ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸಮಿತಿ ಮುಂದೆ ಅರ್ಜಿ ಮಂಡನೆಗೆ ನಿರ್ದೇಶನ

ಅಭಿವೃದ್ಧಿ ಕಾಮಗಾರಿಗೆ ಮರ ತೆರವು ಆಕ್ಷೇಪ
Last Updated 4 ಮಾರ್ಚ್ 2020, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ಮೆಟ್ರೊ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸುವ ಕುರಿತ ಎಲ್ಲ ಅರ್ಜಿಗಳನ್ನು ವಿಶೇಷ ಸಮಿತಿಯ ಮುಂದೆ ಮಂಡಿಸಿ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ದತ್ತಾತ್ರೇಯ ಟಿ.ದೇವರೆ ಮತ್ತು ‘ಬೆಂಗಳೂರು ಪರಿಸರ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಮೆಟ್ರೊ ಕಾಮಗಾರಿಗೆ ಮರಗಳನ್ನು ತೆರವುಗೊಳಿಸಲು ಉದ್ದೇಶಿಸಿರುವ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ವಿಶೇಷ ಸಮಿತಿ ಮುಂದೆ ಪೂರಕ ದಾಖಲೆಗಳೊಂದಿಗೆ ಮಂಡಿಸಬೇಕು. ಸಮಿತಿ ಸದಸ್ಯರು ಸ್ಥಳ ಪರಿಶೀಲನೆ ನಡೆಸಬೇಕು. ಅನುಮೋದಿತ ಅಲೈನ್‌ಮೆಂಟ್‌ಗೆ ಯಾವುದೇ ಅಡ್ಡಿಯಾಗದಂತೆ ಮರಗಳನ್ನು ಹೇಗೆ ಉಳಿಸಬಹುದು ಎಂಬ ಅಂಶ ಸಮಿತಿಯ ಆದ್ಯತೆಯಾಗಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಒಂದೇ ಒಂದು ಮರ ಉಳಿಸಿದರೂ, ಸಮಿತಿ ಹಾಗೂ ಮರ ಪ್ರಾಧಿಕಾರ ರಚನೆ ಸಾರ್ಥಕಗೊಂಡಂತೆ. ಸ್ಥಳ ಪರಿಶೀಲನೆ ಕಾರ್ಯವು ಸಮಿತಿಯು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಶಿಫಾರಸುಗಳೊಂದಿಗೆ ಮರ ಅಧಿಕಾರಿಗೆ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ಮರ ಅಧಿಕಾರಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ತಿಳಿಸಿದೆ.

‘ಮರ ಅಧಿಕಾರಿಯ ಆದೇಶ ಹೊರಬಿದ್ದ ದಿನದಿಂದ 15 ದಿನಗಳವರೆಗೆ ಅದನ್ನು ಕಾರ್ಯಗತಗೊಳಿಸಬಾರದು. ಈ ಅವಧಿಯಲ್ಲಿ ಆದೇಶದ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಬೇಕು. ಅವರೂ ಪರಿಶೀಲನೆ ನಡೆಸಲು ಅವಕಾಶ ನೀಡಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ಮರ ಗಣತಿಗಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಮತ್ತು ಬಿಬಿಎಂಪಿಗೆ ವ್ಯಾಪ್ತಿಗೆ ಒಳಪಡದ ಮರಗಳ ಗಣತಿಗೆ ಇಬ್ಬರು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯ 4,800 ಮರಗಳ ಗಣತಿ ನಡೆಸಲಾಗಿದೆ. ಮರಗಳ ಗಣತಿಗೆ ಪೂರಕವಾಗಿ ಮೊಬೈಲ್ ಆ್ಯಪ್ ತಯಾರಿಸಲಾಗಿದೆ’ ಎಂದು ವಿವರಿಸಿದರು. ವಿಚಾರಣೆಯನ್ನು ಎಪ್ರಿಲ್ 17ಕ್ಕೆ ಮುಂದೂಡಲಾಗಿದೆ.

ಆರೋಪ ಏನು?: ‘ಮೆಟ್ರೊ ರೈಲು ಮಾರ್ಗ ನಿರ್ಮಾಣವೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂಬುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT