ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಆರ್‌ಎ ಕುರ್ಚಿ ಕಿತ್ತಾಟ: ಕಚೇರಿಗೆ ಬೀಗ!

ರಜೆ ಹಾಕಿ ಸರ್ಕಾರಿ ವಾಹನವನ್ನೂ ಕೊಂಡೊಯ್ದ ಅಧಿಕಾರಿ
Published 29 ಜುಲೈ 2023, 0:08 IST
Last Updated 29 ಜುಲೈ 2023, 0:08 IST
ಅಕ್ಷರ ಗಾತ್ರ

–ವಿ.ಎಸ್‌. ಸುಬ್ರಹ್ಮಣ್ಯ

ಬೆಂಗಳೂರು: ವರ್ಗಾವಣೆ ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆ ನೀಡುತ್ತಿದ್ದಂತೆಯೇ ಕೆಎಎಸ್‌ ಅಧಿಕಾರಿ ಪ್ರಜ್ಞಾ ಅಮ್ಮೆಂಬಳ ಅವರು ಬೆಂಗಳೂರು ಅನೌಪಚಾರಿಕ ಪಡಿತರ ವಲಯದ (ಐಆರ್‌ಎ) ಹೆಚ್ಚುವರಿ ನಿರ್ದೇಶಕರ ಕಚೇರಿ ಬಾಗಿಲಿಗೆ ಬೀಗ ಹಾಕಿ ರಜೆ ಮೇಲೆ ತೆರಳಿದ್ದಾರೆ!

ಪ್ರಜ್ಞಾ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರ ಕಚೇರಿಯಲ್ಲಿರುವ ಐಆರ್‌ಎ– ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿ ಜುಲೈ 6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಅದೇ ದಿನ ಕಚೇರಿಗೆ ಬಂದಿದ್ದ ಅವರು, ಹಾಲಿ ಈ ಹುದ್ದೆಯಲ್ಲಿರುವ ಕೆಎಎಸ್‌ ಅಧಿಕಾರಿ ವಿ. ಪಾತರಾಜು ಅವರ ಅನುಪಸ್ಥಿತಿಯಲ್ಲೇ ಅಧಿಕಾರ ಸ್ವೀಕರಿಸಿದ್ದರು.

ವರ್ಗಾವಣೆ ಪ್ರಶ್ನಿಸಿ ಜುಲೈ 7ರಂದು ಕೆಎಟಿಗೆ ಅರ್ಜಿ ಸಲ್ಲಿಸಿರುವ ಪಾತರಾಜು, ‘ಕನಿಷ್ಠ ಎರಡು ವರ್ಷಗಳ ಅವಧಿಗೆ ಮುನ್ನ ವರ್ಗಾವಣೆ ಮಾಡುವಂತಿಲ್ಲ ಮತ್ತು ವರ್ಗಾವಣೆ ಮಾಡಿದಾಗ ಹುದ್ದೆ ತೋರಿಸುವುದು ಕಡ್ಡಾಯ ಎಂದು 2013ರ ಜೂನ್‌ 7ರಂದು ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ನನ್ನನ್ನು ವರ್ಗಾವಣೆ ಮಾಡಲಾಗಿದೆ. 2013ರ ಆದೇಶದ ಅನುಸಾರ ನನ್ನನ್ನು ಹುದ್ದೆಯಲ್ಲಿ ಮುಂದುವರಿಸಬೇಕು’ ಎಂದು ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ಆರಂಭಿಸಿದ ಕೆಎಟಿ, ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಜುಲೈ 7ರಂದು ಮಧ್ಯಂತರ ಆದೇಶ ನೀಡಿತ್ತು. ಅರ್ಜಿದಾರ ಪಾತರಾಜು ಮಧ್ಯಂತರ ಆದೇಶದ ಪ್ರತಿಯನ್ನು ಪ್ರಜ್ಞಾ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಲುಪಿಸಿ, ಹುದ್ದೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಡುವಂತೆ ಕೋರಿದ್ದರು. ಇದಾದ ಬಳಿಕ 15 ದಿನಗಳ ರಜೆ ಪಡೆದಿರುವ ಪ್ರಜ್ಞಾ, ಹೆಚ್ಚುವರಿ ನಿರ್ದೇಶಕರ ಕಚೇರಿಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಜತೆಗೆ ಇಲಾಖೆಯ ವಾಹನವನ್ನೂ ಕೊಂಡೊಯ್ದಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೆಎಟಿ ಮಧ್ಯಂತರ ಆದೇಶದಂತೆ ಹುದ್ದೆ ಬಿಟ್ಟುಕೊಟ್ಟಿಲ್ಲ ಎಂದು ಪಾತರಾಜು ಅವರು ಪ್ರಜ್ಞಾ ಅವರ ವಿರುದ್ಧ ಕೆೆಎಟಿಯಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನೂ ದಾಖಲಿಸಿದ್ದರು. ಜುಲೈ 12, 17 ಮತ್ತು 19ರಂದು ಮುಖ್ಯ ಅರ್ಜಿಯ ವಿಚಾರಣೆ ನಡೆದಿತ್ತು. ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ಟಿ. ನಾರಾಯಣಸ್ವಾಮಿ ಮತ್ತು ಎಸ್‌.ಕೆ. ಪಟ್ಟನಾಯಕ್‌ ಅವರಿದ್ದ ಪೀಠ, ಅಂತಿಮ ಆದೇಶ ಪ್ರಕಟಿಸುವವರೆಗೂ ವರ್ಗಾವಣೆಗೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿದೆ.

ಪಕ್ಕದ ಕೊಠಡಿಯಲ್ಲೇ ಕೆಲಸ: ಹೆಚ್ಚುವರಿ ನಿರ್ದೇಶಕರ ಹುದ್ದೆಯ ಅಧಿಕಾರವನ್ನು ಪ್ರಜ್ಞಾ ಅವರು ಅಧಿಕೃತವಾಗಿ ಬಿಟ್ಟುಕೊಡದಿದ್ದರೂ, ಕೆಎಟಿ ಆದೇಶದ ಅನುಸಾರ ಪಾತರಾಜು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಆದರೆ, ಕಚೇರಿ ಬಾಗಿಲಿಗೆ ಬೀಗ ಬಿದ್ದಿರುವುದರಿಂದ ಪಕ್ಕದ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತೆ ಎಂ. ಕನಗವಲ್ಲಿ ಅವರಿಗೆ ಪತ್ರವೊಂದನ್ನು ನೀಡಿರುವ ಪಾತರಾಜು, ‘ಕೆಎಟಿ ಆದೇಶದಂತೆ ಪ್ರಜ್ಞಾ ಅವರು ಹುದ್ದೆಯನ್ನು ಬಿಟ್ಟುಕೊಟ್ಟಿಲ್ಲ. ನ್ಯಾಯಾಲಯದ ಆದೇಶದಂತೆ ನಾನು ಹುದ್ದೆಯಲ್ಲಿ ಮುಂದುವರಿದಿದ್ದೇನೆ. ಕಚೇರಿ ಬಾಗಿಲಿಗೆ ಬೀಗ ಹಾಕಿರುವುದರಿಂದ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಸರ್ಕಾರಿ ವಾಹನವನ್ನೂ ಅವರು ಕೊಂಡೊಯ್ದಿದ್ದು, ನಾನು ಸಾರ್ವಜನಿಕ ಸಾರಿಗೆ ಬಳಸಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ’ ಎಂಬ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಪ್ರಜ್ಞಾ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ಅವರ ಮೊಬೈಲ್‌ ಸಂಖ್ಯೆ ‘ಸ್ವಿಚ್ಡ್‌ ಆಫ್‌ ಆಗಿದೆ’ ಎಂಬ ಸಂದೇಶ ಬಂತು. ಪಾತರಾಜು ಅವರನ್ನೂ ಸಂಪರ್ಕಿಸಿದಾಗ, ‘ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT