುಳಿತಿದ್ದಾರೆ.

ಕಳೆದ 30 ವರ್ಷಗಳಿಂದ ವಾಹನಗಳ ಪಾರ್ಕಿಂಗ್‌ ನಿರ್ವಹಣೆಯಲ್ಲಿಯೇ ಜೀವನ ರೂಪಿಸಿಕೊಂಡಿದ್ದ ಈರಪ್ಪ ಎಂಬುವರಿಗೆ ಅದೇ ಆದಾಯ ಮೂಲವಾಗಿತ್ತು. ಈ ವರಮಾನದಿಂದಲೇ ಕುಟುಂಬ ನಿರ್ವಹಣೆಯ ಜತೆಗೆ ಎರಡು ಮಕ್ಕಳನ್ನು ಓದಿಸಿದ್ದರು. ಹಲವು ವರ್ಷಗಳ ನಂತರ ಅವರು ನಿರುದ್ಯೋಗಿಯಾಗಿದ್ದಾರೆ. ಇದು ಈರಪ್ಪ ಅವರೊಬ್ಬರ ಸಮಸ್ಯೆ ಅಲ್ಲ. ಅವರ ಜತೆಗಿದ್ದ ಮಹಾದೇವ ಹತ್ತಾರು ಜನರ ಅನ್ನದ ಮಾರ್ಗಕ್ಕೆ ಕಲ್ಲು ಬಿದ್ದಿದೆ. ಈಚೆಗೆ ಭಾರಿ ಬೇಡಿಕೆ ಪಡೆದಿದ್ದ ಜುವೆಲರಿ ಅಂಗಡಿ, ಬಾರ್‌, ರೆಸ್ಟೋರೆಂಟ್‌ಗಳ ವಾಲೆಟ್‌ ಪಾರ್ಕಿಂಗ್‌ ಆದಾಯಕ್ಕೂ ಕತ್ತರಿ ಬಿದ್ದಿದೆ. 

ವ್ಯಾಪಾರಕ್ಕೆ ಪೆಟ್ಟು

ಮಾಲ್‌ ಸಂಸ್ಕೃತಿಯಿಂದ ಗ್ರಾಹಕರಿಲ್ಲದೆ ಮೊದಲೇ ಪರದಾಡುತ್ತಿದ್ದ ವರ್ತಕರಿಗೆ ಸಂಚಾರ ನಿರ್ಬಂಧದಿಂದ ಇದು ಮತ್ತೊಂದು ಹೊಡೆತ. ನಿರ್ಬಂಧ ತೆರುವುಗೊಳಿಸುವಂತೆ ಕೋರಿ ಅವರೆಲ್ಲ ಟ್ರಾಫಿಕ್‌ ಕಮಿಷನರ್‌ ಮೊರೆ ಹೋಗಿದ್ದಾರೆ. ಸುರಂಗ ಕಾಮಗಾರಿ ಎರಡರಿಂದ ಮೂರು ವರ್ಷ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಅಷ್ಟೂ ವರ್ಷ ವಾಹನ ಸಂಚಾರ ಮತ್ತು ಪಾರ್ಕಿಂಗ್‌ ನಿರ್ಬಂಧಿಸಿದರೆ ವ್ಯಾಪಾರ ತಗ್ಗಿ ಶಾಶ್ವತವಾಗಿ ಅಂಗಡಿ ಬಾಗಿಲು ಎಳೆಯಬೇಕಾಗುತ್ತದೆ ಎನ್ನುತ್ತಾರೆ ವರ್ತಕರು.    

ದಶಕಗಳಷ್ಟು ಹಳೆಯದಾದ ಲೇಕ್‌ವೀವ್‌ ಐಸ್‌ಕ್ರೀಂ ಪಾರ್ಲರ್‌ ಎದುರು ನಿಲ್ಲುತ್ತಿದ್ದ ವಾಹನಗಳಲ್ಲಿ ಇದ್ದ ಗ್ರಾಹಕರಿಗೆ ಅಲ್ಲಿಯೇ ಐಸ್‌ಕ್ರೀಂ ಸರ್ವ್‌ ಮಾಡಲಾಗುತ್ತಿತ್ತು. ಮೂರು ದಿನಗಳಿಂದ ಒಂದೇ ಒಂದು ವಾಹನ ಅಲ್ಲಿ ನಿಲ್ಲುತ್ತಿಲ್ಲ. ಟ್ರಾಫಿಕ್‌ ಪೊಲೀಸರ ಟೈಗರ್‌ ಗಸ್ತು ಮತ್ತು ಪೊಲೀಸರ ಕಿರಿಕಿರಿಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. 

ಕೆಳ ಮಹಡಿಯಲ್ಲಿ ಗ್ರಾಹಕರ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲು ಮಾಲೀಕರು ಮುಂದಾಗಿದ್ದಾರೆ. ಇದಕ್ಕೆ ಗ್ರಾಹಕರು ಹೇಗೆ ಸ್ಪಂದಿಸುತ್ತಾರೆ ಎಂಬ ಆತಂಕ ಅವರನ್ನು ಕಾಡುತ್ತಿದೆ. ವಾರಾಂತ್ಯದಲ್ಲಿ ಕನಿಷ್ಠ ₹10 ಸಾವಿರ ವ್ಯಾಪಾರ ಮಾಡುತ್ತಿದ್ದ ಪಾನ್‌ ಬೀಡಾ ವ್ಯಾಪಾರಿ ರಾಜು ಕಿಲ್ಲೇದಾರ, ಮೂರು ದಿನಗಳಿಂದ ಒಂದೇ ಒಂದು ಪೈಸೆ ವ್ಯಾಪಾರವಾಗಿಲ್ಲ ಎನ್ನುತ್ತಾರೆ. 

ವಾಹನ ಸವಾರರಿಗೆ ‘ಟೈಗರ್‌’ ಭೀತಿ!

ಚರ್ಚ್‌ಸ್ಟ್ರೀಟ್‌ನಲ್ಲಿ ಕೂಡ ವಾಹನ ನಿಲುಗಡೆ ಮಾಡುವಂತಿಲ್ಲ. ಸದಾ ಟ್ರಾಫಿಕ್‌ ಪೊಲೀಸರ ಟೈಗರ್‌ ವಾಹನ ಗಸ್ತು ತಿರುಗುತ್ತದೆ. ಮೂರು ದಿನಗಳಿಂದ ಈ ರಸ್ತೆಗೆ ಹೊಂದಿಕೊಂಡಿರುವ ಸಂದಿಗೊಂದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಯಾವ ಹೊತ್ತಿನಲ್ಲಿ ಟ್ರಾಫಿಕ್‌ ಪೊಲೀಸರು ವಾಹನಗಳನ್ನು ಎತ್ತಿಕೊಂಡು ಹೋಗುತ್ತಾರೆಯೋ ಎಂಬ ಭೀತಿ ಸದಾ ವಾಹನ ಸವಾರರನ್ನು ಕಾಡುತ್ತಿದೆ.

ಕೋರಿಯರ್‌, ಸ್ವಿಗ್ಗಿ, ಜೊಮ್ಯಾಟೊ ಹಾಗೂ ಇತರ ಕಂಪನಿಗಳ ಡೆಲಿವರಿ ಹುಡುಗರಿಗಂತೂ ಸಂಚಾರ ನಿರ್ಬಂಧ ಭಾರಿ ತಾಪತ್ರಯ ತಂದೊಡ್ಡಿದೆ. ಯಾವುದೇ ಕಚೇರಿ ಎದುರು ವಾಹನ ನಿಲ್ಲಿಸಿ, ಹತ್ತು ನಿಮಿಷ ಒಳ ಹೋಗಿ ಬರುವಷ್ಟರಲ್ಲಿ ಅವರ ಬೈಕ್‌ಗಳನ್ನು ಪೊಲೀಸರ ವಾಹನ ಎತ್ತಿಕೊಂಡು ಹೋಗಿರುತ್ತದೆ. 

ಈ ಮೊದಲು ಶೃಂಗಾರ ಕಾಂಪ್ಲೆಕ್ಸ್‌ನಲ್ಲಿ ಶುಲ್ಕ ಪಾವತಿಸಿ ವಾಹನ ನಿಲ್ಲಿಸಲಾಗುತ್ತಿತ್ತು. ಈಗ ಕಾಂಪ್ಲೆಕ್ಸ್‌ ಕೂಡ ಬಂದ್‌ ಆಗಿದೆ. ಕೆ. ಕಾಮರಾಜ ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿ ಕಾರು ನಿಲ್ಲಿಸುತ್ತಿದ್ದವರು ಕೆಎಸ್‌ಸಿಎ ಸ್ಟೇಡಿಯಂನ ಹಿಂದಿನ ದ್ವಾರ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸುತ್ತಿದ್ದಾರೆ.

ಎಂ.ಜಿ. ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ಗೆ ಸಂಪರ್ಕ ಕಲ್ಪಿಸುವ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕಾ ಕಚೇರಿ ಬಳಿಯ ರಸ್ತೆ ದ್ವಿಚಕ್ರ ವಾಹನಗಳಿಂದ ತುಂಬಿ ತುಳುಕುತ್ತಿದೆ. ಎಂ.ಜಿ. ರಸ್ತೆಯಲ್ಲಿ ನಿಲ್ಲುತ್ತಿದ್ದ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದುಕೊಂಡಿವೆ.

ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಏಕೆ ಮಾಡಿಲ್ಲ ಎಂದು ಟ್ರಾಫಿಕ್‌ ಪೊಲೀಸರನ್ನು ಪ್ರಶ್ನಿಸಿದರೆ, ‘ಜಾಗ ಎಲ್ಲಿದೆ ಎಂದು ನೀವೇ ತೋರಿಸಿ’ ಎಂದು ಮರು ಸವಾಲು ಹಾಕುತ್ತಾರೆ. 

ಬೈಕ್‌ ನಿಲ್ಲಿಸಲು ಜಾಗವಿಲ್ಲದೆ ಖಾಸಗಿ ಕಂಪನಿ ಉದ್ಯೋಗಿ ಸಂಜಯ್ ಗೌಡ, ‘ಮೆಟ್ರೊ ನಿಲ್ದಾಣದ ಬಳಿ ಬೈಕ್‌ ನಿಲ್ಲಿಸಿ ಎಂ.ಜಿ. ರಸ್ತೆಯಲ್ಲಿರುವ ಕಚೇರಿಗೆ ಬರಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ.

ಸಂಚಾರ ಗೊಂದಲ ಜನರಿಗೆ ಪಜೀತಿ

‘...ಈ ನಂಬರ್‌ ಆಟೊದವರು ಮುಂದಕ್ಕೆ ಹೋಗಿ’, ‘ಸಿಗ್ನಲ್‌ನಲ್ಲಿ ವೆಹಿಕಲ್‌ ನಿಲ್ಲಿಸಬೇಡಿ’, ’ಮುಂದಕ್ಕೆ ಹೋಗಿ ಮಣಿಪಾಲ್‌ ಸೆಂಟರ್‌ನಲ್ಲಿ ಬಲಕ್ಕೆ ತಿರುಗಿ’... ಹೀಗೆ ಕಮರ್ಷಿಯಲ್‌ ಸ್ಟ್ರೀಟ್‌ನಿಂದ ಕಾಮರಾಜ ರಸ್ತೆ ಮಧ್ಯದ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಪೊಲೀಸರು ಮೈಕ್‌ನಲ್ಲಿ ಕೂಗಿ ಹೇಳುತ್ತಲೇ ಇದ್ದರು. ಆದರೂ ಮಹಾತ್ಮ ಗಾಂಧಿ ರಸ್ತೆಗೆ ಹೋಗಬೇಕಾದ ವಾಹನ ಚಾಲಕರು ಗೊಂದಲದಿಂದ ಜಂಕ್ಷನ್‌ನಲ್ಲಿ ಟರ್ನ್‌ ತೆಗೆದುಕೊಳ್ಳುವುದೋ, ಮುಂದಕ್ಕೆ ಹೋಗುವುದೋ ಎಂದು ಗೊಂದಲಕ್ಕೆ ಒಳಗಾಗುತ್ತಿರುವ ದೃಶ್ಯಗಳು ಮಾಮೂಲು.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಗೊಟ್ಟಿಗೆರೆ (ಡೇರಿ ವೃತ್ತ)–ನಾಗವಾರ ಮಾರ್ಗದ ಕಾಮಗಾರಿಗಾಗಿ ಕಾವೇರಿ ಎಂಪೋರಿಯಂ ಜಂಕ್ಷನ್‌ನ ಕಾಮರಾಜ ರಸ್ತೆಯ ಎರಡೂ ಕಡೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗದ ಗೊಂದಲದಿಂದ ಬಹುತೇಕ ಅಟೊಗಳು ಶಿವಾಜಿನಗರ, ಕಮರ್ಷಿಯಲ್‌ ರಸ್ತೆ ಸುತ್ತಿಕೊಂಡು ಬರುತ್ತಿದ್ದವು. ಕೆಲ ಜನರಿಗೆ ಕಾಮರಾಜ ರಸ್ತೆಯಲ್ಲಿ ಸಂಚಾರ ನಿರ್ಬಂಧದ ಬಗ್ಗೆ ಅರಿವು ಇಲ್ಲದ್ದರಿಂದ ಗೊಂದಲಕ್ಕೆ ಒಳಗಾಗುತ್ತಿದ್ದರು. ‘ರಾಜಾಜಿನಗರದಿಂದ  ಮಡಿ ವಾಳಕ್ಕೆ ಹೋಗಬೇಕು. ಕುಂಬ್ಳೆ ವೃತ್ತದಿಂದ ಆಟೊದಲ್ಲಿ ಸುತ್ತಾಡಿಕೊಂಡು ಬಂದೆವು’ ಎಂದು ರಾಜಾಜಿನಗರದ ಪಿಯುಲ್‌ ಬೇಸರ ವ್ಯಕ್ತಪಡಿಸಿದರು.

ಕಾಮರಾಜ ರಸ್ತೆಯಲ್ಲಿ ಆಟೊ ಬಾಡಿಗೆ ಮಾಡುತ್ತಿದ್ದ ಬಾಬು ‘ಕಾಮರಾಜ ರಸ್ತೆಯಲ್ಲಿ ನಾವು ರಿಕ್ಷಾ ಬಾಡಿಗೆ ಓಡಿಸುತ್ತಿದ್ದೆವು. ಈಗ ನಾವು ಬೇರೆ ಕಡೆ ಬಾಡಿಗೆ ಹುಡುಕಬೇಕು’ ಎನ್ನುತ್ತಾರೆ.

‘ಈ ರಸ್ತೆ ಬಂದ್‌ ಆಗಿರುವುದು ಗೊತ್ತಿರಲಿಲ್ಲ. ಸುತ್ತಿಕೊಂಡು ಹೋಗಬೇಕು ಎಂದಾಗ ಅಟೊದಲ್ಲಿದ್ದ ಮಹಿಳೆ ಬೈಯುತ್ತಾ ಇಳಿದು ಹೋದರು’ ಎಂದು ಅಟೊ ಚಾಲಕ ಆಲಿ ಹೇಳಿದರು. 

‘ಶಿವಾಜಿನಗರದಿಂದ ಎಂ.ಜಿ ರಸ್ತೆಗೆ ಬರಬೇಕಾದರೆ ಸುತ್ತಿಕೊಂಡು ಬರಬೇಕು. ಬಾಡಿಗೆ ಜಾಸ್ತಿ, ಸಮಯವೂ ಹೆಚ್ಚು ಬೇಕು ಎಂದು ಕೆಲ ಪ್ರಯಾಣಿಕರು ದೂರಿಕೊಂಡರು’ ಎಂದು ಅಟೊ ಚಾಲಕ ಕೃಷ್ಣ ಗೊಣಗಿದರು. ಕಷ್ಟವಾದರೂ ಸರಿ, ಅಭಿವೃದ್ಧಿಗೆ ಕೈ ಜೋಡಿಸಬೇಕು. ಈಗ ಸ್ವಲ್ಪ ತೊಂದರೆಯಾಗಿದೆ. ಒಂದೆರಡು ದಿನದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕನಕಪುರದ ಶ್ರೀಧರ್‌ ಪ್ರಭು ಅವರ ವಿಶ್ವಾಸ. 

‘ಕಾಮರಾಜ ರಸ್ತೆ ಹಾಗೂ ಎಂ.ಜಿ ರಸ್ತೆಯಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಿದ್ದರಿಂದ, ದಿನನಿತ್ಯ ಇಲ್ಲೇ ವಾಹನ ಇಟ್ಟು ಕರ್ತವ್ಯಕ್ಕೆ ಹೋಗುತ್ತಿದ್ದವರು ಗೊಂದಲಕ್ಕೊಳಗಾಗುತ್ತಾರೆ. ಈಗ ಶಿವಾಜಿನಗರದಿಂದ ಮೆಯೋ ಹಾಲ್‌ ಮೂಲಕ ಹೋಗುತ್ತಿದ್ದ ಬಸ್‌ಗಳು ಎಂ.ಜಿ ರಸ್ತೆ ಮೂಲಕ ಹೋಗುತ್ತಿವೆ. ಕೆಲ ಆಟೋಗಳು ಬರುತ್ತಿವೆ. ಹೀಗಾಗಿ ಟ್ರಾಫಿಕ್‌ ದಟ್ಟಣೆ ಆಗಿದೆ’ ಎನ್ನುತ್ತಾರೆ ಟ್ರಾಫಿಕ್‌ ಪೊಲೀಸರು.

‘ಸಂಚಾರ ನಿರ್ಬಂಧಿಸಿ ಐದು ದಿನವಷ್ಟೇ ಆಗಿದ್ದರಿಂದ ಗೊಂದಲ ಸಹಜ. ಈ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸೈನ್‌ ಬೋರ್ಡ್‌ಗಳನ್ನು ಹಾಕಿದ್ದೇವೆ. ದೊಡ್ಡ ಫಲಕಗಳನ್ನೂ ಹಾಕುತ್ತೇವೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !