ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬಿಎಂಗೆ ನೇರ ವಿದ್ಯುತ್‌ ಸಂಪರ್ಕ

ನಮ್ಮ ಮೆಟ್ರೊ: ನಗರ ತಲುಪಿದ ಸುರಂಗ ಕೊರೆಯುವ ಎರಡು ಯಂತ್ರಗಳು
Last Updated 21 ಫೆಬ್ರುವರಿ 2020, 23:09 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಮೆಟ್ರೊ ಮಾರ್ಗ ಮತ್ತು ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಚೀನಾದಿಂದ ತರಿಸಲಾಗುತ್ತಿರುವ ಸುರಂಗ ಕೊರೆಯುವ ಯಂತ್ರಗಳು(ಟಿಬಿಎಂ) ಇದೇ ಮೊದಲ ಬಾರಿಗೆ ನೇರವಾಗಿ ವಿದ್ಯುತ್‌ ಬಳಸಿಕೊಂಡು ಕಾರ್ಯನಿರ್ವಹಿಸಲಿವೆ.

ಚೀನಾದಿಂದ ಚೆನ್ನೈಗೆ ಬಂದಿರುವ ಈ ಯಂತ್ರಗಳನ್ನು ನಗರಕ್ಕೆ ತರಲಾಗುತ್ತಿದೆ. ಈಗಾಗಲೇ ಎರಡು ಯಂತ್ರಗಳನ್ನು ಜೋಡಿಸಬಹುದಾದ ಬಿಡಿಭಾಗಗಳು ನಗರಕ್ಕೆ ಬಂದಿದ್ದು, ಕಬ್ಬನ್‌ ರಸ್ತೆಯ ರಕ್ಷಣಾ ಇಲಾಖೆಯ ಜಾಗದಲ್ಲಿ ಇಡಲಾಗಿದೆ. ಇದೇ ಜಾಗದಲ್ಲಿ ಬಿಡಿಭಾಗಗಳನ್ನು ಜೋಡಿಸಲಾಗುತ್ತದೆ. ಎರಡನೇ ಹಂತದಲ್ಲಿ ಈ ರೀತಿಯ ಒಟ್ಟು 9 ಯಂತ್ರಗಳನ್ನು ಬಳಸಲಾಗುತ್ತದೆ.

‘ನಮ್ಮ ಮೆಟ್ರೊ’ದ ಮೊದಲನೇ ಹಂತದ ಕಾಮಗಾರಿಯ ವೇಳೆಯೂ ಸುರಂಗ ಕೊರೆಯಲು ಈ ಯಂತ್ರಗಳನ್ನು ಬಳಸಲಾಗಿತ್ತು. ಆದರೆ, ಅವು ಡೀಸೆಲ್‌ ಎಂಜಿನ್‌ ಮೂಲಕ ಕಾರ್ಯನಿರ್ವಹಿಸುತ್ತಿದ್ದವು.

‘ಟಿಬಿಎಂಗಳ ಕಾರ್ಯನಿರ್ವಹಣೆಗೆ ಇದೇ ಮೊದಲ ಬಾರಿಗೆ ನೇರ ವಿದ್ಯುತ್‌ ಸಂಪರ್ಕ ಪಡೆಯಲಾಗುತ್ತದೆ. ಬೆಸ್ಕಾಂನೊಂದಿಗೆ ಈಗಾಗಲೇ ಮಾತುಕತೆ ನಡೆದಿದ್ದು, ಬೆಸ್ಕಾಂ ವಿದ್ಯುತ್‌ ಸಂಪರ್ಕ ನೀಡಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೇರ ವಿದ್ಯುತ್‌ನಿಂದಲೇ ಟಿಬಿಎಂಗಳು ಕಾರ್ಯನಿರ್ವಹಿಸಲಿವೆಯಾದರೂ, ಪರ್ಯಾಯವಾಗಿ ಡೀಸೆಲ್‌ ಎಂಜಿನ್‌ಗಳ ವ್ಯವಸ್ಥೆಯನ್ನೂ
ಮಾಡಲಾಗುತ್ತದೆ. ವಿದ್ಯುತ್‌ ಕೈಕೊಟ್ಟರೆ, ಡೀಸೆಲ್‌ ಎಂಜಿನ್‌ ಮೂಲಕವೂ ಟಿಬಿಎಂಗಳು ಕೆಲಸ ಮಾಡಲಿವೆ’ ಎಂದು ಹೇಳಿದರು.

ಡೀಸೆಲ್‌ ಬಳಸಿಕೊಂಡು ಕಾರ್ಯನಿರ್ವಹಿಸುವುದಕ್ಕಿಂತ, ನೇರ ವಿದ್ಯುತ್‌ ಸಂಪರ್ಕ ಪಡೆದು ಕೆಲಸ ಮಾಡುವುದು ತಾಂತ್ರಿಕವಾಗಿ ಹೆಚ್ಚು ಸರಳ ಮತ್ತು ಸುಲಭ ಆಗಿರಲಿದೆ.ಒಂದು ಟಿಬಿಎಂ ಕಾರ್ಯನಿರ್ವಹಿಸಲು 14 ಮೆಗಾವಾಟ್‌ ವಿದ್ಯುತ್‌ ಪೂರೈಸಬೇಕಾಗುತ್ತದೆ.

ಸಿಆರ್‌ಸಿಎಚ್‌ಐನಿಂದ ಖರೀದಿ: ಚೀನಾ ದೇಶದ ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರಿಯಿಂದ (ಸಿಆರ್‌ಸಿಎಚ್‌ಐ) ಈ ಯಂತ್ರಗಳನ್ನು ಖರೀದಿಸಲಾಗಿದೆ. ಒಂದು ಟಿಬಿಎಂನ ಬೆಲೆ ಅಂದಾಜು ₹75 ಕೋಟಿ.

ಎರಡನೇ ಹಂತದಲ್ಲಿ ಒಟ್ಟು 13 ಕಿ.ಮೀ. ಮೆಟ್ರೊ ಸುರಂಗ ಕಾರಿಡಾರ್‌ ನಿರ್ಮಾಣವಾಗಲಿದೆ. ಒಟ್ಟು ಎರಡು ಪ್ಯಾಕೇಜ್‌ಗಳ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಪಡೆದಿದ್ದು, ಮುಂಬೈನ ಆಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಮತ್ತು ಕೋಲ್ಕತ್ತಾದ ಐಟಿಡಿ ಸಿಮೆಂಟೇಶನ್‌ ಇಂಡಿಯಾ ತಲಾ ಒಂದು ಪ್ಯಾಕೇಜ್‌ನ ಗುತ್ತಿಗೆಯನ್ನು ಪಡೆದಿವೆ. ಈ ಕಾಮಗಾರಿ ಪೂರ್ಣಗೊಳಿಸಲು ಮೂರೂ ಕಂಪನಿಗಳಿಗೆ ಮೂರೂವರೆ ವರ್ಷ ಗಡುವು ನೀಡಲಾಗಿದೆ.

ವೈಶಿಷ್ಟ್ಯವೇನು ?
ಗಟ್ಟಿಯಾದ ಬಂಡೆಗಳನ್ನು ಒಡೆಯುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಅನಿವಾರ್ಯ ಇದ್ದಲ್ಲಿ ಮಾತ್ರ ಸಿಡಿಮದ್ದುಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ದಿನಕ್ಕೆ 2 ಮೀಟರ್‌ನಿಂದ 2.5 ಮೀಟರ್‌ನಷ್ಟು ಉದ್ದದ ಸುರಂಗ ಕೊರೆಯುವ ಸಾಮರ್ಥ್ಯ ಇವುಗಳಿಗಿದೆ.

ಸವಾಲುಗಳೇನು?
ಕಾಮಗಾರಿ ವೇಳೆ ಅಪಾರ ಪ್ರಮಾಣದ ಮಣ್ಣನ್ನು ಹೊರತೆಗೆಯಬೇಕಾಗುತ್ತದೆ. ಈ ಮಣ್ಣಿನ ವಿಲೇವಾರಿ ಸವಾಲಿನದ್ದಾಗಿರುತ್ತದೆ. 13 ಕಿ.ಮೀ. ಉದ್ದದ ಸುರಂಗ ಕೊರೆದರೆ ಭಾರಿ ಪ್ರಮಾಣದ ಮಣ್ಣನ್ನು ವಿಲೇವಾರಿ ಮಾಡಬೇಕಾಗುತ್ತದೆ. ಜನ ಆತಂಕಕ್ಕೆ ಒಳಗಾಗದಂತೆ, ಕಟ್ಟಡಗಳಿಗೂ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಾಗಿದೆ.

Caption

ಸುರಂಗ ಮಾರ್ಗ ನಿರ್ಮಾಣ ಪ್ಯಾಕೇಜ್‌ ವಿವರ

ಪ್ಯಾಕೇಜ್‌ 1

ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್‌ವರೆಗೆ 3.65 ಕಿ.ಮೀ. ಸುರಂಗ ಮಾರ್ಗ ನಿರ್ಮಿಸುವ ಈ ಪ್ಯಾಕೇಜ್‌ನ ಗುತ್ತಿಗೆಯನ್ನು ಮುಂಬೈನ ಆಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪಡೆದಿದೆ. ಈ ಮಾರ್ಗದ ನಿರ್ಮಾಣ ವೆಚ್ಚ ₹1,526.33 ಕೋಟಿ. ಮೂರು ಮೆಟ್ರೊ ನಿಲ್ದಾಣಗಳು ಈ ಮಾರ್ಗದಲ್ಲಿ ನಿರ್ಮಾಣಗೊಳ್ಳಲಿವೆ.

ಪ್ಯಾಕೇಜ್‌ 2

ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರದ 2.76 ಕಿ.ಮೀ. ಸುರಂಗ ಮಾರ್ಗ ಮತ್ತು ಎರಡು ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸುವ ಈ ಪ್ಯಾಕೇಜ್‌ನ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಪಡೆದಿದೆ. ನಿರ್ಮಾಣ ವೆಚ್ಚ ₹1,329 ಕೋಟಿ.

ಪ್ಯಾಕೇಜ್‌ 3

ಎಲ್‌ ಆ್ಯಂಡ್‌ ಟಿ ಕಂಪನಿಯೇ ಈ ಪ್ಯಾಕೇಜ್‌ನ ಗುತ್ತಿಗೆಯನ್ನೂ ಪಡೆದಿದ್ದು, ಇದರಡಿ ಶಿವಾಜಿನಗರದಿಂದ ಪಾಟರಿ ಟೌನ್‌ವರೆಗೆ 2.68 ಕಿ.ಮೀ.ನ ಸುರಂಗ ಮಾರ್ಗ ಮತ್ತು ಎರಡು ನಿಲ್ದಾಣಗಳು ನಿರ್ಮಾಣವಾಗಲಿವೆ. ವೆಚ್ಚ ₹1,259 ಕೋಟಿ.

ಪ್ಯಾಕೇಜ್‌–4

ಟ್ಯಾನರಿ ರಸ್ತೆಯಿಂದ ನಾಗವಾರದವರೆಗೆ 4.59 ಕಿ.ಮೀ. ಉದ್ದದ ಸುರಂಗ ಮಾರ್ಗ ಮತ್ತು ನಾಲ್ಕು ನಿಲ್ದಾಣಗಳ ನಿರ್ಮಾಣ ಗುತ್ತಿಗೆಯನ್ನು ಕೋಲ್ಕತ್ತದ ಐಟಿಡಿ ಸಿಮೆಂಟೇಶನ್‌ ಕಂಪನಿ ಪಡೆದಿದೆ. ಇದರ ನಿರ್ಮಾಣ ವೆಚ್ಚ ₹1,771.25 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT