ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರನ್ನು ದೂರವಿಡಲು ಯತ್ನ: ಪತ್ರಕರ್ತ ಆಕಾರ್‌ ಪಟೇಲ್‌

‘ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವ–ಮುಂದಿನ ಹಾದಿ’ ಕುರಿತ ವಿಚಾರ ಸಂಕಿರಣ
Last Updated 13 ಡಿಸೆಂಬರ್ 2021, 3:43 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಸ್ಲಿಂ ಸಮುದಾಯವನ್ನು ರಾಜಕೀಯ ವಲಯದಿಂದ ದೂರ ಇರಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಪತ್ರಕರ್ತ ಆಕಾರ್‌ ಪಟೇಲ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ‘ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್ ಎಮಿಟಿ (ಎಫ್‌ಡಿಸಿಎ–ಕೆ)’ ಭಾನುವಾರ ಆಯೋಜಿಸಿದ್ದ ‘ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವ–ಮುಂದಿನ ಹಾದಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದ ಯಾವುದೇ ರಾಜ್ಯದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಇಲ್ಲ. 15 ರಾಜ್ಯಗಳಲ್ಲಿ ಯಾವುದೇ ಮುಸ್ಲಿಂ ಸಚಿವರಿಲ್ಲ. ಕೆಲವೇ ರಾಜ್ಯಗಳಲ್ಲಿ ಮುಸ್ಲಿಂ ಸಚಿವರಿದ್ದಾರೆ. ಆದರೆ, ಅವರಿಗೆ ವಕ್ಫ್‌ ಖಾತೆಗಳನ್ನಷ್ಟೇ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಶಾಸಕರು ಇಲ್ಲದ ಕಾರಣಕ್ಕೆ ವಕ್ಫ್‌ ಖಾತೆಯನ್ನು ಹಿಂದೂ ಸಮುದಾಯಕ್ಕೆ ನೀಡಲಾಗಿದೆ’ ಎಂದು ವಸ್ತುಸ್ಥಿತಿ ವಿವರಿಸಿದರು.

‘ರಾಜಕೀಯವಾಗಿ ಮುಸ್ಲಿಂ ಸಮುದಾಯವನ್ನು ಸೋಲಿಸಬೇಕು ಎಂದು ಜನಸಂಘದ ಮುಖ್ಯಸ್ಥರಾಗಿದ್ದ ದೀನ ದಯಾಳ ಉಪಾಧ್ಯಾಯ ಅವರು 1965ರಲ್ಲಿ ಭಾಷಣ ಮಾಡಿದ್ದರು. ಪ್ರಸ್ತುತ ಪರಿಸ್ಥಿತಿ ವಿಶ್ಲೇಷಿಸಿದಾಗ ಬಿಜೆಪಿ ಮತ್ತು ಜನಸಂಘ ತಮ್ಮ ಗುರಿ ಸಾಧಿಸಿರುವುದನ್ನು ಕಾಣಬಹುದು. ಎಲ್ಲ ರೀತಿಯ ಕೃತ್ಯಗಳಿಗೆ ಮುಸ್ಲಿಂ ಸಮುದಾಯವನ್ನೇ ಗುರಿ ಮಾಡಲಾಗುತ್ತಿದೆ. ಕೋವಿಡ್‌ ಹಬ್ಬಲು ಮುಸ್ಲಿಮರೇ ಕಾರಣ ಎನ್ನುವ ಆರೋಪ ಮಾಡಲಾಯಿತು’ ಎಂದು ಹೇಳಿದರು.

‘2014ರ ಬಳಿಕ ದೇಶದ ಆರ್ಥಿಕ ಸ್ಥಿತಿಯೂ ಕುಸಿತವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಆದರೆ, ಆಡಳಿತಕ್ಕೆ ಬಂದ ನಂತರ ಇದೇ ಯೋಜನೆಯನ್ನು ಮುಂದುವರಿಸಿ ಹಿಂದಿನ ಸರ್ಕಾರಕ್ಕಿಂತ 14 ಪಟ್ಟು ಹೆಚ್ಚು ಅನುದಾನ ನೀಡಿತು' ಎಂದರು.

ಜಮಾತ್ ಎ ಇಸ್ಲಾಮಿ ಹಿಂದ್‌ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತ್ ಉಲ್ಲಾ ಹುಸೈನಿ ಮಾತನಾಡಿ, ‘ವೈವಿಧ್ಯಮಯ ಮತ್ತು ಬಹು ಸಂಸ್ಕೃತಿ ಮತ್ತು ಭಾಷೆಗಳಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿರುವುದು ದೊಡ್ಡ ಸವಾಲು’ ಎಂದರು‘

‘ಸರ್ಕಾರದ ಟೀಕೆಗೆ ದೇಶದ್ರೋಹ ಪ್ರಕರಣ’

‘ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಇಂದು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರವನ್ನು ಟೀಕಿಸಿದರೆ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಎನ್‌ಕೌಂಟರ್‌ ಹೆಸರಿನಲ್ಲಿ ಅಮಾಯಕರನ್ನು ಸಾಯಿಸಲಾಗುತ್ತಿದೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT