ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಣ್ಯ ಮೇಲ್ಸೇತುವೆ: ಜ.16–19ರವರೆಗೆ ಸಂಚಾರ ನಿರ್ಬಂಧ

ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾದರೆ ಭಾರಿ ವಾಹನ ಸಂಚಾರಕ್ಕೆ ಅವಕಾಶ
Published 9 ಜನವರಿ 2024, 15:28 IST
Last Updated 9 ಜನವರಿ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ–4ರ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ನಡೆಯುತ್ತಿದ್ದ ಕೇಬಲ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ಸೇತುವೆ ಸಾಮರ್ಥ್ಯ ಪರೀಕ್ಷೆಗಾಗಿ (ಲೋಡ್‌ ಟೆಸ್ಟಿಂಗ್) ಇದೇ 16ರ ರಾತ್ರಿ 11ರಿಂದ 19ರ ಬೆಳಿಗ್ಗೆ 11ರ ವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಮೇಲ್ಸೇತುವೆ ಸಾಮರ್ಥ್ಯ ಪರೀಕ್ಷೆಗಾಗಿ ವಾಹನ ಸಂಚಾರ ನಿಷೇಧಿಸುವಂತೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು, ನಗರ ಸಂಚಾರ ವಿಭಾಗದ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಮೇಲ್ಸೇತುವೆಯಲ್ಲಿ ಸಂಚರಿಸುತ್ತಿದ್ದ ಕಾರು, ಬೈಕ್‌, ಜೀಪು ಸೇರಿದಂತೆ ಸಣ್ಣ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ನೆಲಮಂಗಲದ ಕಡೆಯಿಂದ ಮೇಲ್ಸೇತುವೆ ಮೂಲಕ ನಗರಕ್ಕೆ ಬರುತ್ತಿದ್ದ ವಾಹನಗಳು ಕೆನ್ನಮೆಟಲ್‌ (ವಿಡಿಯಾ) ಬಳಿಯ ಮೇಲ್ಸೇತುವೆ ಪಕ್ಕದ ಎನ್‌ಎಚ್‌–4 ರಸ್ತೆ, ಸರ್ವೀಸ್‌ ರಸ್ತೆಯಲ್ಲಿ ಬರಬೇಕು. 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, ಪೀಣ್ಯ ಪೊಲೀಸ್‌ ಠಾಣೆ ಜಂಕ್ಷನ್‌, ಎಸ್‌ಆರ್‌ಎಸ್‌ ಜಂಕ್ಷನ್‌ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.

ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಪೀಣ್ಯ ಮೇಲ್ಸೇತುವೆಯಲ್ಲಿ ಸಾಗುವ ವಾಹನಗಳು ಮೇಲ್ಸೇತುವೆ ಕೆಳಗಿನ ಎನ್‌ಎಚ್‌ ರಸ್ತೆ ಹಾಗೂ ಸೇವಾ ರಸ್ತೆಯನ್ನೇ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

20ಕ್ಕೂ ಹೆಚ್ಚು ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ.

‘ಗೊರಗೊಂಟೆಪಾಳ್ಯ ವೃತ್ತದಿಂದ ಕೆನ್ನಮೆಟಲ್(ವಿಡಿಯಾ) ಜಂಕ್ಷನ್‌ವರೆಗೆ ಒಟ್ಟು 120 ಪಿಲ್ಲರ್‌ಗಳಿದ್ದು, ಎರಡು ಪಿಲ್ಲರ್‌ಗಳ ನಡುವೆ ತಲಾ ಎರಡು ಕೇಬಲ್‌ ಅಳವಡಿಸಿ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈಗ ಬೇರೆ ಬೇರೆ ವೇಗದಲ್ಲಿ ವಾಹನಗಳನ್ನು ಓಡಿಸಿ ಪರೀಕ್ಷೆ ನಡೆಸಲಾಗುವುದು. ಅದಾದ ಮೇಲೆ ಆರು ಟ್ರಕ್‌ಗಳಿಗೆ ಮಣ್ಣು ತುಂಬಿಸಿ ಮೇಲ್ಸೇತುವೆ ಮೇಲೆ ಓಡಿಸಿ ಪರೀಕ್ಷಿಸಲಾಗುವುದು. ಯಶಸ್ವಿಯಾದರೆ ಈ ತಿಂಗಳ ಅಂತ್ಯದಿಂದ ಮೇಲ್ಸೇತುವೆಯಲ್ಲಿ ಎಲ್ಲ ರೀತಿ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ’ ಎಂದು ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ ಚಂದ್ರ ಕಿಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಭಾರಿ ವಾಹನ ಸಂಚಾರಕ್ಕೆ ಅವಕಾಶವಾದ ಮೇಲೆ ಎರಡು ಪಿಲ್ಲರ್‌ಗಳ ಮಧ್ಯೆಯಿರುವ ತುಕ್ಕು ಹಿಡಿದಿರುವ ಉಳಿದ ಕೇಬಲ್‌ಗಳ ಬದಲಾವಣೆ ಕಾಮಗಾರಿ ನಡೆಯಲಿದೆ. ಇದಕ್ಕೆ ಒಂದು ವರ್ಷ ಬೇಕಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT