ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುರಸ್ತೆಯಲ್ಲೇ ವಾಹನ ಅಡ್ಡ ಹಾಕಿ ಎಗ್ಗಿಲ್ಲದೇ ದಂಡ ವಸೂಲಿ ಮಾಡುವ ಪೊಲೀಸರು

Last Updated 5 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಸುಗಮ ಸಂಚಾರ ಕಡೆಗೆ ಗಮನ ಹರಿಸಬೇಕಾದ ನಗರದ ಸಂಚಾರ ಪೊಲೀಸರು, ಇತ್ತೀಚಿನ ದಿನಗಳಲ್ಲಿ ದಂಡ ವಸೂಲಿಗಷ್ಟೇ ಸೀಮಿತವಾಗುತ್ತಿದ್ದಾರೆ. ಆ ಕೆಲಸದಲ್ಲೂ ನಿಯಮ ಪಾಲನೆ ಮಾಡದೇ ಮನಸ್ಸಿಗೆ ಬಂದ ರೀತಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ ಎಂಬುದು ಜನರ ಆರೋಪ.

ರಾಜಧಾನಿಯ ವಾಹನ ದಟ್ಟಣೆ ನಿಯಂತ್ರಿಸಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕಾದ ಪೊಲೀಸರು, ಪ್ರತಿ ಠಾಣೆಯಿಂದ ಎಷ್ಟು ದಂಡ ವಸೂಲಿ ಆಯಿತು ? ಯಾವೆಲ್ಲ ದಂಡ ವಿಧಿಸಲಾಯಿತು ? ಎಂಬ ಲೆಕ್ಕಾಚಾರದಲ್ಲಿ ಕಾಲ ಕಳೆಯುತ್ತಿರುವುದೇ ಸಮಸ್ಯೆ ಉಲ್ಬಣಕ್ಕೆ ಕಾರಣ.

ಬಹುತೇಕ ವೃತ್ತಗಳಲ್ಲಿ ಒಬ್ಬರೇ ಕಾನ್‌ಸ್ಟೆಬಲ್ ದಟ್ಟಣೆ ನಿಯಂತ್ರಣ ಮಾಡುತ್ತಿದ್ದಾರೆ. ಅದೇ ವೃತ್ತದ ಬಳಿಯಲ್ಲೇ ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್, ಎರಡಕ್ಕಿಂತ ಹೆಚ್ಚು ಕಾನ್‌ಸ್ಟೆಬಲ್‌ಗಳು ದಂಡ ಸಂಗ್ರಹ ಕೆಲಸದಲ್ಲಿ ನಿರತರಾಗಿರುತ್ತಾರೆ. ದಟ್ಟಣೆಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಅವರು ರಸ್ತೆ ಮಧ್ಯೆಯೇ ವಾಹನಗಳನ್ನು ಅಡ್ಡಗಟ್ಟುವುದರಿಂದಲೂ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಇಂಥ ದೃಶ್ಯಗಳು ನಗರದಲ್ಲಿ ನಿತ್ಯವೂ ನಮಗೆ ಕಾಣಸಿಗುತ್ತವೆ.

‘ದಂಡ ಸಂಗ್ರಹ ಮಾಡುವ ವೇಳೆ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು’ ಎಂಬ ಬಗ್ಗೆ ಮೋಟಾರು ವಾಹನಗಳ ಕಾಯ್ದೆಯಡಿ ಉಲ್ಲೇಖಿಸಲಾಗಿದೆ. ಆ ನಿಯಮಗಳು ತಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವ ಬಹುತೇಕ ಸಂಚಾರ ಪೊಲೀಸರು, ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಿಕ್ಕ ಸಿಕ್ಕ ವಾಹನಗಳನ್ನು ಅಡ್ಡಗಟ್ಟುತ್ತಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ.

ದಾಖಲೆಗಳು ಸಮರ್ಪಕವಾಗಿದ್ದರೂ ವಾಹನದ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ದಂಡ ಸಂಗ್ರಹ ಮಾಡುತ್ತಿದ್ದಾರೆ. ‘ಒಮ್ಮೆ ಪೊಲೀಸರು ವಾಹನ ತಡೆದರೆ, ಎಷ್ಟೇ ದಾಖಲೆ ತೋರಿಸಿದರೂ ದಂಡ ವಿಧಿಸದೇ ಬಿಡುವುದಿಲ್ಲ’ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಪೊಲೀಸರ ವರ್ತನೆ ಬಗ್ಗೆ ಹಲವು ಸಾರ್ವಜನಿಕರು, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಜನರ ದೂರು.

ಕಮಿಷನರ್ ಅವರಿಗೆ ಮನವಿ ಮಾಡಿರುವ ಬಸವನಗುಡಿಯ ನಿವಾಸಿಯೊಬ್ಬರು, ‘ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಖಾಸುಮ್ಮನೇ ದಂಡ ಹಾಕುವ ಹಿಂಸಾತ್ಮಕ ಕೆಲಸಗಳಿಂದ ಮುಕ್ತಿ ಕೊಡಿ’ ಎಂದರು.

ಸಿಂಗಸಂದ್ರ ಬಡಾವಣೆ ನಿವಾಸಿಯೂ ಆಗಿರುವ ಕಾರು ಚಾಲಕ ರಘು, ‘ಎಲ್ಲ ದಾಖಲೆಗಳು ಇದ್ದರೂ ಪೊಲೀಸರು ಸುಖಾಸುಮ್ಮನೆ ಹಿಡಿಯುತ್ತಾರೆ. ದಾಖಲೆ ತೋರಿಸಿದಾಗ ಬೇರೆ ಬೇರೆ ಪ್ರಶ್ನೆ ಕೇಳುತ್ತಾರೆ. ನಿಯಮ ಉಲ್ಲಂಘನೆ ಪ್ರಕರಣಗಳು ಇಲ್ಲದಿದ್ದರೂ ₹ 200ರಿಂದ ₹ 300 ಲಂಚ ಕೇಳುತ್ತಾರೆ. ಕೋವಿಡ್ ಸಂದರ್ಭದಲ್ಲಿ ನಮ್ಮಂಥ ಚಾಲಕರು ಜೀವನ ನಡೆಸುವುದೇ ಕಷ್ಟವಾಗಿದೆ. ಲಂಚ ಎಲ್ಲಿಂದ ಕೊಡುವುದು’ ಎಂದು ಪ್ರಶ್ನಿಸಿದರು.

ಜಯನಗರದ ಖಾಸಗಿ ಕಂಪನಿ ಉದ್ಯೋಗಿ ಸುಧೀಂದ್ರ, ‘ಜನರ ಓಡಾಟ ಹೆಚ್ಚಿರುವ ಹಾಗೂ ವಾಹನಗಳ ದಟ್ಟಣೆ ಇರುವ ಕಡೆಗಳಲ್ಲಿ ಸುಗಮ ಸಂಚಾರಕ್ಕಾಗಿ ಪೊಲೀಸರು ಹೆಚ್ಚು ಕೆಲಸ ಮಾಡುವುದಿಲ್ಲ. ಬದಲಿಗೆ, ವಾಹನಗಳನ್ನು ತಡೆದು ದಂಡ ವಸೂಲಿಯಲ್ಲಿ ನಿರತರಾಗಿರುತ್ತಾರೆ’ ಎಂದೂ ಆರೋಪಿಸಿದರು.

ತುರ್ತು ಕೆಲಸಗಳಿಗೂ ಅಡ್ಡಿ: ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಇತರೆ ತುರ್ತು ಕೆಲಸಗಳಿಗೆ ಹೊರಟವರನ್ನು ಅಡ್ಡಗಟ್ಟುವ ಪೊಲೀಸರು, ದಂಡ ಸಂಗ್ರಹ ನೆಪ ದಲ್ಲಿ ಕಿರುಕುಳ ನೀಡುತ್ತಿರುವ ದೂರುಗಳು ಇವೆ.

‘ಪತ್ನಿಯನ್ನು ಕರೆದುಕೊಂಡು ಬೈಕ್‌ನಲ್ಲಿ ಆಸ್ಪತ್ರೆಗೆ ಹೊರಟಿದ್ದೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದೆವು. ಹಳೇ ಮದ್ರಾಸ್ ರಸ್ತೆಯಲ್ಲಿ ನನ್ನನ್ನು ತಡೆದಿದ್ದ ಪೊಲೀಸರು, ವಾಹನಗಳ ದಾಖಲೆ ಕೇಳಿದರು. ತೋರಿಸಿದ್ದೆ. ಬೇಗ ಬಿಡಿ ಆಸ್ಪತ್ರೆಗೆ ಹೋಗಬೇಕೆಂದು ವಿನಂತಿಸಿದ್ದೆ. ಅದಕ್ಕೆ ಒಪ್ಪದ ಕಾನ್‌ಸ್ಟೆಬಲ್, ಎಎಸ್‌ಐ ಜೊತೆ ಮಾತನಾಡಿ ಎಂದಿದ್ದರು’ ಎಂಬುದಾಗಿ ದೊಮ್ಮಲೂರು ನಿವಾಸಿ ಮಂಜುನಾಥ್‌ ಹೇಳಿದರು.

‘ಎಎಸ್‌ಐ ಬಳಿ ಹೋದಾಗ, ‘ಎಷ್ಟು ಇದೆಯೋ ಅಷ್ಟು ಕೊಟ್ಟು ಹೋಗಿ’ ಎಂದಿದ್ದರು. ಎಲ್ಲ ದಾಖಲೆ ಇದೆ. ಹೆಲ್ಮೆಟ್ ಧರಿಸಿದ್ದೇವೆ. ಏಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು’ ಎಂದೂ ಅವರು ತಮಗಾದ ಅನುಭವ ಬಿಚ್ಚಿಟ್ಟರು.

ಅಡಗಿ ಕುಳಿತು ದಂಡ ಸಂಗ್ರಹ: ‘ನಿತ್ಯವೂ ಇಂತಿಷ್ಟು ದಂಡ ಸಂಗ್ರಹಿಸಬೇಕು’ ಎಂಬುದಾಗಿ ಪ್ರತಿಯೊಂದು ಸಂಚಾರ ಠಾಣೆಗೂ ಗುರಿ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಠಾಣೆ ಸಿಬ್ಬಂದಿ, ನಾನಾ ಕಸರತ್ತು ನಡೆಸಿ ಕಾನೂನು ಮೀರಿ ಅಶಿಸ್ತಿನ ಮೂಲಕ ದಂಡ ಸಂಗ್ರಹ ಮಾಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎನ್ನುತ್ತಾರೆ ಪೊಲೀಸರ ‘ದಂಡಪ್ರಯೋಗ’ ಬಲ್ಲ ನಿವೃತ್ತ ಅಧಿಕಾರಿಯೊಬ್ಬರು.

ಬಸವೇಶ್ವರನಗರದ ನಿವಾಸಿ ಪ್ರೇಮ್‌, ‘ರಸ್ತೆ ಪಕ್ಕದ ಕಟ್ಟಡ ಹಾಗೂ ವಾಹನಗಳ ಹಿಂಬದಿಯಲ್ಲಿ ಅಡಗಿ ಕುಳಿತು ಪೊಲೀಸರು ವಾಹನ ಹಿಡಿಯುತ್ತಾರೆ. ಇದು ದಂಡ ವಸೂಲಿಯೋ ಅಥವಾ ಸುಲಿಗೆಯೋ ಎಂಬುದೇ ಗೊತ್ತಾಗುತ್ತಿಲ್ಲ. ಈ ರೀತಿ ದಂಡ ಸಂಗ್ರಹದಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

45

ನಗರದಲ್ಲಿರುವ ಸಂಚಾರ ಠಾಣೆಗಳು

4,602

ಸಂಚಾರ ಪೊಲೀಸರ ಸಂಖ್ಯೆ‌

2021ರ ಜನವರಿಯಿಂದ ಜೂನ್‌ವರೆಗೆ ದಂಡ ವಸೂಲಿ ಅಂಕಿ–ಅಂಶ

45.21 ಲಕ್ಷ

ದಾಖಲಾದ ಪ್ರಕರಣಗಳು
₹ 64.12 ಕೋಟಿ

ವಿಧಿಸಲಾದ ದಂಡ
6.79 ಲಕ್ಷ

ದಂಡ ವಿಧಿಸಿದ ವಾಹನಗಳ ಸಂಖ್ಯೆ

ಯಾವೆಲ್ಲ ವಾಹನಗಳ ಮೇಲೆ ಎಷ್ಟು ಪ್ರಕರಣ

ವಾಹನ; ಪ್ರಕರಣ ಸಂಖ್ಯೆ

ಬಸ್‌ಗಳು;23,581

ಸರಕು ಸಾಗಣೆ ವಾಹನ;25,285

ಆಟೊ;11,297

ಲಘುವಾಹನ;14,134

ದ್ವಿಚಕ್ರ ವಾಹನ;5,37,264

ಟೆಂಪೊ; 67663

ವರ್ಷವಾರು ದಂಡ ಸಂಗ್ರಹ

ವರ್ಷ; ಪ್ರಕರಣಗಳ ಸಂಖ್ಯೆ(ಲಕ್ಷಗಳಲ್ಲಿ); ದಂಡ ಸಂಗ್ರಹ (₹ಕೋಟಿಗಳಲ್ಲಿ)

2012;52.04;₹53.85

2013;54.33;₹56.98

2014;74.36;₹65.92

2015;76.26;₹70.44

2016;91.80;₹66.97

2017;94.63;₹112

2018;83.89; ₹81.25

2019;79.87;₹89.18

2020;84.06;₹98.08

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT