ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ: ಮಂಗಳವಾರ ನಿರ್ಧಾರ- ಅಶೋಕ

ಈದ್ಗಾ ಮೈದಾನ: ಸಾಧಕ–ಬಾಧಕ ಪರಿಗಣಿಸಿ, ಎಚ್ಚರಿಕೆಯಿಂದ ಗಣೇಶೋತ್ಸವಕ್ಕೆ ಅವಕಾಶ ನೀಡಲು ತೀರ್ಮಾನ
Last Updated 27 ಆಗಸ್ಟ್ 2022, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಮುಂದಿನ ಮೂರು ದಿನಗಳ ಬೆಳವಣಿಗೆ ನೋಡಿಕೊಂಡು ಮಂಗಳವಾರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ಸ್ಪಷ್ಟಪಡಿಸಿದರು.

‘ವಕ್ಫ್ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮಾಹಿತಿ ಇದೆ. ಸರ್ಕಾರದ ವತಿಯಿಂದ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಕೆಯಾಗಿದೆ. ಮಂಗಳವಾರದ ತನಕ ಬೆಳವಣಿಗೆ ಗಮನಿಸುತ್ತೇವೆ’ ಎಂದು ಹೇಳಿದರು.

‘ಗಣಪತಿ ಪ್ರತಿಷ್ಠಾಪನೆಗೆ ಐದಾರು ಸಂಘಟನೆಗಳು ಮುಂದೆ ಬಂದಿವೆ. ಅವುಗಳಲ್ಲಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಮೈದಾನ ಪಕ್ಕದ ರಸ್ತೆ ಬದಿಯಲ್ಲಿ ಐದಾರು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿರುವ ಸಂಘಟನೆಗಳು ಪ್ರಮುಖವಾದವು. ಒಮ್ಮತದಿಂದ ಕೆಲಸ ಮಾಡುವಂತೆ ಎರಡೂ ಸಂಘಟನೆಗಳಿಗೆ ತಿಳಿಸಿದ್ದೇವೆ’ ಎಂದರು.

‘ಅನುಮತಿ ನೀಡಿದ ಬಳಿಕ ಅಹಿತಕರ ಘಟನೆಗೆ ಅವಕಾಶ ಆಗದಂತೆ ನೋಡಿಕೊಳ್ಳುವುದು ಸಂಘಟನೆಯ ಜವಾಬ್ದಾರಿ. ಆದ್ದರಿಂದ ಯಾರೇ ಮನವಿ ಕೊಟ್ಟರೂ ಸಾಧಕ–ಬಾಧಕ ಪರಿಶೀಲಿಸುತ್ತೇವೆ. ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಅನುಮತಿ ನೀಡುತ್ತೇವೆ. ಸುಗಮ ಸಂಗೀತ, ಭಕ್ತಿಗೀತೆ ಹೊರತುಪಡಿಸಿ ಬೇರೆ ಗೀತೆಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಜವಾಬ್ದಾರಿಯುತ ಸಂಘಟನೆಗೆ ಎಂದು ಕಂಡು ಬಮದರೆ ಮಾತ್ರ ಅವಕಾಶ ನೀಡಲಾಗುವುದು’ ಎಂದು
ಸ್ಪಷ್ಟಪಡಿಸಿದರು.

‘ಒಮ್ಮೆ ಅನುಮತಿ ನೀಡಿದರೆ ಅದು ನಿರಂತರವಾಗಿ, ಸುಲಲಿತವಾಗಿ ನಡೆಯಬೇಕು. ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಸಭೆಯಲ್ಲಿ ಹಾಜರಾಗಿದ್ದ ಸಂಘಟನೆಗಳು ಸಂಸದ ಪಿ.ಸಿ.ಮೋಹನ್ ಅವರಿಗೆ ಜವಾಬ್ದಾರಿ ನೀಡಿವೆ. ಅವರ ಜತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕಂದಾಯ ಇಲಾಖೆ ಕೈಗೊಳ್ಳಲಿದೆ’ ಎಂದರು.

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಸಭೆ

ಚಾಮರಾಜಪೇಟೆ ಮೈದಾನಕ್ಕೆ ಭೇಟಿ ನೀಡುವ ಮುನ್ನ ಗಣಪತಿ ಪ್ರತಿಷ್ಠಾಪನೆ ಸಾಧಕ–ಬಾಧಕಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜತೆ ಆರ್.ಅಶೋಕ ಸಭೆ ನಡೆಸಿ ಸಾಧಕ–ಬಾಧಕ ಚರ್ಚಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ನಗರ ಪೊಲೀಸ್ ಕಮಿಷನರ್ ಪ್ರತಾಪರೆಡ್ಡಿ, ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಗುಪ್ತದಳದ ಎಡಿಜಿಪಿ ಬಿ.ದಯಾನಂದ, ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಭೆಯಲ್ಲಿ
ಭಾಗವಹಿಸಿದ್ದರು.

ಬಳಿಕ ಮೈದಾನಕ್ಕೆ ಬಂದ ಸಚಿವರು, ನಾಗರಿಕ ಸಂಘಟನೆಗಳ ಜತೆಯೂ ಸಭೆ ನಡೆಸಿದರು. ನಂತರ ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರ ಜತೆ ಸೇರಿ ಕ್ರಿಕೆಟ್ ಆಡಿದರು.

‘ವಿಘ್ನ ನಿವಾರಿಸಿಕೊಳ್ಳುವ ಶಕ್ತಿ ಗಣಪತಿಗೆ ಇದೆ’

‘ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಪ್ರತಿಷ್ಠಾಪನೆಗೊಳ್ಳುವ ಶಕ್ತಿ ಗಣಪತಿಗೆ ಇದೆ’ ಎಂದು ಆರ್‌.ಅಶೋಕ ಹೇಳಿದರು.

ಮಂಗಳವಾರ ಅವಕಾಶ ನೀಡಿದರೆ ಒಂದೇ ದಿನದಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ, ‘ಎಲ್ಲವನ್ನೂ ಗಮನಿಸುತ್ತಿರುವ ಗಣಪತಿಗೆ ಸಿದ್ಧತೆ ಮಾಡಿಸುವುದು ದೊಡ್ಡ ವಿಷಯವಾಗದು’ ಎಂದು ಹೇಳಿದರು.

‘ಮುಜರಾಯಿ ಇಲಾಖೆಯ ಆಗಮ ಪಂಡಿತರ ಜತೆಯೂ ಮಾತನಾಡಿದ್ದೇನೆ. ಗಣಪತಿಯನ್ನು ಎಲ್ಲಿ ಪ್ರತಿಷ್ಠಾಪಿಸಬೇಕು, ಎಷ್ಟು ದಿನಗಳ ಬಳಿಕ ವಿಸರ್ಜನೆ ಮಾಡಬೇಕು ಎಂಬುದನ್ನು ಅವರು ತಿಳಿಸಿದ್ದಾರೆ. ಆ.30ರಂದು ಅನುಮತಿ ನೀಡಿದರೆ ಯಾವ ಸಂಘಟನೆಗೆ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT