ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.20 ಲಕ್ಷ ಲಂಚ: ಕೆಐಎಡಿಬಿ ಎಂಜಿನಿಯರ್‌ಗಳ ಬಂಧನ

Published 24 ನವೆಂಬರ್ 2023, 22:45 IST
Last Updated 24 ನವೆಂಬರ್ 2023, 22:45 IST
ಅಕ್ಷರ ಗಾತ್ರ

ಬೆಂಗಳೂರು: ಹಂಚಿಕೆಯಾಗಿದ್ದ ನಿವೇಶನದಲ್ಲಿ ಕಾರ್ಖಾನೆ ನಿರ್ಮಿಸಲು ಮಂಜೂರಾತಿ ನೀಡಲು ₹ 1.20 ಲಕ್ಷ ಲಂಚ ಪಡೆಯುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಇಬ್ಬರು ಎಂಜಿನಿಯರ್‌ಗಳನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೆಐಎಡಿಬಿಯ ಕಾರ್ಯನಿರ್ವಾಹಕ ಎಂಜಿನಿಯರ್‌–1 ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನವೀನ್‌ ತೋಟಗಂಟಿ ಮತ್ತು ಕಿರಿಯ ಎಂಜಿನಿಯರ್‌ ಜಿ.ಎಚ್‌. ಮಲ್ಲಾಪುರ ಬಂಧಿತರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ನಿವಾಸಿ ನಾರಾಯಣಸ್ವಾಮಿ ಎಂಬುವರಿಗೆ ಕೆಐಎಡಿಬಿಯು ನೆಲಮಂಗಲ ಸಮೀಪದ ಸೋಂಪುರದಲ್ಲಿ ನಿರ್ಮಿಸಿರುವ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆಯಾಗಿತ್ತು. ಅಲ್ಲಿ ಕಾರ್ಖಾನೆ ನಿರ್ಮಿಸಲು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಲು ₹ 1.5 ಲಕ್ಷ ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಬಳಿಕ ಚೌಕಾಸಿ ನಡೆಸಿದಾಗ ₹ 1.2 ಲಕ್ಷ ಕೊಟ್ಟರೆ ಮಂಜೂರಾತಿ ನೀಡುವುದಾಗಿ ಹೇಳಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ನಾರಾಯಣಸ್ವಾಮಿ ಅವರಿಂದ ಗುರುವಾರ ₹ 1.2 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಇಬ್ಬರನ್ನೂ ಬಂಧಿಸಿದರು.

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ–1 ಶ್ರೀನಾಥ್‌ ಜೋಶಿ ಮಾರ್ಗದರ್ಶನದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆನಂದ್‌ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

ನವೀನ್‌ ತೋಟಗಂಟಿ
ನವೀನ್‌ ತೋಟಗಂಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT