ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಭಾರಿ ವಾಹನ ನಿಷೇಧ: ಕೆಳಗಿನ ರಸ್ತೆಗಳಿಗೆ ಒತ್ತಡ

ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಭಾರಿ ವಾಹನ ನಿಷೇಧ l ಲಘು ವಾಹನ ಸಂಚಾರ ಆರಂಭ
Last Updated 17 ಫೆಬ್ರುವರಿ 2022, 2:26 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ರಸ್ತೆಯ ಎಲಿವೇಟೆಡ್‌ ಕಾರಿಡಾರ್‌ನಲ್ಲಿ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಭಾರಿ ವಾಹನಗಳ ಸಂಚಾರವನ್ನು ನಿಷೇಧ ಮುಂದುವರಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

ನಗರದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರ ದಟ್ಟಣೆ ಅತಿ ಹೆಚ್ಚು (ಶೇ 29ರಷ್ಟು) ಇರುವುದು ಇದೇ ರಸ್ತೆಯಲ್ಲಿ. ಸರಕು ಸಾಗಣೆ ವಾಹನಗಳು ಈ ಮೇಲ್ಸೇತುವೆಯ ಮೂಲಕ ಹಾದು ಹೋಗಲು ಅವಕಾಶ ಕಲ್ಪಿಸದಿದ್ದರೆ, ಕೆಳಗಿನ ರಸ್ತೆಗಳು ಮತ್ತು ಸರ್ವಿಸ್‌ ರಸ್ತೆಗಳ ಮೇಲೆ ಸಂಚಾರ ದಟ್ಟಣೆಯ ಒತ್ತಡ ಹೆಚ್ಚಲಿದೆ.

ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹಾಗಾಗಿ ಈ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು 2021ರ ಡಿ. 25ರಿಂದ ನಿರ್ಬಂಧಿಸಲಾಗಿತ್ತು. ದುರಸ್ತಿ ಕಾಮಗಾರಿ ಬಳಿಕ ಈ ಮೇಲ್ಸೇತುವೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರ ತಂಡ ಪರಿಶೀಲಿಸಿದೆ. ಬುಧವಾರದಿಂದ ಲಘು ವಾಹನಗಳು ಈ ರಸ್ತೆಯನ್ನು ಬಳಸಬಹುದು. ಆದರೆ, ಭಾರಿ ವಾಹನ ಸಂಚಾರಕ್ಕೆ ಈ ಮೇಲ್ಸೇತುವೆ ಸುರಕ್ಷಿತವಲ್ಲ ಎಂದು ಐಐಎಸ್ಸಿ ತಜ್ಞರ ತಂಡ ಶಿಫಾರಸು ಮಾಡಿದೆ. ಹಾಗಾಗಿ ಬುಧವಾರದಿಂದಲೇ ಲಘು ವಾಹನಗಳು ಇದನ್ನು ಬಳಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಗರ ಭೂಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿದ್ದ ಸಮಗ್ರ ಸಂಚಾರ ಯೋಜನೆ ವರದಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ಹೆದ್ದಾರಿಗಳಲ್ಲಿ ನಗರಕ್ಕೆ ಸರಕು ಸಾಗಣೆ ವಾಹನಗಳು (ಟ್ರಕ್‌ ಮತ್ತು ಮಲ್ಟಿ ಆಕ್ಸಿಲ್‌ ವಾಹನಗಳು) ಅತಿ ಹೆಚ್ಚು ಪ್ರಮಾಣದಲ್ಲಿ ಪ್ರವೇಶಿಸುವುದು ತುಮಕೂರು ರಸ್ತೆ ಮೂಲಕ. ಹೊಸೂರು ರಸ್ತೆ ನಂತರದ ಸ್ಥಾನದಲ್ಲಿದೆ. ಈ ರಸ್ತೆಯನ್ನು ಬಳಸುವ ಶೇ 29ರಷ್ಟು ವಾಹನಗಳು ಭಾರಿ ವಾಹನಗಳಾಗಿವೆ. ಭಾರಿ ವಾಹನಗಳು ಮೇಲ್ಸೇತುವೆ ಬಳಸಲು ಸಾಧ್ಯವಾಗದಿದ್ದರೆ ಅದರಿಂದ ಭಾರಿ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಲಾರಿ ಮಾಲೀಕರು.

‘ಮೇಲ್ಸೇತುವೆಯ ಮೂಲಕ ಸಾಗಿದರೆ ಪ್ರತಿ ಲಾರಿಗೆ ನಾಲ್ಕರಿಂದ ಐದು ಲೀಟರ್‌ಗಳಷ್ಟು ಡೀಸೆಲ್‌ ಉಳಿತಾಯವಾಗುತ್ತದೆ. ಈ ಮೇಲ್ಸೇತುವೆಯನ್ನು ಬಳಸಲು ಅವಕಾಶ ನೀಡದಿದ್ದರೆ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದೆ. ಭಾರಿ ವಾಹನಗಳು ತಾಸುಗಟ್ಟಲೆ ರಸ್ತೆಯಲ್ಲೇ ಉಳಿಯಬೇಕಾಗುತ್ತದೆ. ಇದರಿಂದ ಭಾರಿ ಪ್ರಮಾಣದಲ್ಲಿ ಇಂಧನ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಕರ್ನಾಟಕ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಖಪ್ಪ ತಿಳಿಸಿದರು.

‘ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ಸರಕು ಸಾಗಿಸುವ ವಾಹನಗಳು ಈ ಮೇಲ್ಸೇತುವೆಯನ್ನೇ ಬಳಸುತ್ತವೆ. ಈಗ ಲಘು ವಾಹನಗಳ ಸಂಚಾರಕ್ಕೆ ಮೇಲ್ಸೇತುವೆಯನ್ನು ಮುಕ್ತಗೊಳಿಸಿದ್ದರಿಂದ ಶೇ 30ರಷ್ಟು ಸಮಸ್ಯೆ ಮಾತ್ರ ಬಗೆಹರಿದಿದೆ. ಈ ಮೇಲ್ಸೇತುವೆಯನ್ನು ಆದಷ್ಟು ಬೇಗ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ದಾಸರಹಳ್ಳಿ ಕ್ಷೇತ್ರದ ಒಳರಸ್ತೆಗಳ ಮೇಲೂ ಒತ್ತಡ ಹೆಚ್ಚಲಿದೆ’ ಎಂದು ಶಾಸಕ ಆರ್‌.ಮಂಜುನಾಥ್‌ ತಿಳಿಸಿದರು.

19.5 ಕಿ.ಮೀ ಉದ್ದದ ತುಮಕೂರು ರಸ್ತೆ ಕಾರಿಡಾರ್‌ ಅನ್ನು 12 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ₹ 775.7 ಕೋಟಿ ವೆಚ್ಚದ ಈ ಕಾಮಗಾರಿಯನ್ನು ನವಯುಗ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ನಿರ್ವಹಿಸಿತ್ತು. 4.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣವೂ ಈ ಯೋಜನೆಯ ಭಾಗವಾಗಿದೆ.2007ರ ಮೇ 9ರಂದು ಗುತ್ತಿಗೆ ಕರಾರು ಒಪ್ಪಂದ ನಡೆದಿತ್ತು. ಅದೇ ವರ್ಷನವೆಂಬರ್‌ 2ರಂದು ಈ ಕಾರಿಡಾರ್‌ನ ಕಾಮಗಾರಿ ಆರಂಭವಾಗಿತ್ತು. 2010ರ ಆಗಸ್ಟ್‌ನಲ್ಲಿ ಈ ಕಾರಿಡಾರ್‌ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿತ್ತು. ತುಮಕೂರು ರಸ್ತೆ ಕಾರಿಡಾರ್‌ 4.5 ಕಿ.ಮೀ ಉದ್ದದ ನಾಲ್ಕು ಪಥಗಳ ಎತ್ತರಿಸಿದ ಮಾರ್ಗ, ಉಳಿದ ಕಡೆ ಆರು ಪಥಗಳ ಹೆದ್ದಾರಿ ಹಾಗೂ ಇಕ್ಕೆಲಗಳಲ್ಲಿ ಸರ್ವಿಸ್‌ ರಸ್ತೆಗಳನ್ನು ಒಳಗೊಂಡಿದೆ.

ಕೇಬಲ್‌ ಸಮಸ್ಯೆ–ತಜ್ಞರು ಏನನ್ನುತ್ತಾರೆ?

‘ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‌ನಲ್ಲಿ ತೂತು ಮಾಡಿ ಕೇಬಲ್‌ ತೂರಿಸಿ ಎಳೆದು ಬೋಲ್ಟ್‌ ಹಾಕಲಾಗುತ್ತದೆ. ಕೇಬಲ್‌ಗಳನ್ನು ಎಳೆದು ಕಟ್ಟಿದ ಜಾಗವನ್ನು ಕಾಂಕ್ರೀಟ್‌ನಿಂದ ತುಂಬಿ ಗಟ್ಟಿಗೊಳಿಸಲಾಗುತ್ತದೆ. ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಅಳವಡಿಸಿದ ನಾಲ್ಕೈದು ಕೇಬಲ್‌ಗಳಲ್ಲಿ ಕೆಲವು ಶಿಥಿಲವಾಗಿರುವ ಸಾಧ್ಯತೆ ಇದೆ’ ಎಂದು ನಿವೃತ್ತ ಎಂಜಿನಿಯರ್‌ ಒಬ್ಬರು ವಿವರಿಸಿದರು.

‘ಇದನ್ನು ಕಳಪೆ ಕಾಮಗಾರಿ ಎಂದು ಹೇಳಲು ಆಗದು. ಕೇಬಲ್‌ಗುಣಮಟ್ಟದಿಂದ ಕೂಡಿರದಿದ್ದರೆ ಅಥವಾ ಅದರಲ್ಲಿ ದೋಷವಿದ್ದರೆ ಈ ರೀತಿ ಆಗುವ ಸಾಧ್ಯತೆ ಇದೆ. ಇದಕ್ಕೆ ಕೇಬಲ್‌ ಪೂರೈಸಿದ ಏಜೆನ್ಸಿಯೂ ಹೊಣೆಯಾಗುತ್ತದೆ’ ಎಂದರು.

‘ಕೇಬಲ್‌ಗಳು ಸೆಗ್ಮೆಂಟ್‌ಗಳ ತೂಕ ಹಾಗೂ ವಾಹನಗಳ ತೂಕಗಳೆರಡನ್ನೂ ತಾಳಿಕೊಳ್ಳಬೇಕು. ಈ ಸೇತುವೆಯನ್ನು ಎಷ್ಟು ತೂಕವನ್ನು ತಾಳಿಕೊಳ್ಳುವುದಕ್ಕೆ ವಿನ್ಯಾಸಗೊಳಿಸಲಾಗಿದೆಯೋ ಅದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ತೂಕವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಮೇಲ್ಸೇತುವೆಗಳು ಹೊಂದಿರುತ್ತವೆ. 72 ಟನ್‌ ತೂಕ ತಾಳಿಕೊಳ್ಳುವಂತೆ ಮೇಲ್ಸೇತುವೆಯನ್ನು ವಿನ್ಯಾಸಗೊಳಿಸಿದರೆ, ಅದು 110 ಟನ್‌ ತೂಕವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಕೇಬಲ್‌ಗಳು ಶಿಥಿಲಗೊಳ್ಳುವುದರ ಜೊತೆಗೆ ಸೆಗ್ಮೆಂಟ್‌ಗಳಲ್ಲೂ ಬಿರುಕು ಕಾಣಿಸಿಕೊಂಡಿದ್ದರೆ, ಅವುಗಳನ್ನು ದುರಸ್ತಿಪಡಿಸುವುದು ತುಂಬಾ ಕಷ್ಟ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ನಡೆದಿರುವ ಈ ಕಾಮಗಾರಿಯಲ್ಲಿ ಈ ರೀತಿ ಆಗಿದೆ ಎಂದರೆ ನಂಬಲಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ಬಿರುಕು ಕಾಣಿಸಿಕೊಂಡರೆ ಇಡೀ ಸೆಗ್ಮೆಂಟ್‌ ಅನ್ನು ಬದಲಾಯಿಸಬೇಕಾಗುತ್ತದೆ. ಹೊಸ ಕಾಮಗಾರಿ ಅನುಷ್ಠಾನ ಸುಲಭ, ಆದರೆ, ದುರಸ್ತಿ ಮಾಡುವುದು ಬಹಳ ಕಷ್ಟ’ ಎಂದರು.

‘ಟೋಲ್‌ ಸಂಗ್ರಹ ಕೈಬಿಡದಿದ್ದರೆ ಮುಷ್ಕರ’

‘ತುಮಕೂರು ರಸ್ತೆಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಒಂದೂವರೆ ತಿಂಗಳುಗಳಾಗಿವೆ. ಆದರೂ ಟೋಲ್‌ ಸಂಗ್ರಹ ಮುಂದುವರಿದಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಿಲ್ಲ. ಇನ್ನು ಸರಕು ಸಾಗಣೆ ವಾಹನಗಳಿಂದ ಇಲ್ಲಿ ಟೋಲ್‌ನಲ್ಲಿ ಪ್ರತಿ ಟ್ರಿಪ್‌ಗೆ ₹ 400ರಷ್ಟು ಶುಲ್ಕ ಸಂಗ್ರಹಿಸಲಾಗುತ್ತಿದೆ. ಇನ್ನು ಟೋಲ್‌ ಪಾವತಿಸಲು ಸಾಧ್ಯವಿಲ್ಲ. ಟೋಲ್‌ ಸಂಗ್ರಹ ಸ್ಥಗಿತಗೊಳಿಸದಿದ್ದರೆ ಲಾರಿ ಮಾಲೀಕರು ಮುಷ್ಕರ ನಡೆಸುವುದು ಅನಿವಾರ್ಯ’ ಎಂದುಜಿ.ಆರ್‌.ಷಣ್ಮುಖಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT