ಬೆಂಗಳೂರು: ರಾಯಚೂರಿಗೆ ₹ 1.12 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಸಾಗಣೆ ಮಾಡುತ್ತಿದ್ದವರಿಂದ ಸುಲಿಗೆ ಮಾಡಿದ್ದ ಇಬ್ಬರು ಕಾನ್‌ಸ್ಟೆಬಲ್ ಸೇರಿ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್, ರಾಯಚೂರು ಜಿಲ್ಲೆ ಹಾಲಬಾವಿ ತಾಂಡಾದ ನಿವಾಸಿ ಮೌನೇಶ್ (30) ಹಾಗೂ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್, ಲಿಂಗಸಗೂರು ತಾಲ್ಲೂಕಿನ ಸಿದ್ದಪ್ಪ ಹಾಗೂ ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ತಾಂಡಾದ ನಿವಾಸಿ, ಕಾರ್ಮಿಕ ಮೌನೇಶ್ ಅಲಿಯಾಸ್ ಸೀತಾರಾಂ (28) ಬಂಧಿತರು.
ಬಂಧಿತರಿಂದ 1,761 ಗ್ರಾಂ ಚಿನ್ನದ ಬಿಸ್ಕತ್, 260 ಗ್ರಾಂ ಚಿನ್ನಾಭರಣ, 1,180 ಗ್ರಾಂ ಬೆಳ್ಳಿ ಆಭರಣ, ₹ 19 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಕಾರು ಚಾಲಕರನ್ನು ಬೆಂಗಳೂರಿಗೆ ಚಿನ್ನದಗಟ್ಟಿ ತರಲು ರಾಯಚೂರಿನ ಮೂವರು ಚಿನ್ನದ ವ್ಯಾಪಾರಿಗಳು ಹಣ ಸಹಿತ ಕಳುಹಿಸಿದ್ದರು.
ಖಾದಿರ್ ಷಾಷಾ ಅವರ ಕಾರು ಚಾಲಕ ಅಬ್ದುಲ್ ರಜಾಕ್, ಜಿ.ಮಲ್ಲಿಕಾರ್ಜುನ್ ಅವರ ಸಹಾಯಕ ಮಲ್ಲಯ್ಯ, ದಿನೇಶ್ ಅವರ ಸಹಾಯಕ ಸುನಿಲ್ ಕುಮಾರ್ ನಗರಕ್ಕೆ ಬಂದಿದ್ದರು. ಮಾರ್ಚ್ 11ರಂದು ನಗರದ ರಾಜಾ ಮಾರುಕಟ್ಟೆಗೆ ಬೆಳಿಗ್ಗೆ ತೆರಳಿ ಚಿನ್ನದ ವ್ಯಾಪಾರಿಗಳಿಗೆ ಹಣ ನೀಡಿದ್ದರು. ಅಂದೇ ಸಂಜೆ ಬಂದು ಚಿನ್ನದಗಟ್ಟಿ ಪಡೆದುಕೊಳ್ಳುವಂತೆ ವ್ಯಾಪಾರಸ್ಥರು ತಿಳಿಸಿದ್ದರು. ಸಂಜೆ 7ರ ಸುಮಾರಿಗೆ ಮೂವರೂ ಚಿನ್ನದಗಟ್ಟಿ, ಚಿನ್ನಾಭರಣ ಪಡೆದು ಆನಂದ್‌ರಾವ್ ವೃತ್ತದ ಬಳಿ ಶೌಚಾಲಯಕ್ಕೆ ತೆರಳುವಾಗ ಇವರನ್ನು ಆರೋಪಿಗಳು ಅಡ್ಡಗಟ್ಟಿದ್ದರು.
2 ಕೆ.ಜಿ 200 ಗ್ರಾಂ ಚಿನ್ನದಗಟ್ಟಿ ಸುಲಿಗೆ ಮಾಡಿ ಮಲ್ಲಯ್ಯ ಅವರನ್ನು ರೇಸ್‌ಕೋರ್ಸ್ ಬಳಿಯ ಕಾಂಗ್ರೆಸ್ ಕಚೇರಿ ಎದುರು, ಅಬ್ದುಲ್ ರಜಾಕ್ ಅವರನ್ನು ನೆಹರೂ ತಾರಾಲಯದ ಬಳಿ ಬಿಟ್ಟು ಹೋಗಿದ್ದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.
‘ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ್ ಅಲಿಯಾಸ್ ಸೀತಾರಾಂ ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಕಾನ್‌ಸ್ಟೆಬಲ್ ಮೌನೇಶ್ ಹಾಗೂ ಕಾರ್ಮಿಕನ ನಡುವೆ ಮೊದಲೇ ಪರಿಚಯವಿತ್ತು. ಚಿನ್ನದಗಟ್ಟಿ ತರಲು ಬೆಂಗಳೂರಿಗೆ ಹಣ ಸಮೇತ ತೆರಳಿದ್ದ ಮಾಹಿತಿ ತಿಳಿದು ಸುಲಿಗೆ ಮಾಡಲು ಮೂವರು ಯೋಜನೆ ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಕಾನ್‌ಸ್ಟೆಬಲ್ ಅಮಾನತು
ಬೆಂಗಳೂರು: ಮನೆ ಕಳವು ಪ್ರಕರಣದಲ್ಲಿ ಆರೋಪಿಗಳಿಗೆ ನೆರವು ನೀಡಿದ್ದ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಯಲ್ಲಪ್ಪ ಅವರನ್ನು ಅಮಾನತು ಮಾಡಲಾಗಿದೆ. ಯಲ್ಲಪ್ಪ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
‘ಮನೆ ಕಳವು ಪ್ರಕರಣದಲ್ಲಿ ಬನಶಂಕರಿ ಠಾಣೆಯ ಪೊಲೀಸರು ಒಂದು ತಂಡವನ್ನು ಬಂಧಿಸಿದ್ದರು. ಯಲ್ಲಪ್ಪ ಅವರು ಕಳವು ಪ್ರಕರಣದಲ್ಲಿ ಸಹಾಯ ಮಾಡಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದರು. ಮೇಲ್ನೋಟಕ್ಕೆ ಯಲ್ಲಪ್ಪ ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ, ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.