ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಕ್‌ ಟರ್ಮಿನಲ್‌ ಹಗರಣ | 4 ನಿವೇಶನ ಖರೀದಿಸಿದ್ದ ವೀರಯ್ಯ

ಸಂಬಂಧಿ ಖಾತೆಗೆ ಹಣ ಜಮೆ ಮಾಡಿಸಿದ್ದ ಎಸ್‌.ಶಂಕರಪ್ಪ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಯಮಿತದಲ್ಲಿ ನಡೆದ ಹಗರಣದಲ್ಲಿ ಟರ್ಮಿನಲ್‌ನ ಮಾಜಿ ಅಧ್ಯಕ್ಷ, ವಿಧಾನ ಪರಿಷತ್‌ ಬಿಜೆಪಿಯ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ ಹಾಗೂ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಎಸ್‌.ಶಂಕರಪ್ಪ ಅವರು ಅಕ್ರಮ ಎಸಗಿರುವುದು ದೃಢಪಟ್ಟಿದೆ ಎಂದು ಸಿಐಡಿ ತನಿಖಾಧಿಕಾರಿಗಳು ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ವೀರಯ್ಯ ಹಾಗೂ ಶಂಕರಪ್ಪ ಅವರು ಸರ್ಕಾರದ ಅನುದಾನವನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳಲು ಅಪರಾಧಿಕ ಒಳಸಂಚು ರೂಪಿಸಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು 82ನೇ ನಗರ ಸಿವಿಲ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

‘ಕಾರ್ಯದರ್ಶಿ ಸಾಕ್ಷಿ ವೆಂಕಟೇಶ್‌ ರಾವ್‌ ಅವರ ಮೇಲೆ ಒತ್ತಡ ಹೇರಿ ಕರಡು ನಡಾವಳಿಗಳಲ್ಲಿ ‘ಅಧ್ಯಕ್ಷರು ಸೂಚಿಸಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಿ ನಿರ್ಣಯಿಸಲಾಯಿತು’ ಎಂಬುದಾಗಿ ಹೆಚ್ಚುವರಿ ವಾಕ್ಯ ಸೇರಿಸಿ ಶಂಕರಪ್ಪ ಅವರು ಅಕ್ರಮ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಲಾಗಿದೆ.

ಹಣ ದುರುಪಯೋಗದ ಉದ್ದೇಶದಿಂದ ಒಂದೇ ಬಗೆಯ ಕಾಮಗಾರಿಯನ್ನು ತಲಾ ₹5 ಲಕ್ಷ ಮೌಲ್ಯದಂತೆ ಹಲವು ಭಾಗಗಳಾಗಿ ವಿಂಗಡಿಸಿ ತುಂಡು ಗುತ್ತಿಗೆ ನೀಡಲಾಗಿದೆ. ದರಪಟ್ಟಿ ಆಹ್ವಾನಿಸಿ 668 ಕಾಮಗಾರಿ ನಡೆಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ ಎಂಬ ಉಲ್ಲೇಖ ಆರೋಪಪಟ್ಟಿಯಲ್ಲಿದೆ.

‘ಎಸ್‌.ಎಸ್‌. ಎಂಟರ್‌ಪ್ರೈಸಸ್‌ನವರು ಯಶವಂತಪುರ, ದಾಸನಪುರ, ಧಾರವಾಡ, ಮೈಸೂರು ಟ್ರಕ್‌ ಟರ್ಮಿನಲ್‌ಗಳಲ್ಲಿ ಅಗ್ನಿ ಸುರಕ್ಷತಾ ಉಪಕರಣಗಳನ್ನು ಅಳವಡಿಸಿರುವುದಾಗಿ ₹2.6 ಕೋಟಿ ಮೊತ್ತದ ಸುಳ್ಳು ಬಿಲ್‌ ಸಲ್ಲಿಸಿದ್ದರು. ಕಾಮಗಾರಿ ನಡೆಯದಿದ್ದರೂ ಬಿಲ್ ಹಿಂಭಾಗದಲ್ಲಿ ಕಾಮಗಾರಿ ತೃಪ್ತಿಕರವಾಗಿದೆ ಎಂದು ಶಂಕರಪ್ಪ ಬರೆದಿದ್ದರು. ಜಿಎಸ್‌ಟಿ ಕಡಿತ ಮಾಡಿ ಎಂಟರ್‌ಪ್ರೈಸಸ್‌ನ ಬ್ಯಾಂಕ್‌ ಖಾತೆಗೆ ಚೆಕ್‌ ಮೂಲಕ ₹1.97 ಕೋಟಿ ವರ್ಗಾವಣೆ ಮಾಡಿದ್ದರು’ ಎಂದು ವಿವರಿಸಲಾಗಿದೆ.

‘ಎಸ್‌.ಎಸ್. ಎಂಟರ್‌ಪ್ರೈಸಸ್‌ನಿಂದ ದಂಕಾ ಟ್ರೇಡರ್ಸ್‌ ಆ್ಯಂಡ್‌ ಸೇಲ್ಸ್‌ನ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಖಾತೆಗೆ ₹31 ಲಕ್ಷ ವರ್ಗಾವಣೆ ಆಗಿತ್ತು. ದಂಕಾ ಟ್ರೇಡರ್ಸ್‌ನವರು ಎಂ.ಎಸ್‌.ಹೊನ್ನಪ್ಪ ಅವರ ಖಾತೆಗೆ ₹20 ಲಕ್ಷ ವರ್ಗಾವಣೆ ಮಾಡಿದ್ದರು. ಹೊನ್ನಪ್ಪ ಅವರು ಶಂಕರಪ್ಪ ಅವರ ಸಹೋದರ ಸಂಬಂಧಿ ಎಂದು ಗೊತ್ತಾಗಿದೆ’ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.  

ವೆನಿಷಾ ಎಂಟರ್‌ಪ್ರೈಸಸ್‌ನಿಂಂದ ₹2.13 ಕೋಟಿ ಹಣವು ಮೂರು ವರ್ತಕರ ಖಾತೆಗೆ ವರ್ಗಾವಣೆ ಆಗಿತ್ತು. ಅದರಲ್ಲಿ ಆರೋಪಿ ವೀರಯ್ಯ ಅವರ ಖಾತೆಗೆ ₹2 ಕೋಟಿ ಸಂದಾಯ ಆಗಿದ್ದು ತನಿಖೆಯಿಂದ ದೃಢಪಟ್ಟಿದೆ.

ಬಾಲಾಜಿ ಎಂಟರ್‌ರ್‌ಪ್ರೈಸಸ್‌ ವರ್ತಕರು, ಕೆನರಾ ಬ್ಯಾಂಕ್‌ನಲ್ಲಿರುವ ವೀರಯ್ಯ ಅವರ ಖಾತೆಗೆ ₹40 ಲಕ್ಷ ವರ್ಗಾವಣೆ ಮಾಡಿದ್ದರು. ಇಡೀ ಪ್ರಕರಣದಲ್ಲಿ ಶಂಕರಪ್ಪ ಅವರು ಸಹೋದರ ಸಂಬಂಧಿಗೆ ₹20 ಲಕ್ಷ ಹಾಗೂ ವೀರಯ್ಯ ಅವರಿಗೆ ₹3 ಕೋಟಿ ಅಕ್ರಮವಾಗಿ ಜಮೆಯಾಗಿದೆ ಎಂದು ಸಿಐಡಿ ಹೇಳಿದೆ.

‘ವೀರಯ್ಯ ಅವರು ಟೆಂಡರ್‌ ಆಹ್ವಾನಿಸದೇ ಕಾಮಗಾರಿಗಳನ್ನು ತುಂಡು ಗುತ್ತಿಗೆಗೆ ನೀಡಲು ನಿರ್ದೇಶಕ ಮಂಡಳಿ ನಿರ್ಣಯಿಸಿತ್ತು ಎಂಬುದಾಗಿ ನಡಾವಳಿ ಸೃಷ್ಟಿಸಿ, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ತಮ್ಮ ಖಾತೆಗೆ ವರ್ಗಾವಣೆಯಾಗಿದ್ದ ₹3 ಕೋಟಿ ಹಣದಲ್ಲಿ ಬೆಂಗಳೂರಿನ ಉಲ್ಲಾಳ ಗ್ರಾಮದ ಉಪಕಾರ್‌ ರೆಸಿಡೆನ್ಸಿಯಲ್ಲಿ ನಾಲ್ಕು ನಿವೇಶನ ಖರೀದಿಸಿದ್ದಾರೆ’ ಎಂದು ವಿವರಿಸಲಾಗಿದೆ.

ಶಂಕರಪ್ಪ 
ಶಂಕರಪ್ಪ 

ಮಧ್ಯವರ್ತಿಗಳಿಗೆ ಪಾವತಿಯಾದ ಹಣ ದಿನ ಪಾವತಿಸಿದ ಮಧ್ಯವರ್ತಿ;ದಿನ;ಮೊತ್ತ(ಲಕ್ಷಗಳಲ್ಲಿ)ಸ್ಟಾರ್‌ ಎಂಟರ್‌ ಪ್ರೈಸಸ್‌;2022ರ ಏಪ್ರಿಲ್‌ 4;70ಮುಂಖಿ ಟ್ರೇಡರ್ಸ್‌;2022ರ ಏಪ್ರಿಲ್‌ 12;70ಬಾಲಾಜಿ ಎಂಟರ್‌ ಪ್ರೈಸಸ್‌;2022ರ ಏಪ್ರಿಲ್‌ 13;60ಬಾಲಾಜಿ ಎಂಟರ್‌ ಪ್ರೈಸಸ್‌;2022ರ ಏಪ್ರಿಲ್‌ 19;40ಮ್ಯಾಟ್ರಿಕ್ಸ್‌ ಟೆಕ್‌ಟ್ರೇಡ್‌;2022ರ ಏಪ್ರಿಲ್‌ 22;60

ನಡೆಯದ 665 ಕಾಮಗಾರಿ ‘₹39.25 ಕೋಟಿ ಮೌಲ್ಯದ 665 ಕಾಮಗಾರಿಗಳಲ್ಲಿ ಅಕ್ರಮ ಆಗಿದೆ. ಎಸ್‌.ಎಸ್‌. ಎಂಟರ್‌ಪ್ರೈಸಸ್‌ಗೆ ₹14.30 ಕೋಟಿ ಮೊತ್ತದ 242 ಕಾಮಗಾರಿ ಮಯೂರ್‌ ಅಡ್ವರ್ಟೈಸಿಂಗ್‌ಗೆ ₹13.57 ಕೋಟಿ ಮೊತ್ತದ 230 ಕಾಮಗಾರಿ ಹಾಗೂ ವೆನಿಷಾ ಎಂಟರ್‌ಪ್ರೈಸಸ್‌ಗೆ ₹11.38 ಕೋಟಿ ಮೊತ್ತದ 193 ಕಾಮಗಾರಿ ನೀಡಲಾಗಿತ್ತು. ಕಚೇರಿ ಸಿಬ್ಬಂದಿಗೆ ತಿಳಿಯದಂತೆ ವಿಜಯನಗರದ ಬಡಾವಣೆಯ ಖಾಸಗಿ ಕಚೇರಿಯಲ್ಲಿ ಶಂಕರಪ್ಪ ಕುಳಿತು ಒಂದೇ ಬಾರಿಗೆ ಅನೇಕ ಕಡತಗಳಲ್ಲಿ ಟಿಪ್ಪಣಿ ಹಾಗೂ ಪಾವತಿ ಆದೇಶ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT