ಭಾನುವಾರ, ಏಪ್ರಿಲ್ 2, 2023
23 °C

ಸಂಚಾರ ನಿಯಮ ಉಲ್ಲಂಘನೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿಯಿಂದ ₹1.40 ಕೋಟಿ ದಂಡ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಪಾವತಿಸಬೇಕಿರುವ ₹1.40 ಕೋಟಿಗೂ ಹೆಚ್ಚು ದಂಡದ ಮೊತ್ತವನ್ನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಾಕಿ ಉಳಿಸಿಕೊಂಡಿವೆ. ಈ ಮೊತ್ತ ಪಾವತಿಸುವಂತೆ ಎರಡು ಸಂಸ್ಥೆಗಳಿಗೆ ಸಂಚಾರ ಪೊಲೀಸರು ಪತ್ರ ಬರೆದಿದ್ದಾರೆ.

ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ಅವರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಬಸ್ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದರಲ್ಲೂ ಬಿಎಂಟಿಸಿ ಚಾಲಕರು ಎಲ್ಲೆಂದಲ್ಲಿ ಬಸ್‌ಗಳನ್ನು ನಿಲ್ಲಿಸುವುದು ದಟ್ಟಣೆಗೆ ಕಾರಣವಾಗುತ್ತಿದೆ. ದಂಡ ವಿಧಿಸುತ್ತಿದ್ದರೂ ಈ ಪ್ರವೃತ್ತಿ ಕಡಿಮೆಯಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬಿಎಂಟಿಸಿ ಒಂದರಿಂದಲೇ ₹1.30 ಕೋಟಿಗೂ ಹೆಚ್ಚು ದಂಡ ಬರಬೇಕಿದೆ. ಚಾಲಕರಿಗೆ ಎಚ್ಚರಿಕೆ ನೀಡಿ ದಟ್ಟಣೆ ಕಡಿಮೆ ಮಾಡಲು ಸಹಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಸಂಚಾರ ಪೊಲೀಸರಿಂದ ಪತ್ರ ಬಂದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಚಾಲಕರ ಸಂಬಳದಿಂದ ಕಡಿತ ಮಾಡಿ ದಂಡ ಪಾವತಿಸುವುದು ಮೊದಲಿನಿಂದ ನಡೆದಿದೆ. ಸಂಚಾರ ಪೊಲೀಸರಿಗೆ ಬಾಕಿ ಮೊತ್ತ ಪಾವತಿಸಲಾಗುವುದು’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅಡ್ಡಾದಿಡ್ಡಿ ಬಸ್‌ ಚಾಲನೆ ಸಂಬಂಧ ಮೂರು ವರ್ಷದ ಅವಧಿಯಲ್ಲಿ ಬಿಎಂಟಿಸಿಗೆ 26 ಸಾವಿರ ನೋಟಿಸ್‌ ನೀಡಲಾಗಿತ್ತು. ಅದರ ದಂಡದ ಮೊತ್ತ ಪಾವತಿಸುವಂತೆ ಸೂಚಿಸಿ ಬಿಎಂಟಿಸಿಗೆ ಪತ್ರ ಬರೆಯಲಾಗಿದೆ’ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು